ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಸಾಫ್ಟ್ವೇರ್ ಉದ್ಯೋಗಿ ಸೇರಿದಂತೆ ನಾಲ್ವರನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಹೊಸಪಾಳ್ಯದ ಸಾಫ್ಟ್ವೇರ್ ಇಂಜಿನಿಯಾರ್ ಅವಿಶೇಕ್ ಸಿಂಗ್(34), ನೇಪಾಳದ ಅಶೋಕ್ ಬಹದ್ದೂರ್ (21), ಎಚ್‌ಎಸ್‌ಆರ್ ಲೇಔಟ್‌ನ ಬಿಜಯ್ ಸಿಂಗ್ (30), ಬಿಟಿಎಂ ಲೇಔಟ್‌ನ ನಿಸಾಮುದ್ದೀನ್ (25) ಬಂಧಿತರು. ಆರೋಪಿಗಳಿಂದ 27 ಲಕ್ಷ ರೂ. ಮೌಲ್ಯದ 2.7 ಕೆ.ಜಿ. ಚರಸ್ ಮತ್ತು 5.3 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ನಗರದಲ್ಲಿ ಭದ್ರತಾ ಸಿಬ್ಬಂದಿಯಾಗಿರುವ ಅಶೋಕ್ ಬಹದ್ದೂರ್ ತನ್ನ ಸ್ನೇಹಿತ ಬಿಜಯ್‌ಸಿಂಗ್ ಜತೆ ಸೇರಿ ಚರಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ. ನೇಪಾಳದ ಬಜಾಂಗ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಗಾಂಜಾ ಗಿಡಗಳನ್ನು ಬೆಳೆಸುತ್ತಿದ್ದ. ಅಲ್ಲಿಂದ ಬಸ್‌ನಲ್ಲಿ ಕಾಂಚಾನಪುರಕ್ಕೆ ಚರಸ್ ಮತ್ತು ಗಾಂಜಾ ತರುತ್ತಿದ್ದ ಆತ ನಂತರ ಟಾಂಗದಲ್ಲಿ ಉತ್ತರಾಖಂಡ ರಾಜ್ಯದ ಗಡಿಗೆ ಬಂದು ಅಲ್ಲಿಂದ ಗಡಿ ದಾಟಿ ಬಸ್‌ನಲ್ಲಿ ದೆಹಲಿಗೆ ಬರುತ್ತಿದ್ದ. ದೆಹಲಿಯಿಂದ ರೈಲಿನ ಮೂಲಕ ನಗರಕ್ಕೆ ಅದನ್ನು ತೆಗೆದುಕೊಂಡು ಬರುತ್ತಿದ್ದ ಎನ್ನಲಾಗಿದೆ.
ಜೋಳದ ರೀತಿ ಪ್ಲಾಸ್ಟಿಕ್‌ನಲ್ಲಿ ಸಾಗಾಟ: ಚರಸ್ ಹೆಚ್ಚು ವಾಸನೆ ಬರುತ್ತಿದ್ದುದ್ದರಿಂದ ಅದನ್ನು ಜೋಳದ ಆಕಾರದಲ್ಲಿ ಪ್ಲಾಸ್ಟಿಕ್‌ನಲ್ಲಿ ಕಟ್ಟಿ ಯಾರಿಗೂ ಗೊತ್ತಾಗದಂತೆ ತರುತ್ತಿದ್ದ. ಜೋಳದ ಆಕಾರದ ಪ್ಲಾಸ್ಟಿಕ್‌ನೊಳಗೆ ಮೂರು ರೀತಿಯ ಪದರ ಇರುತ್ತಿದ್ದುದರಿಂದ ವಾಸನೆ ಬರುತ್ತಿರಲಿಲ್ಲ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
ಹೀಗೆ ನಗರಕ್ಕೆ ತಂದ ಚರಸ್‌ಅನ್ನು ಆರೋಪಿಗಳು ಪ್ರತಿಷ್ಠಿತ ಕಾಲೇಜುಗಳ ಬಳಿ ವಿದ್ಯಾರ್ಥಿಗಳು ಮತ್ತು ಸಾಫ್ಟ್ವೇರ್ ಉದ್ಯೋಗಿಗಳಿಗೆ ಹಾಗೂ ವಿದೇಶಿಯರಿಗೆ 10 ಗ್ರಾಂಗೆ 7ರಿಂದ 10 ಸಾವಿರ ರೂ.ತನಕ ಮಾರಾಟ ಮಾಡುತ್ತಿದ್ದರು. ಹೆಣ್ಣೂರು, ಬಾಣಸವಾಡಿ, ಮೈಕೋಲೇಔಟ್ ಇನ್ನಿತರ ಪ್ರದೇಶಗಳಲ್ಲಿ ಗ್ರಾಹಕರನ್ನು ಹೊಂದಿದ್ದರು. ಅಲ್ಲದೆ, ಹೊಸಕೋಟೆಯಿಂದ ಗಾಂಜಾ ತಂದು ಅದನ್ನು ಸಣ್ಣ ಪ್ಯಾಕೇಟ್‌ಗಳಲ್ಲಿ ಮಾರಾಟ ಮಾಡುತ್ತಿದ್ದರು.
ಈ ದಂಧೆ ವೇಳೆ ಬಹದ್ದೂರ್‌ಗೆ, ನಿಜಾಮುದ್ದೀನ್ ಮತ್ತು ಅವಿಶೇಕ್ ಸಿಂಗ್ ಪರಿಚಯವಾಗಿದೆ. ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದರೂ ಅವಿಶೇಕ್ ಸಿಂಗ್ ಆ ಕೆಲಸ ಬಿಟ್ಟು ಹೆಚ್ಚಿನ ಹಣದಾಸೆಗೆ ಈ ದಂಧೆಯಲ್ಲಿ ಭಾಗಿಯಾಗಿದ್ದ. ದೆಹಲಿ ಮೂಲದ ಅವಿಶೇಕ್ ಸಿಂಗ್ ಕಳೆದ ಒಂದು ವರ್ಷದ ಹಿಂದೆ ನಗರಕ್ಕೆ ಬಂದಿದ್ದು, ಎರಡು ಕಂಪನಿಗಳಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದ.
ಕೆಲಸ ಬಿಟ್ಟು ಸುಲಭವಾಗಿ ಹಣ ಮಾಡಬಹುದೆಂದು ಕೃತ್ಯಕ್ಕೆ ಇಳಿದಿದ್ದ. ಆತನ ಪೋಷಕರು ದೆಹಲಿಯಲ್ಲಿ ನೆಲೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೈಕೋಲೇಔಟ್ ಎನ್.ಎಸ್.ಪಾಳ್ಯದ ನಿಸಾಮುದ್ದೀನ್ ಮನೆಯಲ್ಲಿ ಮಾದಕ ವಸ್ತು ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಇನ್ಸ್‌ಪೆಕ್ಟರ್ ಬಿ.ಕೆ.ಶೇಖರ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.