ಗಂಗೊಳ್ಳಿ: ಪತಿ ವಿಪರೀತ ಕುಡಿತದ ಚಟ ಹೊಂದಿದ್ದು, ಮದುವೆಯಾದ ಎರಡನೇ ದಿನದಿಂದಲೇ ಅವಾಚ್ಯ ಶಬ್ದಗಳಿಂದ ಬೈದು ಹಿಂಸೆ ನೀಡುತ್ತಿರುವುದಾಗಿ ಪತ್ನಿ, ನಾಡಾ ಗ್ರಾಮದ ಸೀಮಾ ಗಂಗೊಳ್ಳಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
2020ರ ಡಿಸೆಂಬರ್ 28ರಂದು ರವಿ ಎಂಬಾತನ ಜೊತೆ ಸೀಮಾ ವಿವಾಹ ನೆರವೇರಿತ್ತು. ಆದರೆ ಪತಿ ಕುಡಿದು ಬಂದು ಸೀಮಾಳ ಮೇಲೆ ಹಲ್ಲೆ ನಡೆಸುವುದು, ಸರಿಯಾದ ಸಮಯಕ್ಕೆ ಊಟ ನೀಡದೆ ಹಿಂಸೆ ನೀಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
2021ರ ಸೆಪ್ಟೆಂಬರ್ ನಲ್ಲಿ ಸೀಮಾ ಗಂಡು ಮಗುವಿಗೆ ಜನ್ಮ ನೀಡಿದ್ದಳು. ತವರು ಮನೆಯಲ್ಲಿ ಬಾಣಂತನ ಮುಗಿಸಿ ಗಂಡನ ಮನೆಗೆ ವಾಪಸ್ ಹೋಗಿದ್ದು, ಈ ಸಂದರ್ಭದಲ್ಲಿ ಪತಿ ರವಿಯ ಒತ್ತಡದಿಂದ ಒಂದು ಜೊತೆ ಚಿನ್ನದ ಬೆಂಡೋಲೆಯನ್ನು ಗಂಗೊಳ್ಳಿಯ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಇಟ್ಟು 5,000 ರೂಪಾಯಿ ಗಂಡನಿಗೆ ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ನಂತರ ಕುಂದಾಪುರದ ಸಮಸ್ಥ ಕೋ ಅಪರೇಟಿವ್ ಸೊಸೈಟಿಯಲ್ಲಿ 45,000 ಸಾವಿರ ರೂಪಾಯಿ, ಸ್ಪಂದನ ಸ್ಫೂರ್ತಿ ಕೋ ಅಪರೇಟಿವ್ ಸೊಸೈಟಿಯಿಂದ 42,000 ಸಾವಿರ ರೂಪಾಯಿ ಸಾಲ ತೆಗೆದು ಗಂಡನಿಗೆ ನೀಡಿದ್ದು, ಅದರಲ್ಲಿ 20,000 ರೂಪಾಯಿ ಸೀಮಾ ತೀರಿಸಿರುವುದಾಗಿ ತಿಳಿಸಿದ್ದಾರೆ.
ಏತನ್ಮಧ್ಯೆ ಪತಿ ರವಿ ಹಾಗೂ ಅತ್ತೆ ಅಕ್ಕಮ್ಮ ಸೇರಿಕೊಂಡು ಅವಾಚ್ಯ ಶಬ್ದಗಳಿಂದ ಬೈದು, ಮನೆಯಿಂದ ಹೊರ ಹಾಕಿ ಜೀವ ಬೆದರಿಕೆ ಒಡ್ಡಿದ್ದು, ಈಗ ತಾನು ತವರು ಮನೆಗೆ ಬಂದು ವಾಸಿವಾಗಿರುವುದಾಗಿ ಸೀಮಾ ದೂರಿನಲ್ಲಿ ಉಲ್ಲೇಖಿಸಿದ್ದು, ಅದರಂತೆ ಆರೋಪಿಗಳ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿ ತಿಳಿಸಿದೆ.