Advertisement

ಕತ್ತಲೆಯಲ್ಲಿ ಕೋಡಿ ಕಡಲತಡಿಯ ಸೀವಾಕ್‌

09:09 PM Jan 05, 2021 | Team Udayavani |

ಕುಂದಾಪುರ: ಅತಿ ಉದ್ದ ವ್ಯಾಪ್ತಿ ಹೊಂದಿದ ಬೀಚ್‌ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕೋಡಿ ಕಡಲತಡಿಯಲ್ಲಿ ಸಾರ್ವಜನಿಕರಿಗೆ ಸೂರ್ಯಾಸ್ತಮಾನ ವೀಕ್ಷಣೆಗೆ ಅನು ವಾಗುವಂತೆ ನಿರ್ಮಿಸಿದ ಸೀವಾಕ್‌ ದೀಪಗಳು ಉರಿಯದೆ ಕತ್ತಲೆಯಲ್ಲಿದೆ. ಅದಷ್ಟೇ ಅಲ್ಲದೆ ಇಲ್ಲಿ ತ್ಯಾಜ್ಯ ಸಂಗ್ರಹವೂ ದಿನ ದಿಂದ ದಿನ ಕ್ಕೆ ಹೆಚ್ಚಾಗುತ್ತಿದೆ.

Advertisement

ಕಸದ ರಾಶಿ
ಬೀಚ್‌ಗೆ ಜನಸಾಗರವೇ ಹರಿದು ಬರುತ್ತಿದೆ. ಪ್ರತಿದಿನ ಅಲ್ಲದೇ ವಾರಾಂತ್ಯದ ದಿನಗಳಲ್ಲಿ ಅನಿಯಂತ್ರಿತವಾಗಿ ಜನ ಬರುತ್ತಿದ್ದಾರೆ. ಈ ಬೀಚ್‌ನ್ನು ರಾಜ್ಯ ಸರಕಾರ ಕೇಂದ್ರದ ಅನುದಾನದ ಮೂಲಕ ದತ್ತು ಪಡೆದಿದೆ. ಈ ಯೋಜನೆಯಲ್ಲಿ ಸಮುದ್ರ ತೀರದಲ್ಲಿ ಪ್ರವಾಸಿಗರ ರಕ್ಷಣೆಗೆ ಕಾರ್ಯಕರ್ತರನ್ನು ನೇಮಿಸಲಾಗಿದೆ. ಆದರೆ ಸ್ಥಳೀಯರು ಹಾಗೂ ಸಾರ್ವಜನಿಕರು ಈ ನಾಲ್ವರು ಕಾರ್ಯಕರ್ತರ ಮಾತಿಗೆ ಬೆಲೆಯೇ ನೀಡುತ್ತಿಲ್ಲ. ಪರಿಣಾಮವಾಗಿ ಸ್ಥಳೀಯವಾಗಿ ಕಸದ ರಾಶಿ ಹೆಚ್ಚಾಗುತ್ತಿದೆ. ದತ್ತು ಸ್ವೀಕಾರ ಯೋಜನೆ ಮೂಲಕ ಪ್ರತಿದಿನ ಸ್ವತ್ಛತೆ ನಡೆಯುತ್ತಿದ್ದು ಇನ್ನೂ ಮೂರು ತಿಂಗಳುಗ ಳ‌ ಕಾಲ ನಡೆಯಲಿದೆ. ಈಗಾಗಲೇ ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ನವರು ಇಲ್ಲಿ ಸತತ 77 ವಾರಗಳಿಂದ ಸ್ವತ್ಛತಾ ಕಾರ್ಯ ನಡೆಸುತ್ತಿದ್ದಾರೆ. ಇದಕ್ಕೆ ಸ್ವಯಂಸೇವಕರ ಜತೆಗೆ ಪುರಸಭೆ, ಅರಣ್ಯ ಇಲಾಖೆ, ಪೊಲೀಸ್‌ ಇಲಾಖೆ ಕೂಡ ಕೈಜೋಡಿಸಿದೆ.

ಬಂದಿಲ್ಲ ಸ್ವಚ್ಛತೆ ಯಂತ್ರ
ಸಹಾಯಕ ಕಮಿಷನರ್‌ ಅಧ್ಯಕ್ಷತೆಯಲ್ಲಿ ಬೀಚ್‌ ಸಮಿತಿ ರಚನೆಯಾಗಲಿದ್ದು ಬಳಿಕ ಇಲ್ಲಿಗೆ ಸ್ವತ್ಛತೆ ಯಂತ್ರ ಆಗಮಿಸಬೇಕಿದ್ದು ಇನ್ನೂ ಬಂದಿಲ್ಲ. ಈಗಾಗಲೇ ಮಲ್ಪೆಯಲ್ಲಿ ಉಪಯೋಗಶೂನ್ಯವಾಗಿರುವ ಯಂತ್ರವನ್ನು ಇಲ್ಲಿಗೆ ನೀಡುವಂತೆ ಪುರಸಭೆ ವತಿಯಿಂದ ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಈ ಹಿಂದಿನ ಡಿಸಿ ಪ್ರಿಯಾಂಕಾ ಮೇರಿ ಅವರೇ ಯಂತ್ರ ನೀಡುವುದಾಗಿ ಹೇಳಿದ್ದರೂ ಈ ವರೆಗೂ ಈ ಪ್ರಕ್ರಿಯೆ ಮುಂದುವರಿದಿಲ್ಲ. ಈಗಿನ ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರು ಕೂಡ ಇಲ್ಲಿನ ಪ್ರವಾಸೋದ್ಯಮ, ಬೀಚ್‌ನ ಅಭಿವೃದ್ಧಿ ಕುರಿತು ಆಸ್ಥೆ ವಹಿಸಿದ್ದು ಎರಡು ಬಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಾಗಿದ್ದರೂ ಯಂತ್ರ ಮಾತ್ರ ಇನ್ನೂ ಬಂದಿಲ್ಲ.

ಸಿಸಿ ಕೆಮರಾ
ಸಿಸಿ ಕೆಮರಾ ಅಳವಡಿಸಲಾಗಿದ್ದು ಸಿಸಿ ಕೆಮರಾಗಳು ಇರುವಲ್ಲಿಯೇ ದೀಪಗಳು ಉರಿಯುತ್ತಿಲ್ಲ. ಆದ್ದರಿಂದ ಕೆಮರಾ ಹಾಕಿಯೂ ಪ್ರಯೋಜನ ಇಲ್ಲದಂತಾಗಿದೆ. ಸರಿಸುಮಾರು 3.5 ಕಿ.ಮೀ. ದೂರದಲ್ಲಿ ಬೀಚ್‌ ವ್ಯಾಪಿಸಿ ಕೊಂಡಿದೆ. ಆದ್ದರಿಂದ ಯಾವುದೇ ಪ್ರದೇಶದಲ್ಲೂ ಸಮುದ್ರ ವಿಹಾರ ನಡೆಸಬಹುದಾಗಿದೆ.

ಅಕ್ರಮ
ಅಕ್ರಮವಾಗಿ ಅಂಗಡಿ, ಮರಳುಗಾರಿಕೆ ನಡೆಯುತ್ತಿದೆ ಎಂಬ ಅಪವಾದ ಇದ್ದು ಇದರ ಕುರಿತು ಗಮನಹರಿಸಬೇಕಿದೆ. ಅಧಿಕೃತವಾಗಿ ವ್ಯಾಪಾರ ನಡೆಸುವವರಿ ಗೆ ಅನುಕೂಲ ಮಾಡಿಕೊಟ್ಟು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸಂಬಂಧಪಟ್ಟ ಇಲಾಖೆಗಳು ಮುಂದಾಗಿಬೇಕಿದೆ.

Advertisement

ವರದಿ
ಕೋಡಿ ಬೀಚ್‌ನ ಅಭಿವೃದ್ಧಿ ಕುರಿತು “ಉದಯವಾಣಿ’ “ಸುದಿನ’ ಅನೇಕ ಜನಪರ ವರದಿಗಳನ್ನು ಪ್ರಕಟಿಸಿದೆ.

ದೀಪ ಉರಿಯುತ್ತಿಲ್ಲ
ದೀಪಗಳನ್ನು ಅಳವಡಿಸಿದ ಕಾರಣ ಸೀವಾಕ್‌ನ ಸೌಂದರ್ಯ ದ್ವಿಗುಣವಾಗಿದೆ. ಅದರ ಅನಂತರ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಕೆಲವರು ಗುಂಪು ಗುಂಪಾಗಿ ಆಗಮಿಸಿ ಅಪಾಯಕಾರಿ ಸಾಹಸ ಮಾಡುತ್ತಾರೆ. ರಾತ್ರಿ ಹೊತ್ತು ತಡೆಗೋಡೆಯ ಕಲ್ಲುಗಳ ಮೂಲಕ ಸಮುದ್ರಕ್ಕೆ ಇಳಿಯುತ್ತಾರೆ. ಕತ್ತಲಲ್ಲಿ ಏನಾದರೂ ಅವಘಡವಾದರೆ ಎಂಬ ಆತಂಕ ಸ್ಥಳೀಯರದ್ದು. ಇದಕ್ಕಾಗಿ ದೀಪಗಳು ಉರಿಯುವಂತೆ ಮಾಡಬೇಕಿದೆ.

ಅನೇಕ ಸಮಯವಾಯ್ತು
ದೀಪಗಳು ಉರಿಯದೇ ಅನೇಕ ಸಮಯವಾಯ್ತು. ಸಂಬಂಧಪಟ್ಟವರು ಸ್ಪಂದಿಸುತ್ತಲೇ ಇಲ್ಲ. ಅಕ್ರಮಗಳಿಗೂ ಕಡಿವಾಣ ಹಾಕಬೇಕಿದೆ. ತ್ಯಾಜ್ಯಮುಕ್ತ ಮಾಡಬೇಕಿದೆ.
– ದೀಪಕ್‌ ಪೂಜಾರಿ ಕೋಡಿ

ತತ್‌ಕ್ಷಣ ದುರಸ್ತಿ
ಸೀವಾಕ್‌ನಲ್ಲಿ ದೀಪಗಳನ್ನು ಮೀನುಗಾರಿಕಾ ಇಲಾಖೆಯಿಂದ ಹಾಕಲಾಗಿದ್ದು ಅದರ ನಿರ್ವಹಣೆಯನ್ನು ಸಂಬಂಧಪಟ್ಟ ಗುತ್ತಿಗೆದಾರರು ಮಾಡುತ್ತಿದ್ದಾರೆ. ಪುರಸಭೆ ವತಿಯಿಂದ ವಿದ್ಯುತ್‌ ಬಿಲ್‌ ಭರಿಸಲಾಗುತ್ತಿದೆ. ದೀಪಗಳು ಉರಿಯದ ಕುರಿತು ತತ್‌ಕ್ಷಣ ಗಮನಹರಿಸಿ ಸರಿಪಡಿಸಲಾಗುವುದು. ತ್ಯಾಜ್ಯ ವಿಲೇಗೆ 45 ಕಸದ ಡಬ್ಬಗಳನ್ನು ತರಿಸಲಾಗುತ್ತಿದ್ದು ಅಳವಡಿಸಲಾಗುವುದು. ಶೌಚಾಲಯಗಳನ್ನು ಕೂಡ ತರಿಸಲಾಗುತ್ತಿದೆ.
– ಗೋಪಾಲಕೃಷ್ಣ ಶೆಟ್ಟಿ ಮುಖ್ಯಾಧಿಕಾರಿ, ಪುರಸಭೆ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next