ಹರಪನಹಳ್ಳಿ: ತಾಲೂಕಿನ ಗರ್ಭಗುಡಿ ಗ್ರಾಮದ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿದ್ದ “ಗರ್ಭಗುಡಿ ಕಿರು ಜಲಾಶಯ ನಿರ್ಮಾಣ’ ಯೋಜನೆಗೆ ಎರಡು ದಶಕ ಕಳೆದರೂ ಪೂರ್ಣ ಪ್ರಮಾಣದ ಕಾಮಗಾರಿಗೆ ಚಾಲನೆ ಸಿಗದೇ ನೂರೆಂಟು ವಿಘ್ನಗಳು ಕಾಡುತ್ತಿವೆ.
ಮಾಜಿ ಮುಖ್ಯಮಂತ್ರಿ ದಿ.ಎಸ್. ನಿಜಲಿಂಗಪ್ಪನವರ ಕನಸಿನ ಕೂಸಾದ ಈ ಯೋಜನೆಗಾಗಿ 1998ರಲ್ಲಿ 9.30ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್‌ರವರು ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅಂದಿನಿಂದ ಯೋಜನೆಯನ್ನು ಜನಪ್ರತಿನಿಧಿ ಗಳು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದ್ದರೆ ವಿನಃ ಯಾರು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿರಲಿಲ್ಲ. ಆದರೆ 2018ರಲ್ಲಿ ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಅವರು ಹಠಕ್ಕೆ ಬಿದ್ದು ಗರ್ಭಗುಡಿ ಬಿಡ್ಜ್ ಕಂ ಬ್ಯಾರೇಜ್ ಅಂತ ಇದ್ದ ಯೋಜನೆಯನ್ನು ಬಿಡ್ಜ್ ಕಂ ಪೀಕಪ್ ಅಂತ ಬದಲಾಯಿಸಿ 54 ಕೋಟಿ ರೂ. ವೆಚ್ಚಕ್ಕೆ ಹೊಸ ತಾಂತ್ರಿಕ ಅನುಮೋದನೆ ಪಡೆದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಾಧನಾ ಸಮಾವೇಶದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿದ್ದರು.
ಬೆಂಗಳೂರು ಮೆ. ಅಮೃತ ಕನಸ್ಟ್ರಕ್ಷನ್ ಕಂಪನಿಯು 54 ಕೋಟಿ ರೂಗಳಿಗೆ 14-06-2018ರಂದು ಒಡಂಬಡಿಕೆ ಮಾಡಿಕೊಂಡಿದೆ. ಸದರಿ ಅಗ್ರಿಮೆಂಟ್ ಪ್ರಕಾರ 18 ತಿಂಗಳ ಕಾಲಾವಧಿ ಯೊಳಗೆ ಕಾಮಗಾರಿ ಮುಗಿಸಬೇಕಿತ್ತು. ಆದರೆ ಅವಧಿ ಮುಗಿದು ಒಂದೂವರೆ ವರ್ಷ ಗತಿಸಿದರೂ ಕಾಮಗಾರಿ ಆರಂಭಿಸದ್ದಿದ್ದರೂ ಗುತ್ತಿಗೆದಾರರಿಗೆ 9.84 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಕಾಲಾವಧಿ ಮುಗಿದಿದ್ದರೂ ಕೆಲಸ ಆರಂಭಿಸದೇ ಹಣವನ್ನು ಪಡೆದಿರುವ ಗುತ್ತಿಗೆದಾರರು ಹಾಗೂ ಲೋಪವೆಸಗಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿದೆ.
ಕಾಮಗಾರಿ ಟೆಂಡರ್ ಅವಧಿ ಮುಗಿದಿರುವುದರಿಂದ ಗುತ್ತಿಗೆದಾರರ ಕಾಲಾವಧಿ ವಿಸ್ತರಣೆ ಮಾಡಿಕೊಳ್ಳಬೇಕಿತ್ತು. ಅಥವಾ ಹೊಸದಾಗಿ ಟೆಂಡರ್ ಕರೆಯಬೇಕಿತ್ತು. ಆದರೆ ಇದು ಯಾವುದನ್ನು ಮಾಡದೇ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಮುಂಚಿತವಾಗಿ ಬಿಡುಗಡೆ ಮಾಡಲಾದ ಮೊತ್ತಕ್ಕೆ ಸರಿದೂಗಿಸಲು ಇದೀಗ ತರಾತುರಿಯಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ. ಸ್ಥಳದಲ್ಲಿ ಕಾಮಗಾರಿಗೆ ಸಂಬಂಧಿಸಿದ ಸಾಮಗ್ರಿ ಸಂಗ್ರಹಿಸಿ, ಒಂದು ಕಡೆ ಪಿಲ್ಲರ್‌ಗಾಗಿ ಕಬ್ಬಿಣ ಕಟ್ಟಲಾಗಿದೆ. ಏನೇ ಪ್ರಶ್ನೆ ಕೇಳಿದರೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕಾಮಗಾರಿ ಪ್ರಗತಿಯಲ್ಲಿದೆ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕುಡಿಯುವ ನೀರು, ನೀರಾವರಿ, ಸಂಪರ್ಕ ಸೇತುವೆ, ಮೀನುಗಾರಿಕೆ ಅಭಿವೃದ್ಧಿ ಸೇರಿದಂತೆ ವಿವಿಧೋದ್ದೇಶಗಳನ್ನು ಯೋಜನೆ ಒಳಗೊಂಡಿದ್ದು, ಬ್ರಿಡ್ಜ್ ನಿರ್ಮಾಣದಿಂದ ನದಿಪಾತ್ರದಲ್ಲಿ 19 ಕಿಮೀ ಉದ್ದಕ್ಕೂ 50 ದಶಲಕ್ಷ ಘನ ಅಡಿಯಷ್ಟು ನೀರು ಸಂಗ್ರಹಗೊಳ್ಳಲಿದೆ. ತಾಲೂಕಿನ ಹಲವಾಗಲು, ಕಡತಿ, ನಂದ್ಯಾಲ, ನಿಟ್ಟೂರು, ತಾವರಗೊಂದಿ ಹಾಗೂ ರಾಣಿಬೆನ್ನೂರು ತಾಲೂಕಿನ ಕೆಲವು ಗ್ರಾಮಗಳು ಸೇರಿ ಒಟ್ಟು 3,100 ಎಕರೆ ರೈತರ ಭೂಮಿಗೆ ನೀರುಣಿಸುವುದು ಯೋಜನೆ ಮುಖ್ಯ ಉದ್ದೇಶವಾಗಿದೆ. ಹರಪನಹಳ್ಳಿ-ರಾಣಿಬೆನ್ನೂರು ತಾಲೂಕುಗಳ ನಡುವೆ ಪ್ರಯಾಣಿಸಲು 25 ಕಿಮೀ ಅಂತರ ಕಡಿಮೆಯಾಗಲಿದೆ. ಹರಪನಹಳ್ಳಿ-ಕೊಟ್ಟೂರು-ರಾಣಿಬೆನ್ನೂರು ನಡುವಿನ ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿದೆ.
ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಟೆಂಡರ್ ಅವಧಿ ಮುಗಿದಿದ್ದರೂ ಕೆಲಸ ಪ್ರಾರಂಭಿಸದ ಗುತ್ತಿಗೆದಾರರಿಗೆ ದಂಡ ಹಾಕುವ ಬದಲು ಹಣ ಬಿಡುಗಡೆ ಮಾಡಿದ್ದಾರೆ. ನಾವು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ ನಂತರ ತರಾತುರಿಯಲ್ಲಿ ಕಾಮಗಾರಿ ನಡೆಸಲು ಪ್ರಯತ್ನ ಮಾಡುತ್ತಿದ್ದಾರೆ. 2018ರ ದರ ಪಟ್ಟಿಯಂತೆ ಕ್ರಿಯಾಯೋಜನೆವಿದ್ದು, ಮೂರು ವರ್ಷದ ಹಿಂದೆ ಇದ್ದ ದರಕ್ಕೂ ಈಗಿರುವ ದರಕ್ಕೂ ವ್ಯತ್ಯಾಸವಿದೆ. ಹೀಗಾಗಿ ಕಳಪೆ ಕಾಮಗಾರಿ ಮಾಡುವ ಅನುಮಾನವಿದೆ. ಕಳೆದ ಎರಡು ತಿಂಗಳ ಹಿಂದೆಯೇ ಲೋಕಾಯುಕ್ತ ನ್ಯಾಯಲಯಕ್ಕೆ ದೂರು ಸಲ್ಲಿಸಿದ್ದು, ಪ್ರಕರಣ ನ್ಯಾಯಲಯದಲ್ಲಿರುವಾಗ ಕಾಮಗಾರಿ ನಡೆಸುವುದು ಅಪರಾಧವಾಗುತ್ತದೆ ಎನ್ನುತ್ತಾರೆ ದೂರುದಾರರಾದ ಟಿ. ಶ್ರೀಧರ್ ಮತ್ತು ಸತೀಶಕುಮಾರ್.