Advertisement

ಗರಂ ಗರಂ ಮಂಜು!

06:31 PM Oct 23, 2017 | |

ನಿರ್ಮಾಪಕ ಕೆ. ಮಂಜು ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ! ಹೌದು, ಅವರು ಸಿಟ್ಟಾಗಿರೋದು ನಿಜ. ಅದಕ್ಕೆ ಕಾರಣ ನಾಲ್ಕು. ಸೆನ್ಸಾರ್‌ ಮಂಡಳಿ, ನಿರ್ದೇಶಕ ದಯಾಳ್‌ ಪದ್ಮನಾಭ್‌, ಕೆಲ ಚಿತ್ರಮಂದಿರಗಳು ಮತ್ತು ಬುಕ್‌ ಮೈ ಶೋ. ಇವುಗಳ ಮೇಲೆ ಮಂಜು ಒಂದೇ ಸಮನೆ ಕಿಡಿಕಾರಿದರು. ಸಂದರ್ಭ, “ಸತ್ಯ ಹರಿಶ್ಚಂದ್ರ’ ಚಿತ್ರದ ಪತ್ರಿಕಾಗೋಷ್ಠಿ. ಅಷ್ಟಕ್ಕೂ ಮಂಜು ಅವರೆಲ್ಲರ ಮೇಲೆ ಗರಂ ಆಗಿದ್ದೇಕೆ ಗೊತ್ತಾ? ಅವರ ಮಾತುಗಳಲ್ಲೇ ಕೇಳಿ.

Advertisement

“ಈಗ “ಸತ್ಯ ಹರಿಶ್ಚಂದ್ರ’ ಚಿತ್ರದ ದ್ವಿತಿಯಾರ್ಧವನ್ನು 12 ನಿಮಿಷಗಳ ಕಾಲ ಟ್ರಿಮ್‌ ಮಾಡಲಾಗಿದೆ. ಅದನ್ನು ಸೆನ್ಸಾರ್‌ ಮಂಡಳಿಗೆ ಕಳುಹಿಸಿದ್ದರೂ, ಸೆನ್ಸಾರ್‌ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಫೋನ್‌ ಮಾಡಿದರೆ ಅದಕ್ಕೂ ಉತ್ತರ ಕೊಟ್ಟಿಲ್ಲ. ಇಂತಹ ಬೇಜವಾಬ್ದಾರಿ ಸೆನ್ಸಾರ್‌ ಮಂಡಳಿ ಅಧಿಕಾರಿಗಳಿದ್ದರೆ, ನಿರ್ಮಾಪಕರ ಗತಿ ಏನು. ಸಿನಿಮಾವನ್ನು ಟ್ರಿಮ್‌ ಮಾಡಿ, ಅದನ್ನು ಸೆನ್ಸಾರ್‌ ಗಮನಕ್ಕೆ ತರುವುದು ನಮ್ಮ ಕರ್ತವ್ಯ.

ಆದರೆ, ಆನ್‌ಲೈನ್‌ನಲ್ಲಿ ಅಪ್ಲೆ ಮಾಡಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಧಿಕಾರವಿದೆ ಅಂತ ಈ ರೀತಿ ವರ್ತಿಸುವುದು ಸರಿಯಲ್ಲ. ಅಧಿಕಾರಿಗಳು ನಿರ್ಮಾಪಕರ ಪರ ಇರಬೇಕು. ಆದರೆ, ಸಿನಿಮಾ ಸಲುವಾಗಿ ಅವರ ಬಳಿ ಹೋದರೆ, ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ ಅಂದರೆ ನಿರ್ಮಾಪಕರು ಎಲ್ಲಿ ಹೋಗಬೇಕು. ಸೆನ್ಸಾರ್‌ ಮಂಡಳಿ ಅಧಿಕಾರಿಗಳು ಈ ರೀತಿ ವರ್ತಿಸೋಕೆ ಕಾರಣ, ನಿರ್ದೇಶಕ ದಯಾಳ್‌ ಪದ್ಮನಾಭ್‌ ಅವರ ಮೇಲಿನ ಸಿಟ್ಟಿರಬಹುದು.

ಏಕೆಂದರೆ, ಸಿನಿಮಾ ಸೆನ್ಸಾರ್‌ಗೆ ಹೋದ ಸಂದರ್ಭದಲ್ಲಿ ಇಬ್ಬರ ನಡುವೆ ಜಗಳವಾಗಿ, ಮನಸ್ತಾಪ ಉಂಟಾಗಿತ್ತು. ಬಹುಶಃ ಅದೇ ಉದ್ದೇಶ ಇಟ್ಟುಕೊಂಡು ಸೆನ್ಸಾರ್‌ ಅಧಿಕಾರಿಗಳು ನನ್ನ ಫೋನ್‌ ಕಾಲ್‌ ಸ್ವೀಕರಿಸುತ್ತಿಲ್ಲ’ ಎನ್ನುತ್ತಾರೆ ಮಂಜು. ಇನ್ನು ಮಂಜುಗೆ ನಿರ್ದೇಶಕ ದಯಾಳ್‌ ಪದ್ಮನಾಭ್‌ ಮೇಲೂ ಸಿಟ್ಟು ಬಂದಿದೆ”. ಅವರು ಈ ಚಿತ್ರದ ನಿರ್ದೇಶಕರು. ಚಿತ್ರ ಬಿಡುಗಡೆ ವೇಳೆ ನಿರ್ದೇಶಕರು ಇರಬೇಕು.

ಒಂದು ವಾರ ಬಿಟ್ಟು, “ಬಿಗ್‌ಬಾಸ್‌’ಗೆ ಹೋಗು ಅಂತ ಹೇಳಿದರೂ, ನನ್ನ ಮಾತು ಕೇಳದೆ, ಹೋಗಲೇಬೇಕು ಅಂತ ಹೋದರು. ಇಲ್ಲಿ ಕೋಟಿ ಹಾಕಿ ಸಿನಿಮಾ ಮಾಡಿದ ನಿರ್ಮಾಪಕರ ಬಗ್ಗೆ ಒಂದಷ್ಟೂ ಕಾಳಜಿ ಇಲ್ಲ. ಒಬ್ಬ ನಿರ್ದೇಶಕನಿಗೆ ನಿರ್ಮಾಪಕರ ಕಷ್ಟ ಗೊತ್ತಿರಬೇಕು. ನಂಬಿ ಸಿನಿಮಾ ಮಾಡಿದರೆ, ಹೀಗೆ ಮಾಡುವುದು ಎಷ್ಟು ಸರಿ? ಎಲ್ಲಾ ಬಿಟ್ಟು, ಅಲ್ಲಿಗೆ ಹೋಗಿ ಗೇಮ್‌ ಆಡುತ್ತ ಕೂತಿದ್ದಾರೆ’ ಎನ್ನುತ್ತಾರೆ ಮಂಜು.

Advertisement

ಬುಕ್‌ ಮೈ ಶೋ ಕುರಿತು ಮಾತನಾಡಿದ ಅವರು, “ಅದೊಂದು ದೊಡ್ಡ ದಂಧೆ. ಕನ್ನಡ ಸಿನಿಮಾಗಳಿಗೆ ಬುಕ್‌ ಮೈ ಶೋ ಸಾಕಷ್ಟು ಮೋಸ ಮಾಡುತ್ತೆ. ಅಲ್ಲಿ ಶೇಕಡವಾರು ಇಂತಿಷ್ಟು ಸೀಟ್‌ ಫಿಲ್ಲಿಂಗ್‌ ಆಗಿದೆ ಅಂತ ತೋರಿಸಿ, ಪ್ರೇಕ್ಷಕರನ್ನು ದಾರಿತಪ್ಪಿಸುತ್ತಿದೆ. ಹಣ ಕೊಟ್ಟರೆ ಮಾತ್ರ ಸೀಟ್‌ ಫಿಲ್ಲಿಂಗ್‌ ಎಂದು ತೋರಿಸಲಾಗುದೆ, ಒಳ್ಳೆಯ ವಿಮರ್ಶೆಗಳು ಪ್ರಕಟವಾಗುತ್ತದೆ. ಅವರಿಗೆ ಹಣ ಯಾಕೆ ಕೊಡಬೇಕು? ಅಷ್ಟಕ್ಕೂ ನಮ್ಮ ಸಿನಿಮಾಗಳ ವಿಮರ್ಶೆ ಮಾಡೋಕೆ ಅವರ್ಯಾರು.

ಮಾಧ್ಯಮದವರು ಸಿನಿಮಾ ಬಗ್ಗೆ ವಿಮರ್ಶೆ ಮಾಡುತ್ತಾರೆ. ಆದರೆ, ನಾಯಿ ಕೊಡೆಗಳಂತೆ ಆ್ಯಪ್‌ ಮಾಡಿಕೊಂಡು ಈ ರೀತಿಯ ದಂಧೆ ನಡೆಯುತ್ತಿದೆ. ಬುಕ್‌ ಮೈ ಶೋ ಮಾಡುತ್ತಿರುವ ಮೋಸ ಕುರಿತು ಚೇಂಬರ್‌ಗೆ ದೂರು ನೀಡುತ್ತೇನೆ. ತೆಲುಗು, ತಮಿಳು ಸಿನಿಮಾಗಳಿಂದ ಹಣ ಪಡೆದು, ಶೇ.80 ರಷ್ಟು ಹೌಸ್‌ಫ‌ುಲ್‌ ಅಂತ ತೋರಿಸುತ್ತಾರೆ. ನನಗೂ ಹಣ ಕೊಟ್ಟರೆ ಶೇಕಡ ಇಷ್ಟು ಫಿಲ್ಲಿಂಗ್‌ ಆಗಿದೆ ಅಂತ ತೋರಿಸುತ್ತೇವೆ ಅಂತ ಕಾಲ್‌ ಬಂದಿತ್ತು.

ನಾನು ಕೇರ್‌ ಮಾಡಲಿಲ್ಲ. ಬುಕ್‌ ಮೈ ಶೋ ನೋಡಿ, ಯಾರೂ ಹೋಗಬೇಡಿ. ಅದು ಮೋಸದ ಆ್ಯಪ್‌. ನಿರ್ಮಾಪಕರ ಸಂಘ ಕೂಡ ಒಂದು ಆ್ಯಪ್‌ ಮಾಡುವುದಾಗಿ ಹೇಳಿತ್ತು. ಆದರೆ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ಗರಂ ಆಗಿ ಹೇಳಿದ ಕೆ.ಮಂಜು, ಕೆಲ ಚಿತ್ರಮಂದಿರಗಳ ವಿರುದ್ಧವೂ ಕಿಡಿಕಾರಿದರು. “ಬೊಮ್ಮನಹಳ್ಳಿಯ ಕೃಷ್ಣ ಚಿತ್ರಮಂದಿರ ಸೇರಿದಂತೆ ಕೆಲ ಚಿತ್ರಮಂದಿರಗಳು ಕನ್ನಡ ಸಿನಿಮಾ ಹಾಕಲು ಹಿಂದೇಟು ಹಾಕುತ್ತಿವೆ.

ಪರಭಾಷೆ ಚಿತ್ರಗಳಿಂದ ಮುಂಗಡ ಹಣ ಪಡೆಯಲಾಗಿದೆ ಅನ್ನುತ್ತಾರೆ. ಆದರೆ, ನಾವೂ ಮುಂಗಡ ಹಣ ಕೊಡೋಕೆ ರೆಡಿ ಇದ್ದೇವೆ. ಕನ್ನಡ ಸಿನಿಮಾ ಅಂದರೆ ಯಾಕೆ ಅವರಿಗೆ ತಾತ್ಸಾರ? ಕನ್ನಡ ಪರ ಸಂಘಟನೆಗಳು ಈ ಬಗ್ಗೆ ಎಚ್ಚರವಹಿಸಬೇಕು, ಸರ್ಕಾರ ಕೂಡ ಅಂತಹ ಚಿತ್ರಮಂದಿರಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು’ ಎಂದರು ಮಂಜು.

Advertisement

Udayavani is now on Telegram. Click here to join our channel and stay updated with the latest news.

Next