“ಒಂದು ಮೊಟ್ಟೆಯ ಕಥೆ’ ಸಿನಿಮಾ ನಿರ್ದೇಶನ ಮಾಡಿದ್ದ ರಾಜ್ ಬಿ ಶೆಟ್ಟಿ ಅವರ ನಿರ್ದೇಶನದ ಎರಡನೇ ಚಿತ್ರ “ಗರುಡ ಗಮನ ವೃಷಭ ವಾಹನ’ ಇಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಪ್ರೀಮಿಯರ್ ಶೋನಲ್ಲಿ ಸಿನಿಮಾ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರಕ್ಕೆ ರಕ್ಷಿತ್ ಶೆಟ್ಟಿಯವರ ಪರಂವಾ ಪಿಕ್ಚರ್ ಸಾಥ್ ನೀಡುತ್ತಿದೆ.
ತಮ್ಮ ಸಿನಿಮಾದ ಬಗ್ಗೆ ಮಾತನಾಡುವ ರಾಜ್ ಶೆಟ್ಟಿ, “ಸಾಮಾನ್ಯವಾಗಿ ಒಂದು ಸಿನಿಮಾ ಎಂದರೆ ಅನೇಕರಲ್ಲಿ ಒಂದು ಭಾವನೆ ಇದೆ. ಅದೇನೆಂದರೆ ಕೆಲವು ದೃಶ್ಯಗಳು ನಾವು ಅಂದುಕೊಂಡಂತೆಯೇ ಆಗುತ್ತದೆ ಎಂಬುದು. ಆ ತರಹದ ಒಂದು ನಿರ್ಧಾರಕ್ಕೆ ಬಂದು ಬಿಡುತ್ತೇವೆ. ನಾವು ಅದರಾಚೆ ಯೋಚನೆ ಮಾಡಿದ್ದೇವೆ. ಅದೇ ಕಾರಣದಿಂದ ನಿಮಗೆ ಟ್ರೇಲರ್‌ನಲ್ಲಿ ವಿಭಿನ್ನವಾದ ಹಿನ್ನೆಲೆ ಸಂಗೀತವಿದೆ. ಒಂದಷ್ಟು ವರ್ಷಗಳ ನಂತರ ಸಿನಿಮಾ ಮರೆತು ಹೋಗಬಹುದು, ಅದರ ಕಥೆ, ಸಂಗೀತವೂ ನೆನಪಿಗೆ ಬಾರದೇ ಇರಬಹುದು. ಆದರೆ, ಆ ಸಿನಿಮಾ ಕೊಟ್ಟ ಅನುಭವ ಮಾತ್ರ ಸದಾ ನೆನಪಿನಲ್ಲಿರುತ್ತದೆ. ನಮ್ಮ ಸಿನಿಮಾವೂ ಈ ತರಹದ ಒಂದು ಫೀಲ್ ಕೊಡಬೇಕು ಎಂಬ ಆಶಯದೊಂದಿಗೆ ಕಟ್ಟಿಕೊಟ್ಟಿದ್ದೇವೆ. ಇಷ್ಟೇ ಸಾಕು ಎಂದು ಮಾಡಿಲ್ಲ, ನಮ್ಮ ಕೈಯಲ್ಲಿ ಏನೆಲ್ಲಾ ಹೊಸದು ಮಾಡಬಹುದೋ ಅದನ್ನು ಮಾಡಿದ್ದೇವೆ. ನನ್ನ ಪ್ರಕಾರ, ಸಿನಿಮಾದ ಅದರ ಆಶಯದಲ್ಲಿ ಗ್ಲೋಬಲ್ ಆಗಿರಬೇಕು, ಥೀಮ್‌ನಲ್ಲಿ ಲೋಕಲ್ ಆಗಿರಬೇಕು. ನಾವು ಮಾಡೋದು ಒಂದು ಗ್ಯಾಂಗ್‌ಸ್ಟಾರ್ ಸಿನಿಮಾ. ಅದನ್ನು ಮತ್ತೆ ಮತ್ತೆ ಮಾಡುವ ಉದ್ದೇಶವಿಲ್ಲ. ಒಮ್ಮೆ ಮಾಡುವ ಎಷ್ಟು ಚೆನ್ನಾಗಿ ಮಾಡಬಹುದೋ, ಅಷ್ಟು ಚೆನ್ನಾಗಿ ಕಟ್ಟಿಕೊಡಲು ಪ್ರಯತ್ನ ಪಡಬೇಕು. ಅದನ್ನಿಲ್ಲಿ ಪಟ್ಟಿದ್ದೇವೆ. ಇದು ಫ್ರೆಂಡ್‌ಶಿಪ್ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ. ಅದಕ್ಕೆ ಗ್ಯಾಂಗ್‌ಸ್ಟಾರ್ ಸೆಟಪ್ ಇದೆ’ ಎಂದು ತಮ್ಮ ಸಿನಿಮಾ ಬಗ್ಗೆ ಹೇಳುತ್ತಾರೆ ರಾಜ್ ಶೆಟ್ಟಿ.
ಚಿತ್ರದ ಟೈಟಲ್‌ನ ವಿಶೇಷತೆ ಏನು, ಚಿತ್ರದ ಕಥೆ ಏನು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಗ್ಯಾಂಗ್‌ಸ್ಟಾರ್ ಕಥೆ. ತಮ್ಮ ಹೊಸ ಚಿತ್ರದ ಬಗ್ಗೆ ಮಾತನಾಡುವ ರಾಜ್ ಶೆಟ್ಟಿ, “ಇದುಮಂಗಳೂರು ಹಿನ್ನೆಲೆಯಲ್ಲಿ ನಡೆಯುವ ಗ್ಯಾಂಗ್ ಸ್ಟಾರ್ ಕಥೆ. ಆರಂಭದಲ್ಲಿ ನಾವು “ಹರಿಹರ’ ಎಂಬ ಟೈಟಲ್ ಅಂದುಕೊಂಡಿದ್ದೆವು. ಅದಕ್ಕೆ ಕಾರಣ ವಿಷ್ಣು ಹಾಗೂ ಶಿವ ಅವರ ಗುಣ. ಅವರ ಗುಣವನ್ನು ಇಬ್ಬರು ಹೀರೋಗಳಿಗೆ ಅನ್ವಯಿಸಿದರೆ ಹೇಗಿರುತ್ತದೆ ಎಂದುಕೊಂಡು ಆ ಟೈಟಲ್ ಇಟ್ಟೆವು. ಆದರೆ, ಸಿನಿಮಾ ಮಾಡುತ್ತಾ, ಟೈಟಲ್ ಸಿಂಪಲ್ ಅನಿಸಿತು. ಹಾಗಾಗಿ “ಗರುಡ ಗಮನ ವೃಷಭ ವಾಹನ’ ಇಟ್ಟೆವು. ಇದು ಎರಡು ಪಾತ್ರಗಳನ್ನು ಸೂಚಿಸುತ್ತದೆ’ ಎನ್ನುವುದು ರಾಜ್ ಶೆಟ್ಟಿ ಮಾತು.
ಹೊರದೇಶದಲ್ಲೂ ಪ್ರದರ್ಶನ: ಅಮೆರಿಕಾದ ಪ್ರಮುಖ ನಗರಗಳಲ್ಲಿ “ಗರುಡ ಗಮನ ವೃಷಭ ವಾಹನ’ ಪ್ರೀಮಿಯರ್ ಶೋ ನ.18ರಂದು ನಡೆದಿದೆ. ಯುಎಸ್‌ಎ ನಲ್ಲಿ ಆರಿಜೋನಾ, ಕ್ಯಾಲಿಪೋರ್ನಿಯಾ, ಪ್ಲೋರಿಡಾ, ಜಾರ್ಜಿಯಾ, ನಾರ್ಥ್ ಕ್ಯಾಲಿಪೋರ್ನಿಯಾ, ನ್ಯೂಜೆರ್ಸಿ, ನಾರ್ಥ್ ಕ್ಯಾರೋಲಿನಾ, ಟೆಕ್ಸಾಸ್, ವರ್ಜಿನಿಯಾ ಸೇರಿದಂತೆ ಪ್ರಮುಖ ಸ್ಟೇಟ್‌ಗಳ ಸುಮಾರು 30ಕ್ಕೂ ಹೆಚ್ಚು ಮೆಟ್ರೋ ಏರಿಯಾಗಳಲ್ಲಿ “ಗರುಡ ಗಮನ ವೃಷಭ ವಾಹನ’ ಅದ್ಧೂರಿಯಾಗಿ ಪ್ರೀಮಿಯರ್ ಆಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳು ಮತ್ತು ಹೊರದೇಶಗಳಲ್ಲೂ ಭರ್ಜರಿಯಾಗಿ “ಗರುಡ ಗಮನ ವೃಷಭ ವಾಹನ’ ಚಿತ್ರದ ಪ್ರಚಾರ ನಡೆಸುತ್ತಿರುವ ಚಿತ್ರತಂಡ, ಹೊರನಾಡು ಮತ್ತು ಹೊರದೇಶದ ಕನ್ನಡಿಗ ಸಿನಿಪ್ರಿಯರನ್ನು ಸೆಳೆಯುವ ಕೆಲಸದಲ್ಲಿ ನಿರತವಾಗಿದೆ. ಈಗಾಗಲೇ ಹೊರನಾಡು ಮತ್ತು ವಿದೇಶದಲ್ಲಿರುವ ಕನ್ನಡಿಗ ಪ್ರೇಕ್ಷಕರು ಮತ್ತು ವಿದೇಶಿ ಪ್ರೇಕ್ಷಕರು ಕೂಡ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
ರವಿಪ್ರಕಾಶ್ ರೈ