Advertisement

1500 ಕೆ.ಜಿ. ಗಾಂಜಾ ಸಾಗಾಟ: ಮೂವರ ಸೆರೆ

10:17 AM Jul 16, 2023 | Team Udayavani |

ಬೆಂಗಳೂರು: ತೆಲಗು ಮೂಲದ ಪುಷ್ಪ ಸಿನಿಮಾದಲ್ಲಿ ಶ್ರೀಗಂದಧ ಮರಗಳನ್ನು ಕಳ್ಳ ಸಾಗಾಟ ಮಾಡಿದ ಮಾದರಿಯಲ್ಲೇ ಗೂಡ್ಸ್‌ ವಾಹನದ ವಿನ್ಯಾಸ ಬದಲಿಸಿ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಗಾಂಜಾ ತರುತ್ತಿದ್ದ ಬೃಹತ್‌ ಜಾಲವನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಇದೇ ವೇಳೆ ಬೆಂಗಳೂರು ನಗರ ಪೊಲೀಸರು ಇದೇ ಮೊದಲ ಬಾರಿಗೆ 12 ಕೋಟಿ ಮೌಲ್ಯದ 1500 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಸಲ್ಮಾನ್‌ ಪಾಷಾ(22), ಆಂಧ್ರಪ್ರದೇಶದ ಲಕ್ಷ್ಮೀ ಮೋಹನ್‌ ದಾಸ್‌ (23) ಹಾಗೂ ರಾಜಸ್ಥಾನದ ಚಂದ್ರಭಾನು ಬಿಷ್ಣೋಹಿ (24) ಬಂಧಿತರು.

ಆರೋಪಿಗಳಿಂದ 12 ಕೋಟಿ ರೂ. ಮೌಲ್ಯದ 1,500 ಕೆಜಿ ಗಾಂಜಾ ಹಾಗೂ ವಿನ್ಯಾಸಗೊಳಿಸಿದ್ದ ಗೂಡ್ಸ್‌ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಕೆಲ ದಿನಗಳ ಹಿಂದೆ ಚಾಮರಾಜಪೇಟೆ ಪೊಲೀಸರಿಗೆ ಗಾಂಜಾ ಪೂರೈಕೆದಾರ ಸಲ್ಮಾನ್‌ ಪಾಷಾ ಸಿಕ್ಕಿಬಿದ್ದಿದ್ದ. ಈತನ ವಿಚಾರಣೆಯಲ್ಲಿ ನೆರೆ ರಾಜ್ಯದಿಂದ ಗಾಂಜಾ ತರುವ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಅಖಾಡಕ್ಕಿಳಿದ ಸಿಸಿಬಿ ಜಂಟಿ ಆಯುಕ್ತ ಎಸ್‌.ಡಿ.ಶರಣಪ್ಪ ನೇತೃತ್ವದ ತಂಡ ವಿಶಾಖಪಟ್ಟಣಂನಲ್ಲಿ ಮೂರು ವಾರಗಳ ಕಾಲ ಕಾರ್ಯಾಚರಣೆ ನಡೆಸಿತ್ತು. ‌

ಈ ವೇಳೆ ರಾಜಸ್ಥಾನದ ಚಂದ್ರಭಾನು ಬಿಷ್ಣೋಯ್ ಮತ್ತು ಆಂಧ್ರಪ್ರದೇಶದ ಲಕ್ಷ್ಮೀ ಮೋಹನ್‌ದಾಸ್‌ ನನ್ನು ವಶಕ್ಕೆ ಪಡೆಯಲಾಗಿತ್ತು. ವಿಶಾಖಪಟ್ಟಣಂ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶದಲ್ಲಿ ಸಾಕಷ್ಟು ಜನರು ಗಾಂಜಾ ಬೆಳೆಯನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಅವರಿಂದ ಕಡಿಮೆ ಮೊತ್ತಕ್ಕೆ ಗಾಂಜಾ ಖರೀದಿಸಿ ನಗರಕ್ಕೆ ಪೂರೈಸುತ್ತಿದ್ದ ಆರೋಪಿಗಳು, ನಗರದ ಬಹುತೇಕ ಕಡೆಗಳಲ್ಲಿ ತಮ್ಮ ಬಾಹುಗಳನ್ನು ಚಾಚಿದ್ದಾರೆ. ಗಡಿಭಾಗ ಮತ್ತು ಕೇಂದ್ರ ಭಾಗದ ಶಾಲಾ-ಕಾಲೇಜು, ಸಾಫ್ಟ್ವೇರ್‌ ಕಂಪನಿಯ ನೌಕರರಿಗೆ ಪೆಡ್ಲರ್‌ಗಳ ಮೂಲಕ ಗಾಂಜಾ ಪೂರೈಕೆ ಮಾಡುತ್ತಿದ್ದು, ಈ ಮೂಲಕ ನಗರದಲ್ಲಿ ನಡೆಯು ತ್ತಿದ್ದ ಗಾಂಜಾ ಮಾರಾಟ ದಂಧೆಯಲ್ಲಿ ಸಿಂಹಪಾಲು ಇದೆ ಎಂಬುದು ಗೊತ್ತಾಗಿದೆ.

Advertisement

ಈ ಮೂಲಕ ಇದೇ ಮೊದಲ ಬಾರಿಗೆ ನಗರ ಪೊಲೀಸರು 1500 ಕೆ.ಜಿ. ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪುಷ್ಪ ಸಿನಿಮಾವೇ ಪ್ರೇರಣೆ!: ಪುಷ್ಪ ಸಿನಿಮಾದಲ್ಲಿ ಹಾಲಿನ ಟ್ಯಾಂಕರ್‌ ಅನ್ನು ವಿನ್ಯಾಸಗೊಳಿಸಿ ಕೆಳಭಾಗದಲ್ಲಿ ಶ್ರೀಗಂದಧ ಮರಗಳನ್ನು ತುಂಬಿ ಸಾಗಾಟ ಮಾಡಲಾಗುತ್ತದೆ. ಆ ಸಿನಿಮಾದಿಂದ ಪ್ರೇರಣೆಗೊಂಡ ಆರೋಪಿಗಳು, ತಮ್ಮ ಗೂಡ್ಸ್‌ ವಾಹನ ಹಿಂಭಾಗದಲ್ಲಿ (ಸರಕು ತುಂಬುವ ಜಾಗ) ಸುಮಾರು ಒಂದೂವರೆ ಅಡಿಗೂ ಎತ್ತರದಲ್ಲಿ ರಹಸ್ಯ ಕಂಪಾರ್ಟ್‌ಮೆಂಟ್‌ ನಿರ್ಮಿಸಿದ್ದಾರೆ. ಅಲ್ಲದೆ, ಅದನ್ನು ಡ್ರಾಯರ್‌ ರೀತಿಯಲ್ಲಿ ವಿನ್ಯಾಸಗೊಳಿಸಿ, ಅದನ್ನು ಹೊರಗಡೆ ಎಳೆಯಬಹುದಾಗಿದೆ. ಆ ಕಂಪಾರ್ಟ್‌ಮೆಂಟ್‌ನಲ್ಲಿ ಗಾಂಜಾ ತುಂಬಿದ ಪ್ಲಿಪ್‌ಕಾರ್ಟ್‌ ಬಾಕ್ಸ್‌ಗಳಲ್ಲಿ ಪ್ಯಾಕ್‌ ಮಾಡುತ್ತಿದ್ದರು. ಅವುಗಳನ್ನು ರಟ್ಟಿನ ಬಾಕ್ಸ್‌ಗಳಲ್ಲಿ ಕಂಪಾರ್ಟ್‌ಮೆಂಟ್‌ ಮುಚ್ಚುತ್ತಿದ್ದರು. ಅಲ್ಲದೆ, ವಾಹನಕ್ಕೆ ನಕಲಿ ನಂಬರ್‌ ಪ್ಲೇಟ್‌ ಬಳಕೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

ಆರೋಪಿಗಳಿಬ್ಬರು ಪದವೀಧರರು: ಆರೋಪಿಗಳ ಪೈಕಿ ಚಂದ್ರಭಾನು, ಎಂಬಿಎ ಪದವೀಧರ ಮತ್ತು ಲಕ್ಷ್ಮೀ ಮೋಹನ್‌ದಾಸ್‌ ಬಿ.ಎ ಓದಿದ್ದಾನೆ. ಈ ಆರೋಪಿಗಳು ಹಣ ಸಂಪಾದನೆಗಾಗಿ ಗಾಂಜಾ ದಂಧೆಗೆ ಇಳಿದಿದ್ದರು. ಕರ್ನಾಟಕ ಮಾತ್ರವಲ್ಲದೆ ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿ ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ಗಾಂಜಾ ಪೂರೈಸುತ್ತಿದ್ದರು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಎಸ್‌.ಡಿ.ಶರಣಪ್ಪ ಹೇಳಿದರು.

ಮಾದಕ ವಸ್ತು ದಂಧೆಯನ್ನು ಬೇರು ಸಮೇತ ನಿರ್ಮೂಲನೆ ಮಾಡಲು ಬದ್ಧವಾಗಿದ್ದೇವೆ. ಈ ನಿಟ್ಟಿನಲ್ಲಿ ನೆರೆ ರಾಜ್ಯಗಳ ಪೊಲೀಸರು ಹಾಗೂ ಕೇಂದ್ರದ ಸಂಸ್ಥೆಗಳೊಂದಿಗೆ ಸಮನ್ವಯ ಸಭೆ ನಡೆಸಲಿದ್ದೇವೆ. ಈ ಸಭೆಯನ್ನು ಬೆಂಗಳೂರಿನಲ್ಲಿ ನಡೆಸುತ್ತೇವೆ. -ಬಿ.ದಯಾನಂದ, ನಗರ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next