Advertisement

ಗ್ಯಾಸ್‌ ಸಿಲಿಂಡರ್‌ ಸೋರಿಕೆ : ಬೆಂಕಿ ಆಕಸ್ಮಿಕ, 2.5 ಲ.ರೂ. ಮೌಲ್ಯದ ಸೊತ್ತು ನಷ್ಟ

12:47 AM Jun 15, 2022 | Team Udayavani |

ಉಡುಪಿ : ಆದಿಉಡುಪಿ ಮೂಡುಬೆಟ್ಟುವಿನ ಗೋಪಾಲ ಕೋಟ್ಯಾನ್‌ ಅವರ ಮನೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಸೋರಿಕೆಯಾಗಿ ಬೆಂಕಿ ತಗಲಿದ್ದು, ಸುಮಾರು 2.5 ಲ.ರೂ. ಮೌಲ್ಯದ ನಷ್ಟ ಸಂಭವಿಸಿದೆ.

Advertisement

ಮನೆಯಿಂದ ಹೊರಗಡೆ ಹೋಗಿದ್ದ ಅವರು ಸೋಮವಾರ ರಾತ್ರಿ ವಾಪಸ್‌ ಬಂದು ದೇವರಿಗೆ ದೀಪ ಹಚ್ಚಲೆಂದು ಹೋದಾಗ ಸೋರಿಕೆಯಾದ ಗ್ಯಾಸ್‌ನಿಂದ ಒಮ್ಮೆಲೆ ಮನೆ ಪೂರ್ತಿ ಬೆಂಕಿ ಉಂಟಾಯಿತು. ಒಮ್ಮೆಲೇ ಸ್ಫೋಟಗೊಂಡ ಬೆಂಕಿಯ ತೀವ್ರತೆಗೆ ಮನೆಯ ಪೀಠೊಪಕರಣಗಳು ಸುಟ್ಟು ಹೋಗಿವೆ. ಕಿಟಕಿಯ ಗಾಜುಗಳು ಒಡೆದು ಹೋಗಿದ್ದು, ಅಡುಗೆ ಕೋಣೆಯ ಪಾತ್ರೆ, ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ದೇವರ ಚಿತ್ರಗಳಿರುವ ಸ್ಟಾಂಡ್‌ ಚಾವಡಿಯಲ್ಲಿದ್ದರಿಂದ ಮನೆಯವರು ಕೂಡಲೇ ಹೊರ ಬರಲು ಸಾಧ್ಯವಾಯಿತು. ಗೋಪಾಲ ಕೋಟ್ಯಾನ್‌ ಮತ್ತು ಸಾವಿತ್ರಿ ಅವರು ಮಾತ್ರ ಈ ಸಂದರ್ಭ ಮನೆಯೊಳಗೆ ಇದ್ದು, ಅವರ ತಂದೆ ಮನೆಯ ಹೊರಗೆ ಇದ್ದುದರಿಂದ ಅವರಿಗೆ ಯಾವುದೇ ತೊಂದರೆ ಆಗಿಲ್ಲ. ಸಾವಿತ್ರಿ ಮತ್ತು ಗೋಪಾಲ ಕೋಟ್ಯಾನ್‌ ಇಬ್ಬರ ಕಾಲಿಗೂ ಸುಟ್ಟ ಗಾಯಗಳಾಗಿವೆ. ಮನೆಯ ಇನ್ನಿಬ್ಬರು ಸದಸ್ಯರು ಘಟನೆಯ ಸಂದರ್ಭ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.

ಬೆಂಕಿ ಹತ್ತಿಕೊಂಡ ಕೂಡಲೇ ಸಮಾಜ ಸೇವಕ ಈಶ್ವರ್‌ ಮಲ್ಪೆ ಅವರಿಗೆ ಕರೆ ಹೋಗಿದ್ದು, ಅವರು ಆ್ಯಂಬುಲೆನ್ಸ್‌ನೊಂದಿಗೆ ಧಾವಿಸಿ ಬಂದಿದ್ದರು.

ಅಷ್ಟರಲ್ಲಿ ಸ್ಥಳೀಯರು ಕೂಡ ಸೇರಿದ್ದು, ಅನಂತರ ಎಲ್ಲರೂ ಸೇರಿ ನೀರು ಹಾಯಿಸಿ ಬೆಂಕಿ ನಂದಿಸಿದರು. ಇವರ ಮನೆಗೆ ರಸ್ತೆ ಸಂಪರ್ಕ ಇಲ್ಲದ ಕಾರಣ ಅಗ್ನಿಶಾಮಕ ವಾಹನಕ್ಕೆ ತೆರಳಲು ಆಗಲಿಲ್ಲ.

Advertisement

ಮಲ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.

ಗದ್ದೆಯ ನಡುವೆ ಮನೆ
ಗೋಪಾಲ ಅವರ ಮನೆ ಗದ್ದೆಯ ನಡುವೆ ಇದ್ದು, ಅಲ್ಲಿಗೆ ಯಾವುದೇ ರಸ್ತೆ ಸಂಪರ್ಕ ಇಲ್ಲ. ಈ ಪರಿಸರದಲ್ಲಿ ಎರಡು ಮನೆಗಳು ಮಾತ್ರವೇ ಇವೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಹತ್ತಿರದ ಮನೆಯವರ ಪಂಪ್‌ನಿಂದ ನೀರು ಹಾಯಿಸಿ ನಿಯಂತ್ರಿಸಲು ಶ್ರಮಿಸಲಾಯಿತು.

ಬೆಕ್ಕುಗಳಿಗೂ ಗಾಯ
ಗೋಪಾಲ ಅವರ ಮನೆಯಲ್ಲಿ ಆರೇಳು ಬೆಕ್ಕುಗಳಿದ್ದು, ಒಮ್ಮೆಲೇ ಹತ್ತಿಕೊಂಡ ಬೆಂಕಿಯಿಂದ ಬೆಕ್ಕು ಗಳಿಗೂ ಗಾಯಗಳಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next