Advertisement
ಕಂದಾವರ: ಇಲ್ಲಿನ ಗ್ರಾ.ಪಂ. ಆಡಳಿತ ತನ್ನ ವ್ಯಾಪ್ತಿಯಲ್ಲಿ ತ್ಯಾಜ್ಯದ ರಾಶಿಯನ್ನು ತಪ್ಪಿಸಲು ವಿನೂತನ ಶೈಲಿಯ ಪರಿಹಾರಕ್ಕೆ ಮೊರೆ ಹೋಗಿದೆ. ಗ್ರಾ.ಪಂ.ಗೆ ಹಾಗೂ ನಾಡ ಕಚೇರಿಗೆ ಬರುವ ರಸ್ತೆಯಲ್ಲಿ ಮತ್ತು ಕೈಕಂಬದಿಂದ ಬಜಪೆಗೆ ಬರುವ ರಸ್ತೆಯಲ್ಲಿ ಕೆಲವರು ತ್ಯಾಜ್ಯವನ್ನು ಬಿಸಾಡಿ ಹೋಗುತ್ತಿದ್ದರು. ಇದರಿಂದ ಗ್ರಾ.ಪಂ.ಗೆ ಸಾರ್ವಜನಿಕರು ಹಾಗೂ ಶಾಲೆಯಿಂದ ದೂರು ಬಂದಿತ್ತು. ಈ ಬಗ್ಗೆ ಗ್ರಾ.ಪಂ. ಸಿಸಿ ಕೆಮರಾ, ಎಚ್ಚರಿಕೆ ಫಲಕ ಹಾಗೂ ಪೈಪ್ ಕಾಂಪೋಸ್ಟ್ ಬಗ್ಗೆ ಮಾಹಿತಿ ಫಲಕವನ್ನು ಹಾಕಿತು. ಆ ಮೂಲಕ ತ್ಯಾಜ್ಯ ನಿಯಂತ್ರಿಸಲು ಆಲೋಚಿಸಿತ್ತು. ಆದರೂ ತ್ಯಾಜ್ಯ ರಾಶಿ ದಿನದಿಂದ ದಿನಕ್ಕೆ ಹೆಚ್ಚಾಯಿತು.
ತ್ಯಾಜ್ಯ ರಾಶಿಗೂ ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗೂ ಸಂಬಂಧವಿರುವಂತೆ ಕಾಣುತ್ತಿದೆ. ಯಾಕೆಂದರೆ, ಎಲ್ಲಿ ಟ್ರಾನ್ಸ್‌ಫಾರ್ಮರ್(ಟಿಸಿ) ಇದೆಯೋ ಅಲ್ಲಿ ಕೆಲವರು ತಾಜ್ಯ ಬಿಸಾಡುತ್ತಿದ್ದಾರೆ. ಇದು ಎಲ್ಲ ಗ್ರಾ.ಪಂ.ಗಳಲ್ಲಿ ಕಾಣುತ್ತಿದ್ದೇವೆ. ಒಂದು ಗ್ರಾ.ಪಂ. ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಮೆಸ್ಕಾಂ ಇಲಾಖೆಯೊಂದಿಗೇ ಪ್ರಶ್ನಿಸಿದ್ದರು. ಇದರಿಂದ ಮೆಸ್ಕಾಂ ಇಲಾಖೆಗೂ ತ್ಯಾಜ್ಯದ ಬಿಸಿ ತಾಗಿತ್ತು. ಈ ತ್ಯಾಜ್ಯ ರಾಶಿಯ ದುರ್ವಾಸನೆಯಿಂದ ಲೈನ್‌ಮನ್‌ಗಳು ಟ್ರಾನ್ಸ್ ಫಾರ್ಮರ್ ಹತ್ತಿರ ಬರಲು ಕೇಳುವುದಿಲ್ಲ ಎಂಬ ಮಾತೂ ಗ್ರಾಮ ಸಭೆಯಲ್ಲಿ ಕೇಳಿ ಬಂದಿತ್ತು. ಈ ಎಲ್ಲ ಕ್ರಮಗಳಿಂದ ಸಾಧ್ಯವಾಗದ ಗ್ರಾ.ಪಂ. ಈಗ ಒಂದೆಡೆ ವಿಶ್ವ ಪರಿಸರ ದಿನದಂದು ತ್ಯಾಜ್ಯವನ್ನೆಲ್ಲ ತೆಗೆದು ಸ್ವಚ್ಛ ಮಾಡಿದೆ. ಜತೆಗೆ ಅಲ್ಲಿಯೇ ಸಮೀಪದ ಒಂದು ಗೂಡಂಗಡಿಯವರನ್ನು ಆ ಜಾಗದಲ್ಲಿ ಕೂರಿಸಿ, ತ್ಯಾಜ್ಯ ಬಿಸಾಡುವವರ ಬಗ್ಗೆ ಮಾಹಿತಿ ಸಂಗ್ರಹಿಸುವ ಕೆಲಸವನ್ನು ವಹಿಸಲಾಗಿದೆ. ಗ್ರಾ.ಪಂ.ಗೆ ಬರುವ ರಸ್ತೆಯ ಬದಿಯಲ್ಲಿ ಬೇಲಿ ಹಾಕಿ, ತ್ಯಾಜ್ಯ ಬಿಸಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಇಲ್ಲಿ ಸುಂದರ ಹೂತೋಟ ನಿರ್ಮಿಸಲು ಸಹಕರಿಸಿ ಎಂದು ಎಂದು ಫಲಕವನ್ನು ಹಾಕಲಾಗಿದೆ. ಇದರಿಂದ ಈಗ ತ್ಯಾಜ್ಯದ ರಾಶಿ ಎರಡೂ ಕಡೆ ಇಲ್ಲವಾಗಿದೆ.
Related Articles
ಈಗ ಅಲ್ಲಿ ಸುಂದರ ಹೂ ತೋಟವನ್ನು ನಿರ್ಮಿಸುವ ಯೋಜನೆ ಇದೆ. ತ್ಯಾಜ್ಯಕ್ಕೂ ಮುಕ್ತಿ, ಗ್ರಾಮ ಪಂಚಾಯತ್ ಹಾಗೂ ನಾಡ ಕಚೇರಿಗೆ ಬರುವಾಗ ತ್ಯಾಜ್ಯದಿಂದ ಅಸೂಯೆ ಆಗುತ್ತಿತ್ತು. ಈಗ ಬೇಲಿ ಹಾಗೂ ಹೂ ದೋಟವನ್ನು ರೂಪಿಸುತ್ತೇವೆ ಎಂದು ಫಲಕ ಹಾಕಿದ ಮೇಲೆ ತ್ಯಾಜ್ಯದ ರಾಶಿ ಬೀಳುತ್ತಿಲ್ಲ ಎನ್ನುತ್ತಾರೆ ಕಂದಾವರ ಗ್ರಾ.ಪಂ. ಪಿಡಿಒ ರೋಹಿಣಿ. ಈ ಜಾಗ ಮೂಳೂರು ಗ್ರಾಮದಲ್ಲಿದ್ದು, ಗುರುಪುರ ಗ್ರಾ.ಪಂ.ಗೆ ಸೇರಿದೆ. ಸುಂದರ ಹೂತೋಟ ರೂಪಿಸಲು 1.80 ಲಕ್ಷ ರೂ. ಬೇಕು. ಉದ್ಯೋಗ ಖಾತರಿಯಲ್ಲಿ ಈ ಬಗ್ಗೆ ಕ್ರಮ ಜರುಗಿಸುವುದಾಗಿ ಅವರು ತಿಳಿಸಿದ್ದಾರೆ.
Advertisement
ತ್ಯಾಜ್ಯಕ್ಕೆ ಮುಕ್ತಿಗುರುಪುರ ಹಾಗೂ ಕಂದಾವರ ಗ್ರಾಮ ಪಂಚಾಯತ್ ಜಂಟಿ ಅಶ್ರಯದಲ್ಲಿ ಈ ಹೂ ತೋಟವನ್ನು ಮಾಡುವ ಬಗ್ಗೆ ಚರ್ಚಿಸಲಾಗುವುದು. ಇದರಿಂದ ತ್ಯಾಜ್ಯಕ್ಕೂ ಮುಕ್ತಿ ಮತ್ತು ಪರಿಸರವೂ ಸುಂದರಗೊಳ್ಳಲಿದೆ.
– ಯು.ಪಿ.ಇಬ್ರಾಹಿಂ, ಜಿ.ಪಂ. ಸದಸ್ಯ – ಸುಬ್ರಾಯ ನಾಯಕ್ ಎಕ್ಕಾರು