Advertisement

ಚೆಲುವನ ವಾಹನ ಮಂಟಪದಲ್ಲಿ ಕಸದ ರಾಶಿ

03:35 PM Feb 23, 2020 | Suhan S |

ಮೇಲುಕೋಟೆ: ಇಲ್ಲಿನ ಶ್ರೀ ಚೆಲುವನಾರಾಯಣ ಸ್ವಾಮಿ ವಾಹನೋತ್ಸವ ಮಂಟಪದಲ್ಲಿ ಕಸದರಾಶಿ ತುಂಬಿದ್ದು, ಭಾರತ ಸರ್ಕಾರದ ಸ್ವಚ್ಛಭಾರತ್‌, ಮುಜರಾಯಿ ಇಲಾಖೆಯ ಸ್ವಚ್ಛದೇಗುಲ ಅಭಿಯಾನ ವನ್ನು ಅಣಕಿಸುವಂತಿದೆ. ಮತ್ತೂಂದೆಡೆ ಬೃಹತ್‌ ಜನರೇಟ ರನ್ನು ಐತಿಹಾಸಿಕ ಮಂಟಪದಲ್ಲೇ ಇಡಲಾಗಿದ್ದು ಭಾರೀ ಶಬ್ದ ಮಂಟಪದ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದೆ.

Advertisement

ಕಸದ ಕೊಂಪೆ: ಸ್ವತಃ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್‌ ಅವರೇ ಸೂಚನೆ ನೀಡಿದ್ದರೂ ಕನಿಷ್ಠ ಸ್ವತ್ಛಗೊಳಿಸುವ ಕಾರ್ಯವನ್ನು ದೇಗುಲದ ಪ್ರಭಾರಿ ಅಧಿಕಾರಿ ಮಾಡದಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ಚೆಲುವನಾರಾಯಣಸ್ವಾಮಿಯ ವಾಹನೋತ್ಸವಗಳು ಆರಂಭವಾಗುವ ಮತ್ತು ವೈರಮುಡಿ ಉತ್ಸವ ಮುಕ್ತಾಯವಾಗಿ ಪ್ರಪ್ರಥವಾಗಿ ರಾಜಮುಡಿ ಕಿರೀಟಧಾರಣೆಯಾಗುವ ರಾಜ ಒಡೆಯರ್‌ ನಿರ್ಮಿಸಿದರೆನ್ನಲಾದ ಐತಿಹಾಸಿಕ ಮಂಟಪ ಇದೀಗ ಕಸದ ಕೊಂಪೆಯಾಗಿದೆ.

ಅನಗತ್ಯ ವಸ್ತುಗಳನ್ನು ತುಂಬಲಾಗಿದೆ: ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದ ಮುಂಭಾಗವೇ ಇರುವ ಬೃಹತ್‌ ಮಂಟಪದಲ್ಲಿ ಬೇಡದ ಹಾಗೂ ಅನಗತ್ಯ ವಸ್ತುಗಳನ್ನು ತುಂಬಲಾಗಿದೆ. ಮುರಕಲು ಕುರ್ಚಿಗಳು, ಹರಿದ ಬಟ್ಟೆಗಳು ಚಲ್ಲಾಡಿವೆ, ಮುರಿದ ವಸ್ತುಗಳು ರಾಜ್ಯಭಾರ ಮಾಡಿವೆ. ತೆಪ್ಪೋತ್ಸವಕ್ಕೆ ಬಳಸಿದ ಕಬ್ಬಿಣದ ಡ್ರಮ್‌ ಗಳನ್ನು ಗರುಡದೇವನ ಮುಂದೆ ತುಂಬಲಾಗಿದೆ. ತುಕ್ಕುಹಿಡಿದ ಜನರೇಟರ್‌ಗಳು, ಬಳಕೆಗೆ ಬಾರದ ಬೊಂಬುಗಳ ರಾಶಿ, ನಾಮಫ‌ಲಕಗಳು ಸುಣ್ಣದ ಮೂಟೆಗಳನ್ನು ಮಂಟಪದಲ್ಲೇ ಬಿಸಾಡಲಾಗಿದೆ.

ಗರುಡದೇವನಿಗಿಲ್ಲ ಪೂಜೆ: ವೈರಮುಡಿ ಬ್ರಹ್ಮೋತ್ಸವ ಸೇರಿದಂತೆ ಎಲ್ಲಾ ಜಾತ್ರಾ ಮಹೋತ್ಸವದಲ್ಲಿ ಗರುಡ ಧ್ವಜಾರೋಹಣ ಮಾಡಿ ಉತ್ಸವಕ್ಕೆ ದೇವತೆಗಳನ್ನು ಆಹ್ವಾನಿಸಿ ಬ್ರಹ್ಮೋತ್ಸವ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತದೆ. ಇಂತಹ ಮಹತ್ವದ ಗರುಡನ ಸನ್ನಿಧಿ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿಯ ನಿರ್ಲಕ್ಷ್ಯತನದಿಂದ ಕಸದ ಬೀಡಾಗಿದೆ.ತೆಪೋತ್ಸವಕ್ಕೆ ಬಳಸಿದ್ದ ಡ್ರಮ್‌ ಗಳನ್ನು ಗರುಡದೇವನ ಗರ್ಭಗುಡಿಯಲ್ಲೇ ಬಿಸಾಡಿದ ಕಾರಣ ಗರುಡನಿಗೆ ಪೂಜೆ ಇಲ್ಲದಂತಾಗಿದೆ. ಗರುಡ ಅಳುತ್ತಿದ್ದಾನೆ. ಅಧಿಕಾರಿ ವಾಹನ ಮಂಟಪದ ಸ್ವಚ್ಛತೆಯ ಬಗ್ಗೆ ಕೊಂಚ ಕಾಳಜಿ ವಹಿಸಿ ಕಸವನ್ನು ತೆಗೆಸಿ ಅಗತ್ಯವಸ್ತುಗಳಿದ್ದರೆ ವ್ಯವಸ್ಥಿತವಾಗಿ ಜೋಡಿಸಿಡಲು ಕ್ರಮ ವಹಿಸಿ, ನಿರಂತರ ಸ್ವಚ್ಛತೆಗೆ ಆದ್ಯತೆ ನೀಡಬೇಕಾದ ಅಗತ್ಯವಿದೆ. ಈ ಬಗ್ಗೆ ಅಧಿಕಾರಿಯನ್ನು ಸಂಪರ್ಕಿಸಿದರೆ ಉದ್ದಟತನವಾಗಿ ವರ್ತಿಸಿ ಪೋನ್‌ ಕಡಿತಮಾಡುತ್ತಾರೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next