Advertisement

Ganjimutt: ಪಂಚಾಯತ್‌ ಸಭೆಗೆ ವಿದ್ಯುತ್‌ ಶಾಕ್‌!

12:56 PM Jul 30, 2024 | Team Udayavani |

ಕೈಕಂಬ: ಗಂಜಿಮಠ ಗ್ರಾಮ ಪಂಚಾಯತ್‌ನ ಸಾಮಾನ್ಯ ಸಭೆಗೆ ವಸ್ತುಶಃ ವಿದ್ಯುತ್‌ ಶಾಕ್‌ ಹೊಡೆದಿದೆ. ಮೆಸ್ಕಾಂ ತನಗೆ ಬರಬೇಕಾಗಿರುವ ವಿದ್ಯುತ್‌ ಬಿಲ್‌ನಲ್ಲಿ 3.80 ಕೋಟಿ ರೂ.ಯನ್ನು ಮನ್ನಾ ಮಾಡಿದೆ. ಆದರೂ ಇನ್ನೂ 1 ಕೋಟಿ ರೂಪಾಯಿಯನ್ನು ಪಂಚಾಯಿತಿ ಪಾವತಿಸಬೇಕಾಗಿದೆ. ಇದರ ಬಡ್ಡಿಯೇ ತಿಂಗಳಿಗೆ 30 ಸಾವಿರ ರೂಪಾಯಿ ಬೀಳಲಿದೆ!

Advertisement

ಈ ವಿಚಾರಗಳು ಗಂಜಿಮಠ ಗ್ರಾಮಪಂಚಾಯತ್‌ ವ್ಯಾಪ್ತಿಯ ಬಡಗುಳಿಪಾಡಿ, ತೆಂಕುಳಿಪಾಡಿ ಮತ್ತು ಮೊಗರು ಗ್ರಾಮಗಳ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ಚರ್ಚೆಯಾದವು. ಅಧ್ಯಕ್ಷೆ ಮಾಲತಿ ಎಂ.ಅವರ ಅಧ್ಯಕ್ಷತೆಯಲ್ಲಿ ಗಂಜಿಮಠದ ಮರಾಠಿ ಸಮಾಜ ಮಂದಿರದಲ್ಲಿ ನಡೆಯಿತು.

ಬಾಕಿ ಉಳಿದ ಬಿಲ್‌ ಪಾವತಿ ಬಗ್ಗೆ ಗ್ರಾಮ ಪಂಚಾಯತ್‌ ಚಿಂತಿಸಬೇಕು. ಮೆಸ್ಕಾಂಗೆ ಬಡ್ಡಿ ಕಟ್ಟುತ್ತಾ ಕುಳಿತರೆ ಅಭಿ ವೃದ್ಧಿ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಜನರ ತೆರಿಗೆಯೆಲ್ಲಾ ಬಡ್ಡಿಗೇ ಬೇಕಾಗುತ್ತದೆ. ಹೀಗಾಗಿ ಆದಷ್ಟು ಬೇಗ ಬಿಲ್‌ ಪಾವತಿಸಿ ಪಂಚಾಯತನ್ನು ಋಣ ಮುಕ್ತ ಮಾಡಿ ಎಂದು ಗ್ರಾಮಸ್ಥರು ಹೇಳಿದರು. ಗ್ರಾಮ ಸಭೆಗೆ ಬರುವ ನಮಗೆ ಅಂಬಡೆ, ಚಹಾ ಬೇಡ, ಅದರ ಹಣವನ್ನೂ ಮೆಸ್ಕಾಂಗೆ ಕಟ್ಟಿ ಎಂದು ಕೂಡ ಕೆಲವರು ಹೇಳಿದರು.

ಈ ಬಗ್ಗೆ ಉತ್ತರಿಸಿದ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಪ್ರಕಾಶ್‌ ಬಿ. ಅವರು, 2023-24ನೇ ಸಾಲಿನಲ್ಲಿ ಒಟ್ಟು 60 ಲಕ್ಷ ರೂ. ಮೆಸ್ಕಾಂ ಬಿಲ್‌ ಪಾವತಿಸಲಾಗಿದೆ. ಉಳಿದ ಮೊತ್ತವನ್ನು ತ್ವರಿತವಾಗಿ ಪಾವತಿಸುವ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ನೋಡಲ್‌ ಅಧಿಕಾರಿಯಾಗಿ ಮಂಗಳೂರು ನಗರ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ವೀಣಾ ಅವರು ಆಗಮಿಸಿದ್ದರು.

Advertisement

ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಸಾರಮ್ಮ, ಪಂಚಾಯತ್‌ ಸದಸ್ಯರು. ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಗ್ರಾಮ ಸಭೆ,ವಾರ್ಡ್‌ ಸಭೆಯ ವರದಿಯನ್ನು ಕಾರ್ಯದರ್ಶಿ ಮೊಹಮ್ಮದ್‌ ಶರೀಫ್‌ ವಾಚಿಸಿದರು.

ವಿದ್ಯುತ್‌ ಅಪಾಯ ಕಂಡರೆ ಕರೆ ಮಾಡಿ

ವಿದ್ಯುತ್‌ ತಂತಿ ಕಡಿದು ಬಿದ್ದರೆ, ಕಂಬ ಬಿದ್ದರೆ ಯಾವುದೇ ವಿದ್ಯುತ್‌ ಅಪಾಯ ಸಂಭವಿಸಿದರೆ ತುರ್ತು ಸೇವೆಗಾಗಿ 8277883388 ಅಥವಾ 0824-2950953ಕ್ಕೆ ಕರೆಮಾಡಿ ಎಂದು ಕೈಕಂಬ ಮೆಸ್ಕಾಂ ಅಧಿಕಾರಿ ದೇವಿ ಪ್ರಸಾದ್‌ ಸಭೆಯಲ್ಲಿ ಮಾಹಿತಿ ನೀಡಿದರು. 3 ದಿನಗಳಲ್ಲಿ 60 ವಿದ್ಯುತ್‌ ಕಂಬ ತುಂಡಾಗಿದ್ದು, ಸರಿಪಡಿಸಲಾಗುತ್ತಿದೆ ಇದರಿಂದ ವಿದ್ಯುತ್‌ ಸರಬರಾಜಿನಲ್ಲಿ ಅಡೆತಡೆಯಾಗಿದೆ ಎಂದು ಮೆಸ್ಕಾಂ ಅಧಿಕಾರಿ ತಿಳಿಸಿದರು. ಮೊಗರು ಗತ್ನಮಜಲು ಪ್ರದೇಶದಲ್ಲಿ ದಿನಾ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಹೀಗಾಗಿ ನಮಗೆ ಎಡಪದವು ಮೆಸ್ಕಾಂ ಬೇಡ, ಕೈಕಂಬ ಮೆಸ್ಕಾಂ ಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ನಿರ್ಣಯ ಮಾಡಿ ಮೆಸ್ಕಾಂಗೆ ಕಳುಹಿಸಲು ಆಗ್ರಹಿದರು. ಗಾಂಧಿನಗರದಲ್ಲಿ ಉಚಿತ ವಿದ್ಯುತ್‌ ಇದ್ದ ಮಹಿಳೆಗೆ ಈಗ 4 ಸಾವಿರ ರೂಪಾಯಿ ಬಿಲ್‌ ತರಲಾಯಿತು. ಈಗ ಬಿಲ್‌ ಪಾವತಿಸಿ ಮತ್ತೆ ಸರಿಪಡಿಸಲಾಗುವುದು ಎಂದು ಹೇಳುತ್ತಾರೆ ಎಂದು ಮೆಸ್ಕಾಂ ಅಧಿಕಾರಿಯವರಲ್ಲಿ ತಿಳಿಸಿದರು.

ಚರ್ಚಿತ ಇತರ ಪ್ರಮುಖ ವಿಷಯ

ಮಳಲಿ ದಾದಿಯರ ಕೇಂದ್ರದ ಅವರಣದೊಳಗೆ ಸ್ವತ್ಛತೆಗಾಗಿ ಕಾಂಕ್ರೀಟ್‌ ಹಾಕಿಬೇಕು.

ನಾಡಾಜೆಯಲ್ಲಿ ವಿದ್ಯುತ್‌ ಕಂಬದ ಮೇಲೆ ತಾಳೆಗರಿ ಬಿದ್ದು ,ಪದೇ ಪದೇ ವಿದ್ಯುತ್‌ಕಡಿತವಾಗುತ್ತಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಿ.

ಮೊಗರು ಸೈಟ್‌, ಭವಂತಿಬೆಟ್ಟು ಭಾಗದಲ್ಲಿ ವಿದ್ಯುತ್‌ ತಂತಿ ಸಮಸ್ಯೆ ಸರಿಪಡಿಸಿ, ಮಳಲಿ ವಿದ್ಯುತ್‌ ಕಂಬದಲ್ಲಿ ಬಳ್ಳಿ ಸುತ್ತಿಕೊಂಡಿದೆ.

ನಾಡಾಜೆ ಅಂಗನವಾಡಿ ಕೇಂದ್ರದ ಜಾಗದ ಸಮಸ್ಯೆಯನ್ನು ಸರಿಪಡಿಸಿ.

ವಸತಿ ಸಮುಚ್ಚಯಗಳ ನೀರು ರಸ್ತೆಗೆ!

ಕೈಕಂಬದಿಂದ -ಗಾಂಧಿನಗರ ತನಕ ವಸತಿ ಸಮುಚ್ಚಯಗಳ ಶೌಚಾಲಯದ ನೀರು ರಸ್ತೆಯಲ್ಲಿ ಹರಿದು ಹೋಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುಂಡಿಗಳಲ್ಲಿ ಮಳೆ ನೀರಿನ ಜತೆ ತ್ಯಾಜ್ಯ ನೀರು ಸೇರುತ್ತಿದೆ. ಜಲ ಜೀವನ್‌ ಮಿಷನ್‌ ನೀರಿನ ಪೈಪಿಗೂ ಕಲುಷಿತ ನೀರು ಪ್ರವೇಶಿಸಿದೆ. ಗುಂಡಿಗಳಲ್ಲಿ ನೀರು ನಿಂತಾಗ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ ಎಂದು ಆಪಾದಿಸಲಾಯಿತು. ವಸತಿ ಸಮುಚ್ಚಯದ ನೀರು ರಸ್ತೆಗೆ ಬಿಡುತ್ತಿದ್ದರೆ ಅದರ ಮಾಲಕನೇ ಹೊಣೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಅಮಿತ್‌ ರಾಜ್‌ ಹೇಳಿದರು.

ತೆಂಕುಉಳಿಪಾಡಿ ಕಾಜಿಲದಲ್ಲಿ ತ್ಯಾಜ್ಯ ನೀರು ಪ್ರವೇಶದಿಂದ ಕೃಷಿ ಮಾಡಲು ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಮನವಿ ಮಾಡಿದರು. ಅಲ್ಲಿ ನೀರು ಹೋಗಲು ಚರಂಡಿ ಇಲ್ಲದೆ ಸಮಸ್ಥೆಯಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಿಡಿಒ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next