Advertisement

ಮಂದಾರದಲ್ಲಿ 27 ಕುಟುಂಬಸ್ಥರ ಬದುಕು ಕಸಿದ ಕಸದ ರಾಶಿ; ಇನ್ನೂ ಇಲ್ಲ ಪರಿಹಾರ!

10:14 PM Aug 24, 2020 | mahesh |

ಮಹಾನಗರ: ಪಚ್ಚನಾಡಿಯ ತ್ಯಾಜ್ಯರಾಶಿ ಮಂದಾರಕ್ಕೆ ಜರಿದು ವರ್ಷ ಕಳೆದರೂ ಇನ್ನೂ ಕೂಡ ತ್ಯಾಜ್ಯ ರಾಶಿಯ ವಿಲೇವಾರಿ ಮಾಡಲು ಸರಕಾರದ ಕಡೆಯಿಂ ದಾಗಲಿ ಅಥವಾ ಜವಾಬ್ದಾರಿ ಹೊತ್ತಿರುವ ಪಾಲಿಕೆಯಾಗಲಿ ಆಸಕ್ತಿ ತೋರಿಸಿಲ್ಲ; ಜತೆಗೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಎಂಬುದು ಇನ್ನೂ ಗಗನ ಕುಸುಮವಾಗಿದೆ.

Advertisement

ಕಳೆದ ವರ್ಷ ಆಗಸ್ಟ್‌ ಮೊದಲ ವಾರದಲ್ಲಿ ಪಚ್ಚನಾಡಿಯ ತ್ಯಾಜ್ಯರಾಶಿ ಜರಿದು ಮಂದಾರ ವ್ಯಾಪ್ತಿಯ 2 ಕಿ.ಮೀ. ವ್ಯಾಪ್ತಿ ಯಲ್ಲಿ ವ್ಯಾಪಿಸಿ ಸುಮಾರು 27 ಮನೆಗಳ ಜನರನ್ನು ಸಂತ್ರಸ್ತರನ್ನಾಗಿಸಿತ್ತು. ಮನೆ, ಅಡಿಕೆ ತೋಟ, ಕೃಷಿ, ನಾಗ ಬನ ಸಹಿತ ಅಮೂಲ್ಯ ವಸ್ತುಗಳು ತ್ಯಾಜ್ಯ ರಾಶಿಯೊಳಗೆ ಸೇರಿತ್ತು.

ಮಂದಾರದಲ್ಲಿ ಹರಡಿರುವ ತ್ಯಾಜ್ಯ ರಾಶಿ ಯನ್ನು ವಿಲೇವಾರಿ ಯಾವ ರೀತಿಯಲ್ಲಿ ಮಾಡಬಹುದು ಎಂಬುದಕ್ಕೆ ದೇಶದ ವಿವಿಧ ತಜ್ಞರ ಸಮಿತಿಗಳು ಒಂದು ವರ್ಷದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಅವಲೋಕಿಸಿ ಸರಕಾರಕ್ಕೆ ವರದಿ ನೀಡಿವೆ. ಆದರೆ ಯಾವ ವರದಿಯು ಇಲ್ಲಿಯವರೆಗೆ ಅಂತಿಮವಾಗಿಲ್ಲ. ಪರಿಣಾಮ ತ್ಯಾಜ್ಯರಾಶಿಯೊಳಗಿನ ನೀರು ಈಗಲೂ ಫಲ್ಗುಣಿ ನದಿ ಸೇರುತ್ತಿದೆ. ತ್ಯಾಜ್ಯರಾಶಿಯನ್ನು ಅಲ್ಲಿಂದ ವಿಲೇವಾರಿ ಮಾಡುವ ಬಗ್ಗೆ ಆಡಳಿತ ವ್ಯವಸ್ಥೆ ಹತ್ತಾರು ಸಭೆ, ರಾಜಕೀಯ ನಾಯಕರ ಸ್ಥಳ ಭೇಟಿ, ಅಧಿಕಾರಿಗಳ ಪರಾಮರ್ಶಿಸಿದರೂ ಪ್ರಯೋಜನ ಏನೂ ಆಗಿಲ್ಲ. ಘಟನೆ ಯಾಕಾ ಯಿತು? ಎಂಬ ಬಗ್ಗೆ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಎರಡು ಬಾರಿ ತನಿಖೆಗೆ ಆದೇಶಿಸಿದರೂ ಅದು ಯಾವ ಹಂತದಲ್ಲಿದೆ ಎಂಬುದು ತಿಳಿಯುತ್ತಿಲ್ಲ.

ಮಂದಾರ ರಾಜೇಶ್‌ ಭಟ್‌ ಅವರು “ಸುದಿನ’ ಜತೆಗೆ ಮಾತನಾಡಿ, ಪಚ್ಚನಾಡಿ ಯಿಂದ ಮಂದಾರಕ್ಕೆ ಜರಿದು ಬಿದ್ದ ತ್ಯಾಜ್ಯ ಹಾಗೆಯೇ ಇದೆ. ಪಚ್ಚನಾಡಿಯಲ್ಲಿ ಪ್ರತೀ ದಿನವೂ 400 ಟನ್‌ನಷ್ಟು ತ್ಯಾಜ್ಯವನ್ನು ಡಂಪ್‌ ಮಾಡುತ್ತಲೇ ಇದ್ದಾರೆ. ಸುಮಾರು 14 ಮಂದಿಗೆ ಕೃಷಿ, ಬೆಳೆ ಪರಿಹಾರ ದೊರಕಿದ್ದು ಬಿಟ್ಟರೆ ಉಳಿದ ಯಾರಿಗೂ ಇಲ್ಲಿಯವರೆಗೆ ಪರಿಹಾರವೇ ದೊರಕಿಲ್ಲ. ಭೂಮಿ, ಮನೆ, ಕೃಷಿ ಕಳೆದುಕೊಂಡವರಿಗೆ ಗರಿಷ್ಠ ಪರಿಹಾರ ನೀಡಬೇಕು, ಸಂತ್ರಸ್ತರಿಗೆ ಬದಲಿ ವ್ಯವಸ್ಥೆಯನ್ನು ಈಗಿನ ವಸತಿ ಸಮುಚ್ಚಯದಲ್ಲಿಯೇ ಮಾಡಬೇಕು, ಮಂದಾರದಲ್ಲಿ ಹರಡಿರುವ ತ್ಯಾಜ್ಯವನ್ನು ಸಂಪೂರ್ಣವಾಗಿ ತೆಗೆದು ಅಲ್ಲಿ ಸ್ಥಳೀಯರಿಗೆ ಖಾಯಂ ರಸ್ತೆ, 24 ಗಂಟೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಸ್ಥಳೀಯ ಹೋರಾಟಗಾರ ರಂಜಿತ್‌ ಸಾಲ್ಯಾನ್‌ “ಸುದಿನ’ ಜತೆಗೆ ಮಾತನಾಡಿ, ಮಂದಾರದಲ್ಲಿ ವ್ಯಾಪಿಸಿರುವ ತ್ಯಾಜ್ಯರಾಶಿ ಯನ್ನು ಸಂಪೂರ್ಣ ವಿಲೇವಾರಿ ಮಾಡಿ ಅಲ್ಲಿನ ನಿವಾಸಿಗಳು ಸ್ವತಂತ್ರವಾಗಿ ಬದುಕುವ ಹಕ್ಕನ್ನು ಸರಕಾರ ನೀಡಬೇಕು ಎಂದಿದ್ದಾರೆ.

Advertisement

ಪರಿಶೀಲಿಸಿ ಸೂಕ್ತ ಕ್ರಮ
ಮಂದಾರದಲ್ಲಿ ತ್ಯಾಜ್ಯರಾಶಿ ವ್ಯಾಪಿಸಿ ಆಗಿರುವ ಸಮಸ್ಯೆಗಳ ನಿವಾರಣೆ ಕುರಿತಂತೆ ಒಂದೆರಡು ದಿನದೊಳಗೆ ಸ್ಥಳಕ್ಕೆ ಭೇಟಿ ನೀಡಿ ಕೂಲಂಕುಷವಾಗಿ ಪರಿಶೀಲಿಸಲಾಗುವುದು. ಅಲ್ಲಿನ ತ್ಯಾಜ್ಯವನ್ನು ವಿಲೇವಾರಿ ಮಾಡಿ ಅದನ್ನು ವಿದ್ಯುತ್‌ ಉತ್ಪಾದನೆ ಮಾಡುವ ಕುರಿತ ಚಿಂತನೆ ಇದೆ. ಜತೆಗೆ ಅಲ್ಲಿನ ಸಂತ್ರಸ್ತರಿಗೆ ಶಾಶ್ವತ ಪುನ ರ್ವಸತಿ ಬಗ್ಗೆ ವಸತಿ ನಿಗಮದ ಜತೆಗೆ ಚರ್ಚಿಸಲಾಗುವುದು.
– ಡಾ| ರಾಜೇಂದ್ರ ಕೆ.ವಿ.,ಜಿಲ್ಲಾಧಿಕಾರಿ, ದ.ಕ.

ಆಡಳಿತಗಾರರ ಗಮನಕ್ಕೆ ತರಲಾಗುವುದು
ಮಂದಾರಕ್ಕೆ ಜರಿದ ತ್ಯಾಜ್ಯವನ್ನು ಅಲ್ಲಿಂದ ಸಂಪೂರ್ಣ ವಿಲೇವಾರಿ ಮಾಡುವುದು, ಎಲ್ಲ ಸಂತ್ರಸ್ತರಿಗೆ ಪೂರ್ಣ ರೀತಿಯ ಪರಿಹಾರ ನೀಡುವುದು, ರಸ್ತೆ, ನೀರಿನ ಸಮಗ್ರ ವ್ಯವಸ್ಥೆಯನ್ನು ಪಾಲಿಕೆ, ಸರಕಾರ ಮಾಡಬೇಕಿದೆ. ಈ ನಿಟ್ಟಿನಲ್ಲಿ ಆಡಳಿತ ನಡೆಸುವವರ ಗಮನಕ್ಕೆ ತರಲಾಗಿದೆ.
 - ಭಾಸ್ಕರ್‌ ಕೆ.,ಸ್ಥಳೀಯ ಕಾರ್ಪೊರೇಟರ್‌

Advertisement

Udayavani is now on Telegram. Click here to join our channel and stay updated with the latest news.

Next