Advertisement

ಕಸ ವಿಲೇವಾರಿ ಅಸಮರ್ಪಕ: ಪಪಂ ಸದಸ್ಯರ ಆಕ್ರೋಶ

05:48 PM Jun 08, 2018 | Team Udayavani |

ಯಲ್ಲಾಪುರ: ಪಟ್ಟಣದ ತಾ.ಪಂ ಸಭಾ ಭವನದಲ್ಲಿ ಪ.ಪಂ ಸಾಮಾನ್ಯ ಸಭೆ ಗುರುವಾರ ಅಧ್ಯಕ್ಷ ಶಿರೀಷ ಪ್ರಭು ಅಧ್ಯಕ್ಷತೆಯಲ್ಲಿ ನಡೆಯಿತು. ಗಟಾರದ ನೈರ್ಮಲ್ಯತೆ ಕುರಿತು ಮತ್ತು ಅಸಮರ್ಪಕ ಕಸ ವಿಲೇವಾರಿ ಬಗ್ಗೆ ಹೆಚ್ಚಿನ ಸಮಯ ಚರ್ಚೆ ನಡೆದು, ಪ.ಪಂ ಮುಖ್ಯಾಧಿಕಾರಿ ಮತ್ತು ನೌಕರರನ್ನು ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡರು.

Advertisement

ಗಟಾರದಿಂದ ರಸ್ತೆ ಮೇಲೆ ಹಾಕಿದ ಕಸ ತಿಂಗಳಾದರೂ ವಿಲೇವಾರಿಯಾಗುತ್ತಿಲ್ಲ. ಅದನ್ನೂ ಸದಸ್ಯರೇ ಗಮನಕ್ಕೆ ತರಬೇಕು. ಕಳೆದ 5 ವರ್ಷದಿಂದ ಇದೇ ನಡೆಯುತ್ತಿದೆ ಎಂದು ಸದಸ್ಯರಾದ ಆರತಿ ನಾಯ್ಕ, ಯೋಗೇಶ ಹಿರೇಮಠ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾನಿ ಇನ್ನು ಮುಂದೆ ಸಮರ್ಪಕ ರೀತಿಯಲ್ಲಿ ಕಸ ವಿಲೇವಾರಿ ನಡೆಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು.

ಪೌರಕಾರ್ಮಿಕರ ಕೊರತೆಯಿದ್ದು, 15 ಕಾರ್ಮಿಕರನ್ನು ಹೆಚ್ಚುವರಿಯಾಗಿ ತೆಗೆದುಕೊಳ್ಳುವ ಬಗ್ಗೆ ಟೆಂಡರ್‌ ಕರೆಯಲಾಗಿದೆ ಎಂದೂ ತಿಳಿಸಿದರು.

ಅಂಗಡಿ ಲೈಸನ್ಸ್‌ ನವೀಕರಣದ ಬಗ್ಗೆ ಹತ್ತಾರು ಬಾರಿ ಕಾಗದಪತ್ರಕ್ಕಾಗಿ ಅಲೆದಾಡಿ ಸತಾಯಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಸಹಸ್ರಳ್ಳಿ ವಾರ್ಡಿಗೆ ಯಾವುದೇ ಅಭಿವೃದ್ಧಿ ಅನುದಾನ, ಕಾಮಗಾರಿ ನೀಡಿಲ್ಲ. ಈ ಬಗ್ಗೆ ಕೇಳಿದರೆ ಅದು ಗ್ರಾ.ಪಂ. ಗೆ ಸೇರ್ಪಡೆಯಾಗಲಿದೆ, ಪ.ಪಂನಿಂದ ಬೇರ್ಪಟ್ಟಿದೆ ಎಂದು ಹೇಳಲಾಗುತ್ತಿದೆ. ಆದರೆ ಸ್ಥಳೀಯರು ತಮ್ಮ ಅಹವಾಲನ್ನು ಎಲ್ಲಿ ಸಲ್ಲಿಸಬೇಕೆಂಬುದು ಪ್ರಶ್ನೆಯಾಗಿ ಉಳಿದಿದೆ ಎಂದು ಸಹಸ್ರಳ್ಳಿ ವಾರ್ಡ್‌ ಸದಸ್ಯ ವಿಶ್ವನಾಥ ಅಡಿಕೆಸರ ಆಕ್ರೋಶ ವ್ಯಕ್ತಪಡಿಸಿದರು. ಸಹಸ್ರಳ್ಳಿ ವಾರ್ಡ್‌ ಗ್ರಾ.ಪಂಗೆ ಸೇರಿದ ಬಗ್ಗೆ ಅಧಿಕೃತ ಆದೇಶ ಇನ್ನೂ ಬಂದಿಲ್ಲ. ಈ ಗೊಂದಲದಲ್ಲಿಯೇ ಎರಡು ಕ್ರಿಯಾಯೋಜನೆಯಲ್ಲಿ ವಾರ್ಡಿಗೆ ಯಾವುದೇ ಅಭಿವೃದ್ಧಿ ಕಾಮಗಾರಿ ನೀಡಿಲ್ಲ. ಹೀಗಿದ್ದ ಮೇಲೆ ನಮ್ಮ ಸದಸ್ಯತ್ವ ರದ್ದು ಮಾಡಿ. ಒಂದು ವೇಳೆ ಗ್ರಾ.ಪಂಗೆ ಸೇರ್ಪಡೆಯಾದರೂ ಎರಕನಬೈಲ್‌, ಕಾಂಬಳೆಕೇರಿ ಮಜರೆಗಳು ಪ.ಪಂಗೇ ಉಳಿಯುತ್ತದೆ. ಹೀಗಿದ್ದೂ
ತಾರತಮ್ಯವೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 2-3 ತಿಂಗಳ ಜಮಾ ಖರ್ಚು ವಿವರವನ್ನು ಇಂಗ್ಲಿಷ್‌ ಭಾಷೆಯಲ್ಲಿ ನೀಡಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ರವಿಚಂದ್ರ ನಾಯ್ಕ, ಕನ್ನಡಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದರು. ಇದಕ್ಕೆ ಎಲ್ಲ ಸದಸ್ಯರು ಬೆಂಬಲಿಸಿ, ಮುಂದಿನ ಸಭೆಗಳಲ್ಲಿ ಕನ್ನಡದಲ್ಲಿಯೇ ಮಾಹಿತಿ ನೀಡುವಂತೆ ಸಿಬ್ಬಂದಿಗೆ ಸೂಚಿಸಿದರು.

Advertisement

ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸಿದ್ದು, ಕಡಿಮೆ ದರದಲ್ಲಿ ರೈತರು ಅಗತ್ಯವಿದ್ದರೆ ಖರೀದಿಸಬಹುದು.
 ಮಹೇಂದ್ರ ತಿಮ್ಮಾನಿ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next