ಮುಂಬಯಿ :1993ರ ಮುಂಬಯಿ ಬ್ಲಾಸ್ಟ್ ಪ್ರಕರಣದಲ್ಲಿನ ತನ್ನ ಪಾತ್ರಕ್ಕಾಗಿ ಜೀವಾವಧಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಗ್ಯಾಂಗ್‌ಸ್ಟರ್ ಅಬು ಸಲೇಂ, ‘ಸಂಜು’ ಬಾಲಿವುಡ್ ಚಿತ್ರ ನಿರ್ಮಾಪಕರ ವಿರುದ್ಧ ತಾನು ಮಾನಹಾನಿ ದಾವೆ ಹೂಡುವುದಾಗಿ ಹೇಳಿ ಲೀಗಲ್ ನೊಟೀಸ್ ಜಾರಿ ಮಾಡಿಸಿದ್ದಾನೆ.
“ನನ್ನ ವಿರುದ್ಧ ಸಂಜು ಚಿತ್ರದಲ್ಲಿ ತಪ್ಪು ಮಾಹಿತಿಯನ್ನು ನೀಡಲಾಗಿದ್ದು ನನ್ನನ್ನು ತಪ್ಪಾಗಿ ಬಿಂಬಿಸಲಾಗಿದೆ; ಚಿತ್ರ ನಿರ್ಮಾಪಕರು ಈ ಬಗ್ಗೆ ಕ್ಷಮೆ ಯಾಚಿಸಬೇಕು” ಎಂದು ಆರೋಪಿಸಿ ಚಿತ್ರ ನಿರ್ಮಾಪಕರಿಗೆ ಅಬು ಸಲೇಂ ತನ್ನ ವಕೀಲರ ಮೂಲಕ ಲೀಗಲ್ ನೊಟೀಸ್ ಜಾರಿ ಮಾಡಿಸಿದ್ದಾನೆ.
ತನ್ನ ನೊಟೀಸಿಗೆ ಅನುಗುಣವಾಗಿ ನಡೆದುಕೊಳ್ಳುವುದಕ್ಕೆ 15 ದಿನಗಳ ಕಾಲಾವಕಾಶವನ್ನು ಅಬು ಸಲೇಂ ನೀಡಿದ್ದಾನೆ; ಇಲ್ಲದಿದ್ದರೆ ತಾನು ಮಾನನಷ್ಟ ದಾವೆ ಹೂಡುವುದಾಗಿ ನೊಟೀಸಿನಲ್ಲಿ ಎಚ್ಚರಿಕೆ ನೀಡಿದ್ದಾನೆ.
ಸಲೇಂ ಜಾರಿ ಮಾಡಿಸಿರುವ ಲೀಗಲ್ ನೊಟೀಸನ್ನು ಚಿತ್ರ ನಿರ್ಮಾಪಕರಾದ ರಾಜು ಹಿರಾನಿ, ವಿಧು ವಿನೋದ್ ಚೋಪ್ರಾ ಮತ್ತು ಇತರ ಅನೇಕರಿಗೆ ತಲುಪಿಸಲಾಗಿದೆ.
”ಸಂಜು ಚಿತ್ರದಲ್ಲಿ ರಣಬೀರ್ ಕಪೂರ್, ಸಂಜಯ್ ದತ್ ಪಾತ್ರ ನಿರ್ವಹಿಸಿದ್ದಾರೆ. ಮುಂಬಯಿ ಬ್ಲಾಸ್ಟ್ ಕೇಸಿಗೆ ಸಂಬಂಧಿಸಿ, 1993ರಲ್ಲಿ ಮುಂಬಯಿಯಲ್ಲಿ ಕೋಮು ದೊಂಬಿ ನಡೆದಿದ್ದ ವೇಳೆ ತಾನು ಶಸ್ತ್ರಾಸ್ತ್ರ ಹೊಂದಿದ್ದುದಾಗಿ ಸಂಜಯ್ ದತ್ ಚಿತ್ರದಲ್ಲಿ ತಪ್ಪೊಪ್ಪಿಕೊಳ್ಳುತ್ತಾರೆ. ಮತ್ತು ಈ ಶಸ್ತ್ರಾಸ್ತ್ರ ಪೂರೈಕೆಯಲ್ಲಿ ನನ್ನ ಪಾತ್ರವಿದೆ ಎಂಬಂತೆ ಬಿಂಬಿಸಲಾಗಿದೆ; ಆದರೆ ನಾನೆಂದೂ ಸಂಜಯ್ ದತ್‌ಗೆ ಶಸ್ತ್ರಾಸ್ತ್ರ ಪೂರೈಸಿಯೇ ಇಲ್ಲ” ಎಂದು ಅಬು ಸಲೇಂ ಹೇಳಿದ್ದಾನೆ.