ಸಿರುಗುಪ್ಪ: ತಾಲೂಕಿನ ದರೂರು, ಹಾಗಲೂರು, ಹೊಸಳ್ಳಿ, ಕರೂರು ಭಾಗದಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ತಾಲೂಕಿನ ಹಾಗಲೂರು ಗ್ರಾಮದ ಹತ್ತಿರ ಹರಿಯುವ ಗರ್ಜಿ ಹಳ್ಳ ತುಂಬಿ ಹರಿಯುತ್ತಿದೆ. ಹೀಗಾಗಿ ಬಸ್ ಮತ್ತು ಸಾರ್ವಜನಿಕರ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಹಾಗಲೂರು ಗ್ರಾಮ ಮತ್ತು ಸುತ್ತಲಿನ ಪ್ರದೇಶದಲ್ಲಿ ಭಾನುವಾರ ರಾತ್ರಿ ಭಾರಿ ಮಳೆ ಸುರಿದಿದ್ದರಿಂದ ಗ್ರಾಮಕ್ಕೆ ಸಂರ್ಪಕ ಕಲ್ಪಿಸುವ ಸೇತುವೆ ನೀರಿನಲ್ಲಿ ಮುಳುಗಡೆಯಾಗಿದೆ. ಜನ ಸಂಚಾರ ಹಾಗೂ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸೋಮವಾರ ಬೆಳಿಗ್ಗೆಯಿಂದ ಗರ್ಜಿ ಹಳ್ಳದಲ್ಲಿ ನೀರಿನ ಪ್ರವಾಹ ಕಡಿಮೆಯಾಗದೇ ಇರುವುದರಿಂದ ಈ ಗ್ರಾಮದಿಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಹಾಗೂ ರೈತರು ಹೊಲಗದ್ದೆಗಳಿಗೆ ತೆರಳಲು ಈ ಸೇತುವೆಯೇ ಮುಖ್ಯ ಸಂಪರ್ಕ ಸೇತುವೆಯಾಗಿದೆ.
ನೀರಿನ ಪ್ರವಾಹದ ಮಧ್ಯೆಯೇ ದ್ವಿಚಕ್ರ ವಾಹನ ಸವಾರರು ತಮ್ಮ ವಾಹನಗಳನ್ನು ಐದಾರು ಜನರ ಸಹಾಯದಿಂದ ಈ ದಡದಿಂದ ಆ ದಡಕ್ಕೆ ತೆಗೆದುಕೊಂಡು ಹೋಗುವುದು ಸಾಮಾನ್ಯವಾಗಿತ್ತು. ಹಾಗಲೂರಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆಯು ತಳಮಟ್ಟದಲ್ಲಿದ್ದು, ನೀರು ರಭಸವಾಗಿ ಹರಿಯುತ್ತಿರುವುದರಿಂದ ನೀರಿನ ಪ್ರವಾಹದ ಮಧ್ಯೆ ಸಾರ್ವಜನಿಕರು ದಾಟುವುದು ಅಪಾಯಕಾರಿಯಾಗಿದ್ದರೂ ಅನಿವಾರ್ಯವಾಗಿ ಕೆಲವರು ನೀರಿನ ಪ್ರವಾಹದ ಮಧ್ಯದಲ್ಲಿಯೇ ತಮ್ಮ ವಾಹನಗಳನ್ನು ತಳ್ಳಿಕೊಂಡು ಹೋಗುವುದು ಕಂಡುಬಂತು.
ಈ ಸೇತುವೆಯನ್ನು ಎತ್ತರಿಸಬೇಕೆಂದು ಗ್ರಾಮಸ್ಥರು ಅನೇಕ ಬಾರಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ಈ ಸೇತುವೆ ಮೇಲೆ ಮಳೆ ನೀರು ಹರಿಯುವುದು ಸಾಮಾನ್ಯವಾಗಿದ್ದು, ಈ ಸೇತುವೆ ಮೇಲೆ ದಾಟಲು ಹೋದವರು ನೀರಿಗೆ ಬಿದ್ದು, ಅಪಾಯದಿಂದ ಪಾರಾದ ಅನೇಕ ಘಟನೆಗಳು ನಡೆದಿವೆ. ಆದರೂ ಸೇತುವೆ
ಎತ್ತರಿಸಲು ಸರ್ಕಾರ ಕ್ರಮ ಕೈಗೊಂಡಿಲ್ಲದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಕೂಡಲೇ ನಮ್ಮ ಗ್ರಾಮದ ಹತ್ತಿರ ಹರಿಯುತ್ತಿರುವ ಗರ್ಜಿ ಹಳ್ಳದ ಸೇತುವೆ ಎತ್ತರಿಸಬೇಕು. ಇದರಿಂದ ಮಳೆಗಾಲದಲ್ಲಿ
ಸಂಚರಿಸಲು ಅನುಕೂಲವಾಗುತ್ತದೆ.
ವೀರೇಶ, ಗ್ರಾಮದ ನಿವಾಸಿ
ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಜಮೀನಿನಲ್ಲಿರುವ ಬದುಗಳು ಒಡೆದು ಹೋಗಿವೆ. ಬದುಗಳ ನಿರ್ಮಾಣ ಕಾರ್ಯಕ್ಕೆ ಗ್ರಾಪಂ ಮತ್ತು ಕೃಷಿ ಇಲಾಖೆ ಬದುಗಳ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ರೈತರಿಗೆ ನೆರವು ಕಲ್ಪಿಸಬೇಕು.
ಹುಸೇನಪ್ಪ, ಹಾಗಲೂರು ಗ್ರಾಮದ ರೈತ