ಮಂಡ್ಯ: ಜಗಜಟ್ಟಿ ಪೈಲ್ವಾನರ ಕಾಳಗ ನೋಡುವುದೇ ಒಂದು ರೀತಿಯ ಹಬ್ಬ. ಕುಸ್ತಿ ಪಂದ್ಯಾವಳಿ ನಡೆದರೆ ಹಿಂದೆ ಪೈಲ್ವಾನರ ಕಾಳಗ ನೋಡಲು ಹಿಂದೆ ಸುತ್ತ ಮುತ್ತಲ ಪ್ರದೇಶದ ಜನರು ಸೇರುತ್ತಿದ್ದರು. ಪೈಲ್ವಾನರ ಮೇಲೆ ಬೆಟ್ಟಿಂಗ್ ಕಟ್ಟಲಾಗುತ್ತಿತ್ತು. ಅಂಥ ಗ್ರಾಮೀಣ ಕ್ರೀಡೆ ಇಂದು ನಶಿಸುವ ಹಂತಕ್ಕೆ ಬಂದಿದೆ.
ಜಿಲ್ಲೆಯಲ್ಲಿ ಮೈಸೂರು ಮಹಾರಾಜರ ಕಾಲದಲ್ಲಿ ಗರಡಿ ಮನೆಗಳು ತಲೆ ಎತ್ತಿದ್ದವು. ಪ್ರತೀ ಗ್ರಾಮದಲ್ಲೂ ಒಂದೊಂದು ಗರಡಿ ಮನೆಗಳಿದ್ದವು. ಗ್ರಾಮದ ತುಂಬೆಲ್ಲ ಪೈಲ್ವಾನರಿದ್ದರು. ಅಲ್ಲದೆ, ದೇಹದ ಆರೋಗ್ಯ ಕಾಪಾಡಿಕೊಳ್ಳಲು ಗ್ರಾಮಸ್ಥರು ಗರಡಿ ಮನೆಗಳಲ್ಲಿ ಕಸರತ್ತು ನಡೆಸುತ್ತಿದ್ದರು. ಗರಡಿ ಮನೆಯಿಂದ ತಯಾರಾದ ಪೈಲ್ವಾನರು ದಸರಾ ಸೇರಿದಂತೆ ಯಾವುದೇ ಜಾತ್ರೆ, ಮಹೋತ್ಸವ ಸಮಾರಂಭಗಳಲ್ಲಿ ಕುಸ್ತಿ ಪಂದ್ಯಾವಳಿ ಇದ್ದೇ ಇರುತ್ತಿತ್ತು. ಆದರೆ, ಇಂದು ಗರಡಿ ಮನೆಗಳು ಕಣ್ಮರೆಯಾಗುತ್ತಿದ್ದು, ಪೈಲ್ವಾನರ ಸಂಖ್ಯೆಯೂ ಕುಸಿಯುತ್ತಿದೆ.
60 ಗರಡಿ ಮನೆಗಳು: ಜಿಲ್ಲೆಯಲ್ಲಿ ಸಾವಿರ ಸಂಖ್ಯೆಯಲ್ಲಿದ್ದ ಗರಡಿ ಮನೆಗಳು ಇಂದು 60ಕ್ಕಿಳಿದಿವೆ. ಪ್ರತೀ ಗ್ರಾಮದಲ್ಲೂ 500 ಮಂದಿ ಪೈಲ್ವಾನರಿರುತ್ತಿದ್ದರು. ಇಂದಿಗೂ ಬಹುತೇಕ ಗ್ರಾಮದಲ್ಲಿ ಪೈಲ್ವಾನರ ಕುಟುಂಬಗಳಿವೆ. ಆದರೆ, ಕಾಲ ಕ್ರಮೇಣ ಸಂಖ್ಯೆ ಕಡಿಮೆಯಾಗುತ್ತಾ, 60 ಗರಡಿ ಮನೆಗಳಲ್ಲಿ ಕೇವಲ 20ರಿಂದ 25 ಮಂದಿ ಅಭ್ಯಾಸ ನಡೆಸುತ್ತಿದ್ದು, ಪೈಲ್ವಾನರ ಸಂಖ್ಯೆ 200ಕ್ಕಿಂತಲೂ ಕಡಿಮೆ ಇದ್ದಾರೆ.
ಇದನ್ನೂ ಓದಿ:ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ; ಗೋವಾ-ಗುಮ್ಮಟಕ್ಕೆ ಪ್ರವಾಸ ಭಾಗ್ಯ
ಜಿಮ್‌ಗಳ ಹಾವಳಿ: ನಗರ ಹಾಗೂ ಪಟ್ಟಣಗಳಲ್ಲಿ ಜಿಮ್‌ಗಳ ಹಾವಳಿ ಹೆಚ್ಚಾದಂತೆ ಗರಡಿ ಮನೆಗಳು ನಶಿಸುತ್ತಾ ಹೋಗುತ್ತಿವೆ. ಕುಸ್ತಿ ಈಗ ರಾಷ್ಟ್ರೀಯ ಕ್ರೀಡೆಯಾಗಿದ್ದು, ಬೇಡಿಕೆ ಹೆಚ್ಚಿದೆ. ಆದರೆ, ಇಂದಿನ ಯುವ ಜನತೆ ಗರಡಿ ಮನೆಗಳತ್ತ ಮುಖ ಮಾಡುತ್ತಿಲ್ಲ. ಇದರಿಂದ ಗರಡಿ ಮನೆಗಳು ದಿನದಿಂದ ದಿನಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿವೆ.
ಸರ್ಕಾರ, ಇಲಾಖೆಯಿಂದ ಪ್ರೋತ್ಸಾಹವಿಲ್ಲ: ಜಿಲ್ಲೆಯ ಗರಡಿ ಮನೆಗಳು ಹಾಗೂ ಪೈಲ್ವಾನರಿಗೆ ಸರ್ಕಾರ ಹಾಗೂ ಕ್ರೀಡಾ ಇಲಾಖೆಗಳಿಂದಲೂ ಯಾವುದೇ ಪ್ರೋತ್ಸಾಹ ನೀಡುತ್ತಿಲ್ಲ. ಇದುವರೆಗೂ ಯಾವುದೇ ಅನುದಾನ ನೀಡಿಲ್ಲ. ಪ್ರತೀ ಗ್ರಾಮದಲ್ಲೂ ಗರಡಿ ಮನೆಯಲ್ಲಿ ಅಭ್ಯಾಸ ಮಾಡಿ ತಾಲೂಕು, ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ, ವಿಜೇತರಾಗಿದ್ದರೂ ಸರ್ಕಾರ, ಇಲಾಖೆ ಯಾವುದೇ ಪ್ರೋತ್ಸಾಹ ನೀಡುತ್ತಿಲ್ಲ. ಅದರಲ್ಲೂ ಮಂಡ್ಯ ಜಿಲ್ಲೆಯ ಪೈಲ್ವಾನರನ್ನು ಪರಿಗಣಿಸುತ್ತಿಲ್ಲ. ಬೇರೆ ಜಿಲ್ಲೆಗಳಿಗೆ ಸಿಗುತ್ತಿರುವ ಪ್ರೋತ್ಸಾಹ ನಮ್ಮ ಜಿಲ್ಲೆಗೆ ಸಿಗುತ್ತಿಲ್ಲ ಎಂದು ಪೈಲ್ವಾನ್ ಸಂತೋಷ್ ಸಿಂಹ ಬೇಸರ ವ್ಯಕ್ತಪಡಿಸುತ್ತಾರೆ.
ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಪ್ರತಿಭಾನ್ವಿತ ಪೈಲ್ವಾನರಿದ್ದಾರೆ. ರಾಜ್ಯ ಮಟ್ಟದಲ್ಲೂ ಸಾಧನೆ ಮಾಡುವವರಿದ್ದಾರೆ. ಆದರೆ, ಅವರನ್ನು ರಾಜ್ಯದ ಕುಸ್ತಿ ಸಂಘ ಪರಿಗಣಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ಸಾಕಷ್ಟು ಮಂದಿ ಪೈಲ್ವಾನರು ಮೂಲೆಗುಂಪಾಗಿದ್ದಾರೆ.
ಎನ್.ಮಲ್ಲುಸ್ವಾಮಿ, ಕಾರ್ಯದರ್ಶಿ, ಮಂಡ್ಯ ಜಿಲ್ಲಾ ಕುಸ್ತಿ ಪೈಲ್ವಾನರ ಸಂಘ
ಇದನ್ನೂ ಓದಿ:ಹಿಂದೂ ಧರ್ಮಕ್ಕೆ ಅವಹೇಳನ ಆರೋಪ: ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ
ಜಿಲ್ಲೆಯಲ್ಲಿ ಗರಡಿ ಮನೆಗಳು, ಪೈಲ್ವಾನರಿಗೆ ಯಾವುದೇ ಸೌಲಭ್ಯ ನೀಡದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಸರ್ಕಾರ, ಇಲಾಖೆ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ನಮ್ಮ ಮನವಿ ಸ್ಪಂದಿಸುತ್ತಿಲ್ಲ. ಇದರಿಂದ ಗರಡಿ ಮನೆಗಳು, ಪೈಲ್ವಾನರ ಸಂಖ್ಯೆ ಕಡಿಮೆಯಾಗುತ್ತಿದೆ.
ಬಿ.ಬಾಲಸುಬ್ರಮಣ್ಯ, ಖಜಾಂಚಿ, ಮಂಡ್ಯ ಜಿಲ್ಲಾ ಕುಸ್ತಿ ಪೈಲ್ವಾನರ ಸಂಘ
ಜಿಲ್ಲಾ ಕ್ರೀಡಾಂಗಣದಲ್ಲಿ ಪೈಲ್ವಾನರಿಗೆ ಕುಸ್ತಿ ಪಂದ್ಯಾವಳಿ ನಡೆಸಲು ಸರ್ಕಾರ ಮ್ಯಾಟ್ ವ್ಯವಸ್ಥೆ, ತರಬೇತಿದಾರರ ನೇಮಕ ಮಾಡಿಕೊಟ್ಟರೆ, ಪೈಲ್ವಾನರ ಸಂಖ್ಯೆ ಹೆಚ್ಚಲಿದೆ. ಗ್ರಾಮೀಣ ಕ್ರೀಡೆ ಉಳಿಸಿದಂತಾಗಲಿದೆ. ಅಲ್ಲದೆ, ಇಲ್ಲಿನ ಪೈಲ್ವಾನರು ರಾಜ್ಯ, ರಾಷ್ಟ್ರೀಯ ಮಟ್ಟಕ್ಕೆ ಹೋಗಲು ಸಾಧ್ಯವಿದೆ.
ಸಂತೋಷ್ ಸಿಂಹ, ಸಂಘದ ಸದಸ್ಯ
ವರದಿ: ಎಚ್.ಶಿವರಾಜು