ಹುಣಸೂರು: ಚಿನ್ನ,ಬೆಳ್ಳಿ ಕಳ್ಳತನ ಮಾಡುತ್ತಿದ್ದುದ್ದನ್ನು ಕೇಳಿದ್ದೆವು, ಜಮೀನುಗಳಲ್ಲಿ ಪಂಪ್ ಸೆಟ್, ಮೋಟಾರ್, ವೈರ್ ಕಳ್ಳತನ ನಡೆಯುತ್ತಿತ್ತು. ಇದೀಗ ಬೆಲೆ ಗಗನಕ್ಕೇರಿರುವುದರಿಂದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಎಂಬಂತೆ ಕಳ್ಳರ ಕಣ್ಣು ತರಕಾರಿಯತ್ತ ಬಿದ್ದಿರುವುದು ಪೊಲೀಸರಿಗೆ ತಲೆಬೇನೆ ತರಿಸಿದೆ.
ಇದು ನಡೆದಿದ್ದು ಜನ ನಿಬಿಡ ಪ್ರದೇಶವಾದ ನಗರದ ಸಂತೆಮಾಳದಲ್ಲಿ.
ತರಕಾರಿ ವ್ಯಾಪಾರಿ ಮಹಮದ್ ಅಜರ್‌ರಿಗೆ ಸೇರಿದ ಗೋಡೌನ್‌ನ ಬೀಗ ಒಡೆದು ಬೆಳ್ಳುಳ್ಳಿ ಕಳ್ಳತನ ಮಾಡಿ ಪರಾರಿಯಾಗಿದ್ದ. ಇದೀಗ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿ, ಬೆಳ್ಳುಳ್ಳಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಶಬ್ಬೀರ್ ನಗರದ ನಿವಾಸಿ, ಪ್ರಸ್ತುತ ಬೆಂಗಳೂರಿನ ಡಿ.ಜೆ.ಹಳ್ಳಿಯಲ್ಲಿ ವಾಸವಾಗಿರುವ ಮಹಮದ್ ಅಜರ್ ಬಂಧಿತ ಆರೋಪಿ.
ಘಟನೆಯ ವಿವರ: ಇತ್ತೀಚೆಗೆ ಸಂತೆ ಮಾಳದ ವ್ಯಾಪಾರಿ ಮಹಮದ್ ಅನ್ಸರ್ ರಿಗೆ ಸೇರಿದ ಗೋಡೌನ್ ಬೀಗ ಒಡೆದು ಒಂದು ಲಕ್ಷ ರೂ. ಬೆಲೆ ಬಾಳುವ ಬೆಳ್ಳುಳ್ಳಿಯನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿವೈಎಸ್‌ಪಿ ಗೋಪಾಲಕೃಷ್ಣ, ಇನ್ಸ್ಪೆಕ್ಟರ್ ದೇವೇಂದ್ರ ನೇತೃತ್ವದಲ್ಲಿ ತಂಡ ರಚಿಸಿದ್ದರು. ಮೊಬೈಲ್ ಲೊಕೇಶನ್ ಜಾಡು ಹಿಡಿದು ಕಾರ್ಯಾಚರಣೆಗಿಳಿದ ನಗರ ಠಾಣೆ ಪೊಲೀಸರು ಆರೋಪಿ ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿರುವುದನ್ನು ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿ, ವಿವಿದೆಡೆ ಮಾರಾಟ ಮಾಡಿದ್ದ ಬೆಳ್ಳುಳ್ಳಿಯನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎಎಸ್‌ಐ ಪುಟ್ಟನಾಯಕ, ಸಿಬ್ಬಂದಿಗಳಾದ ಪ್ರಭಾಕರ್, ಅರುಣ, ಮನೋಹರ್, ಅನಿಲ್ ಮತ್ತಿತರರು ಭಾಗವಹಿಸಿದ್ದರು.