Advertisement

Garbage disposal : ರಾ-ಚನ್ನಪಟ್ಟಣದಲ್ಲಿ ಕಸ ವಿಲೇವಾರಿ ಕಗ್ಗಂಟು

10:24 AM Sep 16, 2023 | Team Udayavani |

ರಾಮನಗರ: ಜಿಲ್ಲೆಯ ಪ್ರಮುಖ ನಗರಗಳಾದ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿ ದಿನೇ ದಿನೆ ಕಗ್ಗಂಟಾಗುತ್ತಿದ್ದು, ತ್ಯಾಜ್ಯ ವಿಲೇವಾರಿಗೆ ಸಮರ್ಪಕ ಡಂಪಿಂಗ್‌ ಯಾರ್ಡ್‌ ಇಲ್ಲದೆ, ನಿತ್ಯ ಸಂಗ್ರಹವಾಗುವ ಕಸ ವಿಲೇವಾರಿ ಎರಡೂ ನಗರಗಳಿಗೆ ತಲೆನೋವಾಗಿ ಪರಿಣಮಿಸಿದೆ.

Advertisement

ರಾಮನಗರ 1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಪ್ರತಿದಿನ 40 ಟನ್‌ನಷ್ಟು ತ್ಯಾಜ್ಯ ಸಂಗ್ರಹಣೆಯಾಗುತ್ತದೆ. ಇನ್ನು ಚನ್ನಪಟ್ಟಣ 70 ಸಾವಿರ ಜನಸಂಖ್ಯೆ ಹೊಂದಿದ್ದು, ನಿತ್ಯ 30 ಟನ್‌ ತ್ಯಾಜ್ಯ ಸಂಗ್ರಹಣೆಯಾಗುತ್ತಿದೆ. ಈ ತ್ಯಾಜ್ಯವನ್ನು ಎಲ್ಲಿಗೆ ಸುರಿಯುವುದು ಎಂಬುದು ಯಕ್ಷ ಪ್ರಶ್ನೆಯಾಗಿದ್ದು, ತ್ಯಾಜ್ಯ ನಿರ್ವಹಣೆಗೆ ಸೂಕ್ತ ಸ್ಥಳವಿಲ್ಲದೆ ಎರಡೂ ನಗರಸಭೆಗಳು ಪ್ರತಿದಿನ ಲಾರಿಯಲ್ಲಿ ಕಸವನ್ನು ತುಂಬಿಕೊಂಡು ಖಾಲಿ ಜಾಗ ಹುಡುಕಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.

ನಗರಸಭೆ ಮನೆ ಮತ್ತು ವಾಣಿಜ್ಯ ಪ್ರದೇಶಗಳಿಗೆ ಪ್ರತಿದಿನ ತೆರಳಿ ಕಸ ಸಂಗ್ರಹಿಸಬೇಕು. ಆದರೆ, ಈ ಎರಡೂ ನಗರಸಭೆ ವ್ಯಾಪ್ತಿಯಲ್ಲಿ ಜಾಗ ಸಿಕ್ಕರಷ್ಟೇ ಕಸ ವಿಲೇವಾರಿ ಎಂಬ ಪರಿಸ್ಥಿತಿ ನಿರ್ಮಾಣಗೊಂಡಿದೆ. ತ್ಯಾಜ್ಯ ಸಂಸ್ಕರಣೆ ಮತ್ತು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸೂಕ್ತ ಡಂಪಿಂಗ್‌ ಯಾರ್ಡ್‌ ಇಲ್ಲದ ಕಾರಣ, ಹೊರ ವಲಯದಲ್ಲಿರುವ ಖಾಸಗಿ ಜಮೀನುಗಳಿಗೆ ಕಸ ಸುರಿದು ಮುಚ್ಚುವ ಕೆಲಸವನ್ನು ನಗರಸಭೆ ಮಾಡುತ್ತಿದೆ. ಕೆಲ ರೈತರ ಜಮೀನು, ಪಾಳುಬಿದ್ದಿರುವ ಗುಂಡಿಗಳಲ್ಲಿ ಕಸ ಹಾಕಿ ಮುಚ್ಚಿ ಹಾಕಲಾಗುತ್ತಿದೆ. ಈ ಜಮೀನು ಭರ್ತಿಯಾದರೆ ಮತ್ತೆ ಹೊಸದಾಗಿ ಜಾಗ ಸಿಗುವ ವರೆಗೆ ಕಸ ವಿಲೇವಾರಿಯಾಗದೆ ರಸ್ತೆ ಬದಿ ಕಸದ ಗುಡ್ಡೆಗಳು ರಾಶಿರಾಶಿಯಾಗಿ ಕಂಡು ಬರುತ್ತವೆ.

10 ವರ್ಷಗಳಿಂದ ಬಗೆಹರಿಯದ ಸಮಸ್ಯೆ: ರಾಮನಗರ-ಚನ್ನಪಟ್ಟಣ ಎರಡೂ ನಗರಸಭೆಗಳಿಗೆ ಸೇರಿ ರಾಮನಗರ ತಾಲೂಕಿನ ಚಾಮನಹಳ್ಳಿ ಬಳಿ ಸರ್ಕಾರಿ ಗೋಮಾಳದಲ್ಲಿ 50 ಎಕರೆ ಜಾಗವನ್ನು ಜಿಲ್ಲಾಡಳಿತ ಮಂಜೂರು ಮಾಡಿತ್ತು. ಎರಡೂ ನಗರಸಭೆಗಳಿಗೆ ತಲಾ 25 ಎಕರೆ ಭೂಮಿ ಹಂಚಲಾಗಿತ್ತು. ಈ ಜಾಗದಲ್ಲಿ ಎರಡೂ ನಗರಸಭೆಗಳು ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡದೆ ಡಂಪಿಂಗ್‌ ಯಾರ್ಡ್‌ ಸುತ್ತಮುತ್ತಲ ಗ್ರಾಮಗಳಿಗೆ ಸಮಸ್ಯೆ ಎದುರಾದ ಪರಿಣಾಮ ಸ್ಥಳೀಯರ ತೀವ್ರ ಪ್ರತಿರೋಧದ ಪರಿಣಾಮ ಡಂಪಿಂಗ್‌ ಯಾರ್ಡ್‌ಗೆ ತ್ಯಾಜ್ಯ ಸುರಿಯುವುದು ಬಂದ್‌ ಆಯಿತು. ಅಂದಿನಿಂದ ತ್ಯಾಜ್ಯ ನಿರ್ವಹಣೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಸಿಗದ ಪರ್ಯಾಯ ವ್ಯವಸ್ಥೆ: ಸಿಕ್ಕ ಜಾಗವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ನಗರಸಭೆಗಳು ವಿಫಲಗೊಂಡ ಪರಿಣಾಮ ಎರಡೂ ನಗರಗಳ ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳ ಸಿಗದಾಗಿದೆ. ಕೆಲವೆಡೆ ಡಂಪಿಂಗ್‌ ಯಾರ್ಡ್‌ಗೆ ನಗರಸಭೆ ವತಿಯಿಂದ ಜಾಗ ಗುರುತಿಸಲಾಯಿತಾದರೂ ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ ಪರಿಣಾಮ ಕೈಬಿಡು ವಂತಾಯಿತು. ಡಂಪಿಂಗ್‌ ಯಾರ್ಡ್‌ ಸ್ಥಾಪನೆಗೆ ಜಿಲ್ಲಾಡಳಿತ ಹಾಗೂ ಸರ್ಕಾರ ಕ್ರಮ ಕೈಗೊಳ್ಳದಿರುವುದು ಸಮಸ್ಯೆ ಉಲ್ಬಣವಾಗುವಂತೆ ಮಾಡಿದೆ.

Advertisement

ಬೇಕಾಬಿಟ್ಟಿ ತ್ಯಾಜ್ಯ ವಿಲೇವಾರಿ: ಜಿಲ್ಲೆಯ ಎರಡೂ ನಗರಸಭೆಗಳು ತ್ಯಾಜ್ಯ ವಿಲೇವಾರಿಯ ವಿಚಾರದಲ್ಲಿ ಉದಾಸೀನ ಮಾಡುತ್ತಿವೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ರಮಗಳನ್ನು ಉಲ್ಲಂಘಿಸಿ ಬೇಕಾಬಿಟ್ಟಿ ತ್ಯಾಜ್ಯ ವಿಲೇವಾರಿ ಮಾಡುತ್ತಿವೆ ಎಂಬ ಆಪಾದನೆಗಳಿದ್ದು, ಖಾಸಗಿ ಜಮೀನಿಗೆ ರಾತ್ರಿ ಸಮಯದಲ್ಲಿ ನಗರಸಭೆಯ ಕಸದ ಲಾರಿಗಳು ತ್ಯಾಜ್ಯವನ್ನು ಹೊತ್ತುಕೊಂಡು ಹೋಗಿ ಸುರಿದು ಬರುತ್ತಿವೆ. ಕೆಲ ದಿನಗಳ ಬಳಿಕ ಮುಚ್ಚಲಾಗುತ್ತದೆ. ಇದು ಭವಿಷ್ಯದಲ್ಲಿ ಅಪಾಯಕಾರಿಯಾಗಿದ್ದು, ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡದೆ ಬೇಕಾಬಿಟ್ಟಿ ಸುರಿದು ಬರುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಪರಿಸರ ಇಲಾಖೆ ಹಾಗೂ ಜಿಲ್ಲಾಡಳಿತ ಗಮನ ಹರಿಸಬೇಕಿದೆ.

ರಸ್ತೆ ಬದಿಯಲ್ಲಿ ಕಸ ಸುರಿದು ಬೆಂಕಿ: ಚನ್ನಪಟ್ಟಣ ನಗರಸಭೆ ವತಿಯಿಂದ ಕುಡಿಯುವ ನೀರಿನ ಕಟ್ಟೆ ಪಕ್ಕದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ನಗರದ ಬಹುತೇಕ ಕಸ ಕುಡಿಯುವ ನೀರಿನ ಕಟ್ಟೆಯ ಎರಡೂ ಬದಿಯಲ್ಲಿ ವಿಲೇವಾರಿ ಮಾಡುತ್ತಿದ್ದು, ಇದರಿಂದಾಗಿ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಇನ್ನು ಪ್ರತಿದಿನ ಕುಡಿನೀರು ಕಟ್ಟೆ ಬದಿಯ ಕೆಂಗಲ್‌ ದೇವಾಲಯದ ಜಾಗದಲ್ಲಿ ಕಸವನ್ನು ಸುರಿದು ಬೆಂಕಿ ಹಾಕುತ್ತಿದ್ದು, ಇದರಿಂದ ಈಭಾಗದಲ್ಲಿ ಸುತ್ತುವರಿಯುವ ದಟ್ಟಹೊಗೆ ಇಡೀ ಪ್ರದೇಶದಲ್ಲಿ ಆವರಿಸಿ ಜನತೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಬೆಂಗಳೂರು-ಮೈಸೂರು ಹಳೇ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೂ ಈ ದಟ್ಟ ಹೊಗೆಯಿಂದ ಕಿರಿಕಿರಿಯಾಗುತ್ತಿದೆ. ಈ ಬಗ್ಗೆ ನಗರಸಭೆ ಗಮನಹರಿಸುತ್ತಿಲ್ಲ.

50 ಎಕರೆ ಭೂಮಿ ಮಂಜೂರು ಆಗಿದ್ದರೂ ವೈಜ್ಞಾನಿಕವಾಗಿ ಬಳಸಿಕೊಳ್ಳುತ್ತಿಲ್ಲ : ಎರಡೂ ನಗರಸಭೆಗಳಿಗೆ ತ್ಯಾಜ್ಯ ವಿಲೇವಾರಿ ಮಾಡುವುದು ಕಷ್ಟವೇನಲ್ಲ. ಇದಕ್ಕಾಗಿ ಜಾಗ ಕೂಡ ಇದೆ. ಆದರೆ ಇದನ್ನು ಸರಿಯಾಗಿ ಬಳಸಿಕೊಳ್ಳದಿರುವುದೇ ಇಷ್ಟೆಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ. ರಾಮನಗರ ತಾಲೂಕಿನ ಚಾಮನಹಳ್ಳಿ ಬಳಿ ಸರ್ಕಾರಿ ಗೋಮಾಳದಲ್ಲಿ 50 ಎಕರೆ ಭೂಮಿಯಲ್ಲಿ ರಾಮನಗರ-ಚನ್ನಪಟ್ಟಣ ಎರಡೂ ನಗರಸಭೆಗಳಿಗೆ ಸೇರಿ ಜಿಲ್ಲಾಡಳಿತ ಮಂಜೂರು ಮಾಡಿ, ಎರಡೂ ನಗರಸಭೆಗಳಿಗೆ ತಲಾ 25 ಎಕರೆ ಭೂಮಿ ಹಂಚಿತ್ತು. ಆದರೆ ಇಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿರಲಿಲ್ಲ. ಹೀಗಾಗಿ ಅಕ್ಕಪಕ್ಕ ಹಳ್ಳಿಗಳಿಗ ೆಗ್ರಾಮಗಳಿಗೆ ಸಮಸ್ಯೆ ಎದುರಾದ ಪರಿಣಾಮ ಸ್ಥಳೀಯರ ತೀವ್ರ ಪ್ರತಿರೋಧದ ಕಾರಣ ಡಂಪಿಂಗ್‌ ಯಾರ್ಡ್‌ಗೆ ತ್ಯಾಜ್ಯ ಸುರಿಯುವುದು ಬಂದ್‌ ಆಯಿತು. ಅಂದಿನಿಂದ ತ್ಯಾಜ್ಯ ನಿರ್ವಹಣೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಡಂಪಿಂಗ್‌ ಯಾರ್ಡ್‌ಗೆ ಜಾಗ ಸಿಕ್ಕರೆ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಲು ನಗರಸಭೆ ಕ್ರಮ ಕೈಗೊಳ್ಳುತ್ತದೆ. ತ್ಯಾಜ್ಯ ಸಮಸ್ಯೆ ಪರಿಹರಿಸಲು ನಗರಸಭೆ ಜತೆಗೆ ಸಾರ್ವಜನಿಕರೂ ಸಹಕರಿಸಬೇಕು. ಇನ್ನು ಕುಡಿನೀರು ಕಟ್ಟೆ ಬಳಿ ತ್ಯಾಜ್ಯಕ್ಕೆ ಬೆಂಕಿ ಹಾಕುತ್ತಿರುವುದು ಕೆಲ ವ್ಯಕ್ತಿಗಳಾಗಿದ್ದ ಅವರು ತ್ಯಾಜ್ಯದಲ್ಲಿ ಸಂಗ್ರಹವಾಗುವ ಲೋಹದ ವಸ್ತುಗಳನ್ನು ಬೇರ್ಪಡಿಸುವುದಕ್ಕೆ ಈ ರೀತಿ ಬೆಂಕಿ ಹಾಕುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲಾಗುವುದು. – ಸಿ.ಪುಟ್ಟಸ್ವಾಮಿ, ಪೌರಾಯುಕ್ತ ಚನ್ನಪಟ್ಟಣ

ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next