ಕೋಟ: ಇತಿಹಾಸ ಪ್ರಸಿದ್ಧ ಗರಿಕೆಮಠ ಅರ್ಕಗಣಪತಿ ಕ್ಷೇತ್ರವು ದಕ್ಷಿಣ ಭಾರತದಲ್ಲೇ ಅಪರೂಪದ ಲಕ್ಷ ಲಿಂಗಾರ್ಚನವಿಧಿ ಧಾರ್ಮಿಕ ಕಾರ್ಯಕ್ರಮಕ್ಕೆ ಶನಿವಾರ ಹಾಗೂ ರವಿವಾರ ಸಾಕ್ಷಿಯಾಯಿತು.
ಗರಿಕೆಮಠ ಕ್ಷೇತ್ರದ ಮುಖ್ಯಸ್ಥ ಆಗಮ ಪ್ರವೀಣ, ವೇ| ಮೂ| ರಾಮಪ್ರಸಾದ ಅಡಿಗರ ನೇತೃತ್ವದಲ್ಲಿ ಇಂಗ್ಲೆಂಡ್‌ನ ದೀಪೇಶ್ ಎಂ. ದೊಡಿಯಾ ಅವರ ಸೇವೆಯಾಗಿ ಈ ಕಾರ್ಯಕ್ರಮ ನಡೆಯಿತು.
ಅಷ್ಟಮಾತ್ರಿಕೆ ಹಾಗೂ ಮಣ್ಣಿನಿಂದ ಒಂದು ಲಕ್ಷ ಲಿಂಗಗಳನ್ನು ತಯಾರಿಸಿ, ನೂರಾರು ಸಂಖ್ಯೆಯ ಪುರೋಹಿತರು ಧಾರ್ಮಿಕ ವಿಧಿ-ವಿಧಾನಗಳು, ಶತಕಲಶಾಭಿಷೇಕ, ರುದ್ರಯಾಗ, ಲಕ್ಷಲಿಂಗ ಪೂಜಾವೃತ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿದರು.
ಭಕ್ತರು ಪುಳಕ: ಲಕ್ಷ ಲಿಂಗಾರ್ಚನವಿಧಿ ಹೆಚ್ಚಾಗಿ ಉತ್ತರ ಪ್ರದೇಶ, ಕಾಶಿಯಂತಹ ಮಹಾಕ್ಷೇತ್ರದಲ್ಲಿ ನಡೆಯುತ್ತದೆ. ಕರ್ನಾಟಕದಲ್ಲಿ ಪ್ರಥಮವಾಗಿ ನಡೆದ ಈ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಆಗಮಿಸಿ ಕಣ್ತುಂಬಿಕೊಂಡರು. ವೈದಿಕರು ಲಕ್ಷ ಸಂಖ್ಯೆಯ ಲಿಂಗಗಳಿಗೆ ಮತ್ತು ಪ್ರಧಾನ ಲಿಂಗಕ್ಕೆ ಸಲ್ಲಿಸುವ ಪೂಜೆಯನ್ನು ಭಕ್ತರಿಗೆ ಹತ್ತಿರದಲ್ಲೇ ನೋಡಲು ಅವಕಾಶ ಕಲ್ಪಿಸಲಾಗಿತ್ತು.
ಕ್ಷೇತ್ರದಲ್ಲಿ ಲೋಕ ಕಲ್ಯಾಣಕ್ಕಾಗಿ ಶ್ರೀನಿವಾಸ ಕಲ್ಯಾಣ, ಕಾಶೀ ಗಂಗಾರತಿ, ಸೀತಾ ಕಲ್ಯಾಣ ಮೊದಲಾದ ಕಾರ್ಯಕ್ರಮ ನಡೆದಿತ್ತು. ಅದೇ ರೀತಿ ಕ್ಷೇತ್ರದ ಭಕ್ತ ರಾದ ದೀಪೇಶ್ ಎಂ.ದೊಡಿಯಾ ಅವರು ಮೋಕ್ಷ ಪ್ರಾಪ್ತಿಗಾಗಿ ಮತ್ತು ಲೋಕ ಕಲ್ಯಾಣಕ್ಕಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಎಲ್ಲರ ಸಹಕಾರ ದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ ಎಂದು ಕ್ಷೇತ್ರದ ಮುಖ್ಯಸ್ಥ ರಾಮಪ್ರಸಾದ ಅಡಿಗರು ಹೇಳಿದ್ದಾರೆ.