Advertisement
ಪಾಲಿಕೆಯ ತ್ಯಾಜ್ಯ ಸಂಸ್ಕರಣಾ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ. ಜತೆಗೆ ಸಂಪರ್ಕ ರಸ್ತೆ ಸಮಸ್ಯೆಯಿಂದಾಗಿ ಕ್ವಾರಿಗಳಲ್ಲಿ ತ್ಯಾಜ್ಯ ವಿಲೇವಾರಿ ಸಾಧ್ಯವಾಗುತ್ತಿಲ್ಲ. ಇದರಿಂದ ಕಸ ನಗರದಲ್ಲಿಯೇ ಉಳಿಯುತ್ತಿದ್ದು, ಮಳೆಯಿಂದ ವಿಲೇವಾರಿಯಾಗದೆ ಉಳಿದ ತ್ಯಾಜ್ಯ ಕೊಳೆಯುತ್ತಿದೆ.
Related Articles
Advertisement
ಪ್ರತಿಭಟನೆ, ಹಬ್ಬದ ಪರಿಣಾಮ ಹೆಚ್ಚು: ಗುತ್ತಿಗೆ ಪೌರಕಾರ್ಮಿಕರಿಗೆ ನೇರವಾಗಿ ವೇತನ ಪಾವತಿ ವಿರೋಧಿಸಿ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರು ದಿಢೀರ್ ಪ್ರತಿಭಟನೆಗೆ ಮುಂದಾಗಿ, ನಗರದಲ್ಲಿ ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಿದ್ದರು. ಇದರಿಂದಾಗಿ ಸಾವಿರಾರು ಟನ್ ತ್ಯಾಜ್ಯ ರಸ್ತೆಗಳಲ್ಲಿಯೇ ಉಳಿಯುವಂತಾಗಿತ್ತು. ಅದರ ನಂತರವೇ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದಿಂದ ಸಾವಿರಾರು ಟನ್ ಹೆಚ್ಚುವರಿ ತ್ಯಾಜ್ಯ ಉತ್ಪತ್ತಿಯಾಗಿದ್ದು, ಅದರ ವಿಲೇವಾರಿಗೆ ಪೌರಕಾರ್ಮಿಕರು ಹರಸಾಹಸ ಪಡೆಬೇಕಾಗಿದೆ.
ಕಾಲುವೆ ಸೇರುತ್ತಿದೆ ತ್ಯಾಜ್ಯ: ಸಮರ್ಪಕವಾಗಿ ವಿಲೇವಾರಿಯಾಗದ ತ್ಯಾಜ್ಯ ಬಹುತೇಕ ಕಡೆಗಳಲ್ಲಿ ರಾಜಕಾಲುವೆಗಳನ್ನು ಸೇರುತ್ತಿದೆ. ಹೀಗೆ ಕಾಲುವೆಗಳಲ್ಲಿ ಸೇರುತ್ತಿರುವ ತ್ಯಾಜ್ಯ ನೀರು ಹರಿಯಲು ಅಡ್ಡಿಯಾಗುತ್ತಿದ್ದು, ಮಳೆ ಹೆಚ್ಚಾದಾಗ ನೀರು ಉಕ್ಕಿ ಹರಿದು ತಗ್ಗು ಪ್ರದೇಶಗಳಿಗೆ ನೀರು ಪ್ರವೇಶಿಸಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗುತ್ತಿದೆ.
ತ್ಯಾಜ್ಯ ಸಂಗ್ರಹಿಸುತ್ತಿಲ್ಲ: ಪಾಲಿಕೆಯ ಹಲವಾರು ವಾರ್ಡ್‌ಗಳಲ್ಲಿ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿಸುವ ಕಾರ್ಯ ನಡೆಯದಿರುವುದರಿಂದ ಸಾರ್ವಜನಿರು ಅನಿವಾರ್ಯವಾಗಿ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಸುರಿಯಬೇಕಾಗಿದೆ. ಇದರಿಂದಾಗಿ ನಗರದಲ್ಲಿ ಬ್ಲಾಕ್‌ಸ್ಪಾರ್ಟ್‌ಗಳು ಸೃಷ್ಟಿಯಾಗುತ್ತಿದೆ. ಬ್ಲಾಕ್‌ಸ್ಪಾಟ್‌ಗಳ ಬಳಿ ಬೀದಿ ನಾಯಿಗಳು ಹಾಗೂ ಬಿಡಾಡಿ ಹಸುಗಳು ಜಮಾಯಿಸುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ.
ಗುತ್ತಿಗೆದಾರರ ದಿಢೀರ್ ಪ್ರತಿಭಟನೆ ಹಾಗೂ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಹೆಚ್ಚುವರಿ ತ್ಯಾಜ್ಯ ಸೃಷ್ಟಿಯಾಗಿದ್ದು, ಅದರ ವಿಲೇವಾರಿಗೆ ಕಾಲಾವಕಾಶ ಬೇಕಾಗುತ್ತದೆ. ಮಳೆಯಿಂದಾಗಿ ಕ್ವಾರಿಗಳಿಗೆ ಕಾಂಪ್ಯಾಕ್ಟರ್ ಹೋಗಲು ಕಷ್ಟವಾಗುತ್ತಿರುವುದರಿಂದ ತ್ಯಾಜ್ಯ ವಿಲೇವಾರಿ 3-4 ಗಂಟೆಗಳು ತಡವಾಗುತ್ತಿದ್ದು, ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಹೆಚ್ಚಿನ ತ್ಯಾಜ್ಯ ಕಳುಹಿಸಲಾಗುತ್ತಿದೆ. -ಸಫ್ರಾಜ್ ಖಾನ್, ಘನತ್ಯಾಜ್ಯ ಮತ್ತು ಆರೋಗ್ಯ ವಿಭಾಗದ ಜಂಟಿ ಆಯುಕ್ತ ಪೌರಕಾರ್ಮಿಕರು ಒಂದು ತಿಂಗಳಿನಿಂದ ತ್ಯಾಜ್ಯ ಸಂಗ್ರಹಿಸಲು ಬರುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ಅನಿವಾರ್ಯವಾಗಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದು, ಪಾಲಿಕೆಯ ಅಧಿಕಾರಿಗಳು ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.
-ಅರುಣ್ ಕುಮಾರ್, ನಾಗಸಂದ್ರ ನಿವಾಸಿ * ವೆಂ. ಸುನೀಲ್ ಕುಮಾರ್