ಕೆಲ ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಅನುಷ್ ಎ. ಶೆಟ್ಟಿ ಅವರ “ಕಳ್ಬೆಟ್ಟದ ದರೋಡೆಕೋರರು’ ಕಾದಂಬರಿ ಈಗ ಸಿನಿಮಾ ರೂಪದಲ್ಲಿ ತೆರೆಮೇಲೆ ಬರಲು ಸಜ್ಜಾಗಿದೆ. ನಿರ್ದೇಶಕ ದೀಪಕ್ ಮಧುವನಳ್ಳಿ “ಕಳ್ಬೆಟ್ಟದ ದರೋಡೆಕೋರರು’ ಕಾದಂಬರಿಯನ್ನು ಸಿನಿಮಾವಾಗಿಸಿ ತೆರೆಗೆ ತರುತ್ತಿದ್ದಾರೆ. ಸದ್ಯ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಫೆಬ್ರವರಿ ಅಂತ್ಯದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.
“ಕಳ್ಬೆಟ್ಟದ ದರೋಡೆಕೋರರು’ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ದೀಪಕ್ ಮಧುವನಹಳ್ಳಿ, “ಈ ಕಾದಂಬರಿಯನ್ನು ಓದುತ್ತಿದ್ದಂತೆ, ಅದನ್ನು ಸಿನಿಮಾ ಮಾಡುವ ಆಸಕ್ತಿ ಬಂತು. ಮುಂದೆ ಅದರ ಲೇಖಕರ ಅನುಮತಿ ಪಡೆದು ಚಿತ್ರ ಮಾಡಿ ಮುಗಿಸಿದ್ದೇವೆ. ಹಳ್ಳಿಯೊಂದರಲ್ಲಿ ಇರುವ ಆನೆ ಸಾಲು ಮತ್ತು ಕೋಟೆ ಬೀದಿಯಲ್ಲಿರುವ ಎರಡು ಓಣಿಯ ಹುಡುಗರು ಯಾವಾಗಲೂ ದ್ವೇಷ ಸಾಧಿಸುತ್ತಿತ್ತಾರೆ.
ಅದೇ ಊರಿನಲ್ಲೊಂದು ಬೆಟ್ಟವಿದ್ದು, ರಾತ್ರಿಯಾದರೆ ಅಲ್ಲಿ ದರೋಡೆ ಆಗುತ್ತಿರುತ್ತದೆ. ಇದರಿಂದಾಗಿ ರಾತ್ರಿ ವೇಳೆ ಯಾರೂ ಮನೆಯಿಂದ ಹೊರ ಬರುವುದಿಲ್ಲ. ಆ ವೇಳೆಯಲ್ಲಿ ಜನರು ಆಚೆ ಬರುವುದಿಲ್ಲ. ಮುಂದೆ ಅಲ್ಲಿ ಒಬ್ಬೊಬ್ಬರೇ ಕಾಣೆಯಾಗುತ್ತಾರೆ. ಅದು ಹೇಗೆ ಎನ್ನುವುದೇ ಚಿತ್ರದ ಕಥಾಹಂದರ. ಇದರ ನಡುವೆ ನವಿರಾದ ಪ್ರೇಮಕಥೆ ಕೂಡ ಬರುತ್ತದೆ. ಅದು ಏನಂತ ತಿಳಿಯಬೇಕಾದರೆ, ಚಿತ್ರ ನೋಡಬೇಕು ಎನ್ನುತ್ತಾರೆ ನಿರ್ದೇಶಕರು.
“ಕಳ್ಬೆಟ್ಟದ ದರೋಡೆಕೋರರು’ ಚಿತ್ರದಲ್ಲಿ “ರಾಮ ರಾಮರೇ’ ಚಿತ್ರದ ಖ್ಯಾತಿಯ ನಟರಾಜ್ ನಾಯಕನಾಗಿ ಮತ್ತು ಕಿರುತೆರೆಯ ಶ್ವೇತಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಹೇಮಂತ್ ಸುಶೀಲ್, ದಾನಪ್ಪ, ಸಿದ್ದರಾಜ್ ಕಲ್ಯಾಣ್‌ಕರ್, ಸಂಜು, ಗೌತಮ್, ಕುಮುದವಲ್ಲಿ, ಗಣೇಶ್ ರಾವ್ ಕೇಸರ್ಕರ್ ಸೇರಿದಂತೆ ಸುಮಾರು 35 ಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಅನೂಪ್ ಸೀಳಿನ್ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಬ್ರಿಡ್ಜ್ ಫಿಲಂಸ್ ಬ್ಯಾನರ್‌ನಲ್ಲಿ ಕಿರಣ್ ಕುಮಾರ್, ವಿನಯ್, ಶ್ರೀವತ್ಸ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಈಗಾಗಲೇ ಚಿತ್ರದ ಟೈಟಲ್, ಪೋಸ್ಟರ್ ಮತ್ತು ಬಿಡುಗಡೆಯಾಗಿದ್ದು, ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಖುಷಿಯಲ್ಲಿರುವ ಚಿತ್ರತಂಡ ಫೆಬ್ರವರಿ ಅಂತ್ಯಕ್ಕೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ. ಸದ್ಯ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಪ್ರಚಾರದ ಭಾಗವಾಗಿ ಇತ್ತೀಚೆಗೆ ಚಿತ್ರದ “ಓಯ್ ಕಮಲಿ…’ ಎಂಬ ಮೊದಲ ವೀಡಿಯೋ ಹಾಡನ್ನು ಬಿಡುಗಡೆ ಮಾಡಿದೆ.