ಶಿರಾ: ಬಡ ಹಾಗೂ ಮಧ್ಯಮ ವರ್ಗದವರ ಹಸಿವು ತಣಿಸುವ ಸರ್ಕಾರದ ಕನಸಿನ ಇಂದಿರಾ ಕ್ಯಾಂಟೀನ್ ನಗರದಲ್ಲಿ ಸ್ಥಾಪಿಸಿ ಸುಮಾರು ಒಂದೂವರೆ ವರ್ಷ ಕಳೆದಿದೆ. ಕ್ಯಾಂಟಿನ್ ಛಾವಣಿಯನ್ನೇ ಕಸದ ತೊಟ್ಟಿಯನ್ನಾಗಿ ಮಾರ್ಪಾಟಾಗಿದೆ.
ಹಣ ಲೂಟಿ: ಸರ್ಕಾರ ತಿಂಡಿಗೆ 10 ರೂ.30 ಪೈಸೆ ಹಾಗೂ ಊಟಕ್ಕೆ 10 ರೂ. 50 ಪೈಸೆ ಸಹಾಯಧನ ನೀಡುತ್ತಿದೆ. ರಾತ್ರಿ ವೇಳೆ ಕೇವಲ 35ರಿಂದ 50 ಜನರು ಮಾತ್ರ ಊಟ ಮಾಡುತ್ತಿದ್ದಾರೆ. ಆದರೂ ಸರ್ಕಾರದಿಂದ ಹೆಚ್ಚಿನ ಹಣ ಲೂಟಿ ಮಾಡಲಾಗುತ್ತಿದೆ ಎಂಬ ದೂರು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಈ ಬಗ್ಗೆ ಪರಿಶೀಲಿಸಿ ಎಂದು ಹೇಳಿದರೆ ನಾನು ಊಟ ತಿಂಡಿ ಮಾಡುವುದನ್ನು ಎಣಿಸೋಕೆ ಆಗಲ್ಲ ಎಂದು ಬೇಜವಾಬ್ದಾರಿ ಉತ್ತರವನ್ನು ಪರಿಸರ ಇಂಜಿನಿಯರ್ ಪಲ್ಲವಿ ನೀಡುತ್ತಾರೆ.
ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲನೆ ಪುಸ್ತಕದಲ್ಲಿ ನ್ಯೂನತೆ ಬಗ್ಗೆ ಬರೆಯುವುದನ್ನು ಪರಿಪಾಠ ಬೆಳೆಸಿಕೊಂಡಿಲ್ಲ. ನಿರ್ವಹಣೆ ಹೊಣೆ ಹೊತ್ತ ಅಧಿಕಾರಿಗಳು ಕ್ಯಾಂಟೀನ್ ಕಡೆ ಪರಿಶೀಲಿಸದೆ ಎಲ್ಲಾ ಸರಿ ಇದೆ ಎಂದು ತಿಂಗಳಿಗೆ ನಾಲ್ಕೂವರೆ ಲಕ್ಷ ರೂ. ಗುತ್ತಿಗೆದಾರರಿಗೆ ಹಣ ಪಾವತಿಸಲು ಕಾಳಜಿ ತೋರಿಸುತ್ತಾರೆ. ಸ್ವಚ್ಛತೆ ಬಗ್ಗೆ ಕ್ಯಾಂಟೀನ್ ನಿರ್ವಹಣೆಯ ಅಧಿಕಾರಿ ನಗರಸಭೆ ಆರೋಗ್ಯ ನಿರೀಕ್ಷಕ ಮಾರೇಗೌಡರಿಗೆ ಸಾಕಷ್ಟು ಬಾರಿ ತಿಳಿಸಿದರೂ ಗಮನಹರಿಸಿಲ್ಲ ಎಂದು ಇಂದಿರಾ ಕ್ಯಾಂಟೀನ್ ನಿರ್ವಾಹಕ ಶಾಬಾಜ್ ಖಾನ್ ದೂರುತ್ತಾರೆ. ಕೂಡಲೇ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಎಚ್ಚತ್ತುಕೊಳ್ಳಬೇಕಿದೆ.
Advertisement
ಇಂದಿರಾ ಕ್ಯಾಂಟೀನ್ ನಿರ್ವಹಣೆ ಬಗ್ಗೆ ನಗರಸಭೆ ನಿರ್ಲಕ್ಷ್ಯ ವಹಿಸಿರುವುದರಿಂದ ಅವ್ಯವಸ್ಥೆ ತಾಂಡವವಾಡುತ್ತಿದೆ. ಕುಡಿಯುವ ನೀರಿನ ಆರ್‌ಒ ಪ್ಲಾಂಟ್ ಕೆಟ್ಟು 6 ತಿಂಗಳಾಗಿದೆ. ಊಟದ ತಟ್ಟೆ ತೊಳೆಯುವ ಬಿಸಿ ನೀರಿನ ಛೇಂಬರ್ ಕೆಟ್ಟುಹೋಗಿದೆ. ಇಡ್ಲಿ ಬೇಯಿಸುವ ಸ್ಟೀಂ ಕುಕ್ಕರ್ ಎರಡರಲ್ಲಿ ಒಂದು ಕೆಟ್ಟು 5 ತಿಂಗಳಾಗಿದ್ದು, ಕಳಪೆ ಆಹಾರ ಸಾಮಗ್ರಿ ಬಳಸಲಾಗುತ್ತಿದೆ. ಪರಿಸರ ಇಂಜಿನಿಯರ್ ಪಲ್ಲವಿ ಹಾಗೂ ಆರೋಗ್ಯ ನಿರೀಕ್ಷಕ ಮಾರೇಗೌಡ ಕ್ಯಾಂಟೀನ್ ನಿರ್ವಹಣೆ ಮರೆತು ಜಾಣ ಕುರುಡುತನ ತೋರಿಸುತ್ತಿರುವುದರಿಂದ ಸರ್ಕಾರ ಯೋಜನೆ ಸೊರಗುತ್ತಿದೆ.
ಕುಡಿಯುನ ನೀರಿನ ಆರ್.ಒ ಪ್ಲಾಂಟ್ ಈಗಾಗಲೇ 2 ಬಾರಿ ಕಂಪನಿಯವರು ರಿಪೇರಿ ಮಾಡಿಕೊಟ್ಟು 37 ಸಾವಿರ ರೂ. ಪಡೆದು ಹೋಗಿರುತ್ತಾರೆ. ಆದರೆ ಈ ವರೆಗೂ ಒಂದು ಬಿಂದಿಗೆ ಕುಡಿಯುವ ನೀರು ಸಹಾ ಬಂದಿಲ್ಲ. ಈಗ ಸದ್ಯಕ್ಕೆ ಎದುರುಗಡೆಯ ಕುಡಿಯುವ ನೀರಿನ ಘಟಕದಿಂದ ನೀರು ತಂದು ಜನರಿಗೆ ಕೊಡುತ್ತಿದ್ದೇವೆ. ಕೆಲವೊಮ್ಮೆ ಅದು ಕೆಟ್ಟರೆ ತೊಟ್ಟಿಯ ನೀರನ್ನೇ ಕುಡಿಯುವುದಕ್ಕಾಗಿ ಬಳಸುತ್ತೇವೆ. ● ಶಾಬಾಜ್ ಖಾನ್ , ಶಿರಾ ಇಂದಿರಾ ಕ್ಯಾಂಟಿನ್ ನಿರ್ವಹಣಾಧಿಕಾರಿ