Advertisement

ಚಿತ್ರಮಂದಿರದತ್ತ ಗಂಟುಮೂಟೆ

12:06 PM Oct 19, 2019 | mahesh |

“ಗಂಟು ಮೂಟೆ’ ಎಂಬ ಚಿತ್ರದ ಬಗ್ಗೆ ನೀವು ಕೇಳಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಇಂದು ಚಿತ್ರ ಬಿಡುಗಡೆಯಾಗುತ್ತಿದ್ದು, ಹೊಸ ಬಗೆಯ ಚಿತ್ರವಾಗಿ ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸ ಚಿತ್ರತಂಡಕ್ಕಿದೆ. ಬಹುತೇಕ ಹೊಸ ಪ್ರತಿಭೆಗಳು ಸೇರಿ ನಿರ್ಮಿಸಿರುವ “ಗಂಟುಮೂಟೆ’ ಚಿತ್ರ ಸದ್ಯ ಬಿಡುಗಡೆಗೂ ಮುನ್ನವೇ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದಷ್ಟು ಸದ್ದು ಮಾಡುತ್ತಿದೆ. ಜನರ ಮುಂದೆ ಬರುವ ಮುನ್ನವೇ, ನ್ಯೂಯಾರ್ಕ್‌ ಇಂಡಿಯನ್‌ ಚಿತ್ರೋತ್ಸವದಲ್ಲಿ “ಬೆಸ್ಟ್‌ ಸ್ಕ್ರೀನ್‌ ಪ್ಲೇ ‘ ಅವಾರ್ಡ್‌ ಪಡೆದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆ ಪಡೆದುಕೊಂಡಿರರುವ “ಗಂಟುಮೂಟೆ’, ಈಗಾಗಲೇ ಕೆನಡಾ, ಆಸ್ಟ್ರೇಲಿಯಾ, ಯುಎಸ್‌ಎ, ಇಟಲಿ ಮೊದಲಾದ ದೇಶಗಳಲ್ಲಿ ನಡೆದ ಹಲವು ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆ ಪಡೆದುಕೊಂಡಿದೆ.

Advertisement

ಈ ಚಿತ್ರವನ್ನು ರೂಪ ರಾವ್‌ ನಿರ್ದೇಶಿಸಿದ್ದಾರೆ.  ಸಿನಿಮಾದ ಹಾಗೆಯೇ ಜೀವನ ಅಂತ ಭ್ರಮಿಸುವ ಹರೆಯದ ಹುಡುಗ – ಹುಡುಗಿಯ ಕಥೆಯನ್ನು ಈ ಚಿತ್ರದ ಮೂಲಕ ಹೇಳಿದ್ದಾರಂತೆ. ಕೊನೆಗೆ ಸಿನಿಮಾ ಬೇರೆ, ಬದುಕೇ ಬೇರೆ ಎಂದು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಏನೆಲ್ಲ ನಡೆದು ಹೋಗುತ್ತದೆ ಚಿತ್ರದ ಕುತೂಹಲ. ಚಿತ್ರ ಮಕ್ಕಳಿಂದ ಹಿಡಿದು ಎಲ್ಲಾ ವರ್ಗದವರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ.  ಹರೆಯದ ಹುಡುಗರ ತಂಟೆ-ತರಲೆ, ಸ್ಪರ್ಧೆ, ಹುಡುಗಿಯರಿಗಾಗಿ ನಡೆಯುವ ಗಲಾಟೆ, ಇವೆಲ್ಲದರ ನಡುವೆ ಕಾಡುವ ಮೊದಲ  ಪ್ರೇಮ ಹೀಗೆ ಎಲ್ಲವೂ ಚಿತ್ರದಲ್ಲಿದೆಯಂತೆ. ಚಿತ್ರದಲ್ಲಿ ನಿಶ್ಚಿತ್‌ ಕೊರೋಡಿ ನಾಯಕನಾಗಿ ಮತ್ತು ತೇಜು ಬೆಳವಾಡಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಭಾರ್ಗವ್‌ ರಾಜು, ಸೂರ್ಯ ವಸಿಷ್ಠ, ಶರತ್‌ ಗೌಡ, ಶ್ರೀರಂಗ, ರಾಮ್‌ ಮಂಜುನಾಥ್‌, ಅರ್ಚನಾ ಶ್ಯಾಮ್‌, ಅನುಶ್ರೀ, ಕಶ್ಯಪ್‌, ಚಂದನಾ, ನಮಿತ್‌ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಅಮೇಯುಕ್ತಿ ಸ್ಟುಡಿಯೋಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಗಂಟುಮೂಟೆ’ ಚಿತ್ರಕ್ಕೆ ಸಹದೇವ್‌ ಕೇಳ್ವಾಡಿ ಛಾಯಾಗ್ರಹಣ, ಪ್ರದೀಪ್‌ ನಾಯಕ್‌ ಸಂಕಲನ, ಅಪರಾಜಿತ್‌ ಸ್ರಿಸ್‌ ಸಂಗೀತ ಸಂಯೋಜನೆಯಿದೆ. ನಿರ್ಮಾಪಕ ಯೋಗಿ ದ್ವಾರಕೀಶ್‌ “ಗಂಟುಮೂಟೆ’ ಚಿತ್ರದ ವಿತರಣೆ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next