Advertisement

ಪಣಕಜೆ: ಟ್ಯಾಂಕರ್‌ನಿಂದ ಅನಿಲ ಸೋರಿಕೆ

06:00 AM Mar 10, 2018 | |

ಮಡಂತ್ಯಾರು/ ಬೆಳ್ತಂಗಡಿ: ಗುರುವಾಯನ ಕೆರೆ-ಮಡಂತ್ಯಾರು ನಡುವಿನ ಪಣಕಜೆ ಸಮೀಪ ಶುಕ್ರ ವಾರ ಆಟೋ ಎಲ್‌ಪಿಜಿ ಟ್ಯಾಂಕರ್‌ನಿಂದ ಅನಿಲ ಸೋರಿಕೆ ಯಾಗಿ ಸ್ಥಳೀಯ ರಲ್ಲಿ ಆತಂಕ ಮೂಡಿಸಿದ ಘಟನೆ ನಡೆದಿದೆ.

Advertisement

ಬೆಂಗಳೂರಿನಿಂದ ಮಂಗಳೂರಿಗೆ 11 ಟನ್‌ ಗ್ಯಾಸ್‌ ತುಂಬಿಕೊಂಡು ಸಾಗು ತ್ತಿದ್ದ ಟ್ಯಾಂಕರ್‌ ಉಜಿರೆ ಇಂಡಿಯನ್‌ ಆಟೋ ಗ್ಯಾಸ್‌ ಪಂಪ್‌ ನಲ್ಲಿ 4 ಟನ್‌ ಗ್ಯಾಸ್‌ ಖಾಲಿ ಮಾಡಿ ಮಂಗಳೂರಿಗೆ ಪ್ರಯಾಣ ಮುಂದುವರಿಸಿತ್ತು. 

ಒತ್ತಡ ಹೆಚ್ಚಿ ಸೋರಿಕೆ
ಟ್ಯಾಂಕರ್‌ನಲ್ಲಿ ಅರ್ಧದಷ್ಟು ಗ್ಯಾಸ್‌ ಇದ್ದು, ಚಲಿಸುತ್ತಿದ್ದ ವೇಳೆ ಒತ್ತಡ ಹೆಚ್ಚಿ ಸೇಫ್ಟಿ ವಾಲ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡು ಸೋರಿಕೆ ಆರಂಭವಾಗಿದೆ. ಚಾಲಕ ಅರುಣ್‌ ಮತ್ತು ಸ್ಥಳೀಯರಾದ ನೌಫಲ್‌, ರಿಯಾಜ್‌, ನಜೀರ್‌ ಟ್ಯಾಂಕರ್‌ ಮೇಲೇರಿ ಮರದ ತುಂಡಿನಿಂದ ಸೇಫ್ಟಿ ವಾಲ್‌ಗೆ ಬಡಿದು ಹೆಚ್ಚಿನ ಸೋರಿಕೆ ಯನ್ನು ತಪ್ಪಿಸಿದ್ದಾರೆ. ಸುಮಾರು 500ರಿಂದ 600 ಲೀ. ಗ್ಯಾಸ್‌ ಸೋರಿಕೆಯಾಗಿದೆ ಎನ್ನಲಾಗಿದೆ.

ಮುಂಜಾಗ್ರತೆ: ಶಾಲೆಗೆ ರಜೆ
ಅನಿಲ ಸೋರಿಕೆ ತಿಳಿಯುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ಸ್ಥಳಿಯ ಕುವೆಟ್ಟು ಶಾಲಾ ಮಕ್ಕಳನ್ನು ಮನೆಗೆ ಕಳಿಸಲಾಯಿತು. ಸ್ಥಳೀಯ ಶಾಲಾ ಕಾಲೇಜುಗಳಿಗೆ ಮಾಹಿತಿ ನೀಡಲಾಯಿತು. ಈ ಭಾಗದಲ್ಲಿ ವಿದ್ಯುತ್‌ ಕಡಿತಗೊಳಿಸಲಾಯಿತು.

ಕಾರ್ಯಾಚರಣೆ
ಟ್ಯಾಂಕರ್‌ ನಿಲುಗಡೆಯಾದ ಬಳಿಕ ಬೆಳ್ತಂಗಡಿಯ 2 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಪ್ರಾರಂಭಿಸಿದವು. ಬಳಿಕ ಬಂಟ್ವಾಳ ದಿಂದ ಇನ್ನೆರಡು ಅಗ್ನಿಶಾಮಕ ವಾಹನ  ತರಿಸಲಾಯಿತು. ಸ್ಥಳೀಯರ ಸಹಕಾರ ಮತ್ತು ಅಧಿಕಾರಿಗಳ ತುರ್ತು ಸ್ಪಂದನೆಯಿಂದ ಭಾರೀ ಅನಾಹುತ ತಪ್ಪಿದೆ. ಅಗ್ನಿಶಾಮಕ ದಳದ ಒಟ್ಟು 19 ಮಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ನೆಲ್ಯಾಡಿಯ ಎಚ್‌ಪಿಸಿಎಲ್‌ ಪ್ರತಿ ಸ್ಪಂದನೆ ವಿಭಾಗದ ಸಿಬಂದಿ ಆಗಮಿಸಿ ಮುಚ್ಚಳ ಭದ್ರ ಪಡಿಸಿದ ಬಳಿಕ ವಾಹನ ವನ್ನು ಮಂಗಳೂರಿಗೆ ಕೊಂಡೊಯ್ಯಲಾಯಿತು.

Advertisement

ಮಂಗಳೂರಿನ ಎಚ್‌ಪಿಸಿಎಲ್‌, ಐಒಸಿ ಅಧಿಕಾರಿಗಳು, ಪುಂಜಾಲಕಟ್ಟೆ ಪೊಲೀಸರು ಮತ್ತು ಬೆಳ್ತಂಗಡಿ ಪೊಲೀಸರು ಸ್ಥಳಕ್ಕಾಗಮಿಸಿ ಸಹಕರಿಸಿದರು.

ಸಂಚಾರದಲ್ಲಿ ವ್ಯತ್ಯಯ
ರಾಷ್ಟ್ರೀಯ ಹೆದ್ದಾರಿಯಾದ ಕಾರಣ ಮಧ್ಯಾಹ್ನದ ವೇಳೆಗೆ ಮಂಗಳೂರು- ಉಜಿರೆ, ಧರ್ಮಸ್ಥಳ, ಬೆಂಗಳೂರು ಮೊದಲಾದ ಕಡೆ ತೆರಳುವ ವಾಹನ ಸಂಚಾರ ಹೆಚ್ಚಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಕೊಲ್ಪೆದ ಬೈಲ್‌ನಿಂದ ಮದ್ದಡ್ಕ ವರೆಗೆ ಮಧ್ಯಾಹ್ನ 2 ಗಂಟೆ ಯಿಂದ ಸಂಜೆ 6 ಗಂಟೆ ವರೆಗೆ ಸುಮಾರು ವಾಹನ ಸಂಚಾರ ಸ್ಥಗಿತ ಗೊಳಿಸಲಾಗಿತ್ತು. ವಾಹನಗಳು ಪರ್ಯಾಯ ಮಾರ್ಗಗಳಲ್ಲಿ ಪ್ರಯಾಣ ಬೆಳೆಸುವಂತಾಯಿತು. ಪರ್ಯಾಯ ಮಾರ್ಗ ಇಲ್ಲದಿದ್ದರೆ ಜನತೆ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತಿತ್ತು.

ಬದಲಿ ವ್ಯವಸ್ಥೆ
ಮಂಗಳೂರು- ಉಜಿರೆ-ಧರ್ಮ ಸ್ಥಳ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿತ್ತು. ಉಜಿರೆ- ಬೆಂಗಳೂರು/ ಧರ್ಮಸ್ಥಳಗಳಿಗೆ ತೆರಳುವ ಸಾರಿಗೆ ಮತ್ತು ಘನ ವಾಹನಗಳು ಮಡಂತ್ಯಾರಿನಿಂದ ಬಳ್ಳ ಮಂಜ,ಕಲ್ಲೇರಿ ರಸ್ತೆಯಾಗಿ ಗುರುವಾಯನ ಕೆರೆ ಮೂಲಕ ಸುಮಾರು 17 ಕಿ.ಮೀ. ಸುತ್ತುಬಳಸಿ ಪ್ರಯಾಣಿಸಿದವು. ದ್ವಿಚಕ್ರ ಮತ್ತು ಲಘು ವಾಹನಗಳನ್ನು ಮಡಂತ್ಯಾರು, ಕೊಲ್ಪೆದ ಬೈಲು ಮಾರ್ಗವಾಗಿ ಗರ್ಡಾಡಿ ಮೂಲಕ ಗುರುವಾಯನ ಕೆರೆ ಯತ್ತ ಕಳುಹಿಸಲಾಯಿತು.

ಸಮಯಪ್ರಜ್ಞೆ  ಪ್ರದರ್ಶಿಸಿದ ಚಾಲಕ
ಹಾಸನ ಮೂಲದ ಚಾಲಕ ಅರುಣ್‌, ನಿರ್ಜನ ಪ್ರದೇಶದಲ್ಲಿ ಟ್ಯಾಂಕರ್‌ ನಿಲ್ಲಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿತು. ಬೆಳ್ತಂಗಡಿ ದಾಟುತ್ತಿದ್ದಂತೆ ಗ್ಯಾಸ್‌ ವಾಸನೆ ಆರಂಭವಾಗಿ ಗುರುವಾಯನ ಕೆರೆ ಕಳೆದ ಬಳಿಕ ಅನಿಲ ಸೋರಿಕೆ ಯಾಗುತ್ತಿರುವುದು ಅರುಣ್‌ಗೆ ತಿಳಿಯಿತು. ಅನಿಲ ಸೋರಿಕೆಯಾಗುತ್ತಿದ್ದರೂ ವಾಹನ, ಜನ ಸಂಚಾರ ಕಡಿಮೆ ಇರುವ ಸ್ಥಳಕ್ಕಾಗಿ ಸುಮಾರು 3 ಕಿ.ಮೀ. ಕ್ರಮಿಸಿದ ಚಾಲಕ ಪಣಕಜೆ ಸಮೀಪ ನಿರ್ಜನ ಸ್ಥಳದಲ್ಲಿ ಟ್ಯಾಂಕರ್‌ ನಿಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next