Advertisement

ಪುತ್ತೂರು: ಉದ್ಯಾನ ನಗರಿಯಾಗುವತ್ತ ಹೆಜ್ಜೆ

11:21 AM Sep 08, 2022 | Team Udayavani |

ಪುತ್ತೂರು: ನಗರಾಡಳಿತವು ಸೌಂದರ್ಯೀಕರಣಕ್ಕಾಗಿ ಪಾರ್ಕ್‌ಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದು, ಉದ್ಯಾನ ನಗರಿಯಾಗುವತ್ತ ಪುತ್ತೂರು ನಗರ ಹೆಜ್ಜೆ ಇರಿಸಿದೆ.

Advertisement

32 ಚ. ಕಿ.ಮೀ. ವ್ಯಾಪ್ತಿಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಒಳಗೊಂಡು ಬೆಳೆಯುತ್ತಿರುವ ನಗರಸಭೆ ವ್ಯಾಪ್ತಿಯಲ್ಲಿ ಅಂದಾಜು 65 ಸಾವಿರ ಜನಸಂಖ್ಯೆ ಇದೆ. 5 ಸಾವಿರ ಜನಸಂಖ್ಯೆಗೆ ಒಂದರಂತೆ ಪಾರ್ಕ್‌ಗಳನ್ನು ಅಭಿವೃದ್ಧಿ ಮಾಡುವ ಯೋಜನೆ ಹೊಂದಲಾಗಿದೆ. ಪ್ರಸ್ತುತ ತಲಾ 10 ಸಾವಿರ ಜನಸಂಖ್ಯೆಗೆ ಒಂದರಂತೆ 6 ಪಾರ್ಕ್‌ಗಳನ್ನು ಅಭಿವೃದ್ಧಿ ಮಾಡಲಾಗಿದೆ. ಭವಿಷ್ಯದಲ್ಲಿ ಇಷ್ಟೇ ಸಂಖ್ಯೆಯ ಪಾರ್ಕ್‌ಗಳನ್ನು ಅಭಿವೃದ್ಧಿ ಮಾಡುವ ಯೋಚನೆಯಿದೆ.

ಚಿಣ್ಣರ ಪಾರ್ಕ್‌

ಪುತ್ತೂರು ಚಿಣ್ಣರ ಪಾರ್ಕ್‌ ನವೀಕರಣಗೊಂಡು ಬಳಕೆಯಾಗುತ್ತಿದೆ. 2008ರಲ್ಲಿ ಅಂದಿನ ಪುರಸಭಾ ಅಧ್ಯಕ್ಷ ರಾಜೇಶ್‌ ಬನ್ನೂರು ಕನಸಿನ ಕೂಸಾಗಿ ನಿರ್ಮಾಣಗೊಂಡ ಪಾರ್ಕ್‌ ವರ್ಷಗಳ ಬಳಿಕ ನಿರ್ವಹಣೆ ಸಮಸ್ಯೆಯಿಂದಾಗಿ ಸೊರಗಿತ್ತು. ಇತ್ತೀಚೆಗೆ ಜೀವಂಧರ ಜೈನ್‌ ಅಧ್ಯಕ್ಷತೆಯ ಆಡಳಿತ ಪಾರ್ಕ್‌ಗೆ ಹೊಸ ರೂಪ ನೀಡಿದೆ. 25 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಂಡಿದೆ.

ಗಾಂಧಿ ಪಾರ್ಕ್‌

Advertisement

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪೂರ್ವದಿಕ್ಕಿನ ಗದ್ದೆಯ ತುದಿಯಲ್ಲಿರುವ ಗಾಂಧಿಪಾರ್ಕ್‌ ವರ್ಷಗಳ ಕಾಲ ಹುಲ್ಲು, ಕಳೆ ತುಂಬಿ ಅನಾಥವಾಗಿತ್ತು. ಹಿಂದಿನ ಜಯಂತಿ ಬಲಾ°ಡ್‌ ಅಧ್ಯಕ್ಷತೆ ಸಮಯದಲ್ಲಿ ಪಾರ್ಕ್‌ ಅನ್ನು ದುರಸ್ತಿಗೊಳಿಸುವ ಕೆಲಸಕ್ಕೆ ಕೈ ಹಾಕಲಾಗಿತ್ತು. ಈಗಿನ ಆಡಳಿತ 9 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಿದೆ.

ಮೊಟ್ಟೆತ್ತಡ್ಕ, ಸಾಮೆತ್ತಡ್ಕ ಪಾರ್ಕ್‌

ನಗರ ಮತ್ತು ಗ್ರಾಮೀಣ ಭಾಗಕ್ಕೆ ಕೊಂಡಿ ಯಂತಿರುವ ಮೊಟ್ಟೆತ್ತಡ್ಕದಲ್ಲಿ ಸುಂದರ ಪಾರ್ಕ್‌ ನ ಆವಶ್ಯಕತೆಯಿತ್ತು. ಇಲ್ಲಿನ ಉದ್ಯಾನವನ್ನು ಸುಮಾರು 5 ಲಕ್ಷ ರೂಪಾಯಿ ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ. ಸಾಕಷ್ಟು ಜನಸಂಖ್ಯೆ ಇರುವ ವಸತಿ ಪ್ರದೇಶವನ್ನು ಹೊಂದಿರುವ ಸಾಮೆತ್ತಡ್ಕ ಪಾರ್ಕ್‌ ಅನ್ನು ಸುಮಾರು 17 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದೆ.

ನೆಲಪ್ಪಾಲು ಪಾರ್ಕ್‌

53 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ ನೆಲಪ್ಪಾಲು ಉದ್ಯಾನವನ್ನು 4 ದಿನಗಳ ಹಿಂದೆ ಶಾಸಕ ಸಂಜೀವ ಮಠಂದೂರು ಉದ್ಘಾಟಿ ಸಿದ್ದರು. ಈ ಪಾರ್ಕ್‌ ಅನ್ನು ಮುಂದಿನ ಹಂತದಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ಅಮೃತ ನಗರೋತ್ಥಾನ ಯೋಜನೆಯಲ್ಲಿ ಇನ್ನಷ್ಟು ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದೆ.

ಅಟಲ್‌ ಉದ್ಯಾನ

ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್‌ ಮುತುವರ್ಜಿಯಲ್ಲಿ ಕೊಂಬೆಟ್ಟುವಿನಲ್ಲಿ ನಿರ್ಮಾಣಗೊಂಡ ಪುಟ್ಟ ಅಟಲ್‌ ಪಾರ್ಕ್‌ ಆಕರ್ಷಕವಾಗಿದೆ. ಶಾಸಕರ 2 ಲಕ್ಷ ರೂ. ಅನುದಾನ, ನಗರಸಭೆಯ 1.60 ಲಕ್ಷ ರೂ. ಅನುದಾನ ಇದಕ್ಕೆ ಬಳಕೆಯಾಗಿದ್ದರೆ ಒಟ್ಟು ಸುಮಾರು 9 ಲಕ್ಷ ರೂ. ವ್ಯಯಿಸಲಾಗಿದೆ. ದಾನಿಗಳ ನೆರವು ಮತ್ತು ಪಿ.ಜಿ.ಜಗನ್ನಿವಾಸ ರಾವ್‌ ಅವರ ನೇತೃತ್ವದಲ್ಲಿ ಈ ಹಣ ಜೋಡಿಸಲಾಗಿದೆ.

ಹತ್ತಾರು ಯೋಜನೆ

ನಗರಸಭೆ ಪೌರಾಯುಕ್ತ ಮಧು ಎಸ್‌. ಮನೋಹರ್‌ ಮಾತನಾಡಿ, ಉದ್ಯಾನಗಳ ಅಭಿವೃದ್ಧಿಗೆ ಆದ್ಯತೆ ನೀಡಿದ ಕಾರಣ ಜನರು ತಮ್ಮ ವಿರಾಮದ ಸಮಯವನ್ನು ಖುಷಿಯಿಂದ ಕಳೆಯಲು ಅವಕಾಶ ಸಿಕ್ಕಂತಾಗಿದೆ. ಭವಿಷ್ಯದಲ್ಲಿ ಇನ್ನಷ್ಟು ಪಾರ್ಕ್‌ಗಳ ಅಭಿವೃದ್ಧಿಯ ಯೋಜನೆ ಇದೆ ಎಂದು ವಿವರಿಸಿದ್ದಾರೆ.

ಭರವಸೆ ಈಡೇರಿಸಿದ್ದೇವೆ ಚುನಾವಣೆಗೆ ಮುನ್ನ ನೀಡಿದ ಭರವಸೆಗಳನ್ನೆಲ್ಲ ಈಡೇರಿಸಿದ್ದು, ಪುತ್ತೂರಿನ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಈಗ ಪುತ್ತೂರು ಪಾರ್ಕ್‌ ಸಿಟಿಯಾಗಿಯೂ ಕಂಗೊ ಳಿಸುತ್ತಿದೆ. –ಸಂಜೀವ ಮಠಂದೂರು, ಶಾಸಕರು, ಪುತ್ತೂರು

ಉದ್ಯಾನ ನಗರ ಮೂಲ ಸೌಕರ್ಯಗಳ ಜೋಡಣೆಯ ಜತೆಗೆ ಉದ್ಯಾನಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೇವೆ. ಏಳು ಪಾರ್ಕ್‌ ಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. –ಜೀವಂಧರ್‌ ಜೈನ್‌, ಅಧ್ಯಕ್ಷರು, ಪುತ್ತೂರು ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next