Advertisement
ಮುಳ್ಳಿಕಟ್ಟೆಯಿಂದ ಗುಜ್ಜಾಡಿಗೆ ಸಂಚರಿಸುವ ಮುಖ್ಯ ರಸ್ತೆಯ ಸಮೀಪ ಗೇರು ಅಭಿವೃದ್ಧಿ ನಿಗಮದ ಅಧೀನದ ಗೇರು ಪ್ಲಾಂಟೇಶನ್‌ಗಳಿವೆ. ಇಲ್ಲಿ ಕಸ ಎಸೆದು ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಶುಕ್ರವಾರವೂ ಬೇರೆಲ್ಲಿಂದಲೋ ಗೂಡ್ಸ್ ಟೆಂಪೋದಲ್ಲಿ ಬಂದವರು ಇಲ್ಲಿ ಕಸವನ್ನು ಎಸೆಯುತ್ತಿದ್ದರು. ಇದನ್ನು ಗಮನಿಸಿದ ಗುಜ್ಜಾಡಿ ಮಂಕಿಯ ನಾಗರಾಜ್ ಮಯ್ಯ ಎನ್ನುವವರು ಅವರನ್ನು ತಡೆದು, ಇನ್ನು ಮುಂದೆ ಇಲ್ಲಿ ಕಸ ತಂದು ಎಸೆಯಬಾರದು ಎಂದು ಎಚ್ಚರಿಸಿದ್ದಲ್ಲದೆ, ಅವರಲ್ಲಿಯೇ ಕಸವನ್ನು ಹೆಕ್ಕಿ, ಮತ್ತೆ ವಾಹನದಲ್ಲಿ ತುಂಬಿಸಿ ಕಳುಹಿಸಿದ್ದಾರೆ.
ಈ ಮುಳ್ಳಿಕಟ್ಟೆ- ಗುಜ್ಜಾಡಿ ಮುಖ್ಯ ರಸ್ತೆಯ ಇಕ್ಕೆಲಗಳ ಚರಂಡಿ, ಗೇರು ತೋಪುಗಳೆಲ್ಲವೂ ಈಗ ಕಸ ಎಸೆಯುವ ಡಂಪಿಂಗ್ ಯಾರ್ಡ್ ಆಗಿ ಕಾಣುತ್ತಿದೆ. ಎಲ್ಲೆಲ್ಲಿಂದ ಇಲ್ಲಿಗೆ ವಾಹನಗಳಲ್ಲಿ ಬರುವ ನಾಗರೀಕರು ಇಲ್ಲಿ ಕಸ ಎಸೆದು ಹೋಗುತ್ತಿದ್ದಾರೆ. ಪಂಚಾಯತ್‌ನವರು ಈ ಬಗ್ಗೆ ಎಷ್ಟು ಸಲ ಅರಿವು ಮೂಡಿಸಿದರೂ ಕಸ ಎಸೆಯುವುದಕ್ಕೆ ಮಾತ್ರ ಕಡಿವಾಣವೇ ಬಿದ್ದಿಲ್ಲ.