Advertisement
ಗಂಗೊಳ್ಳಿ ಕಿರುಬಂದರಿನಲ್ಲಿ ಹೂಳಿನ ಸಮಸ್ಯೆ ಎದುರಾಗಿದೆ. ಬಂದರಿನ 405 ಮೀಟರ್ ಜೆಟ್ಟಿ, ಹಳೆಯ ಜೆಟ್ಟಿ, ಗಂಗೊಳ್ಳಿ- ಕೋಡಿ ನಡುವಿನ ಅಳಿವೆ, ಮ್ಯಾಂಗನೀಸ್ ವಾರ್ಫ್, ಬ್ರೇಕ್‌ವಾಟರ್ ಇಕ್ಕೆಲಗಳಲ್ಲಿ ಹೂಳು ಆವರಿಸಿದ್ದು, ಬೋಟುಗಳು ಜೆಟ್ಟಿ ಯಲ್ಲಿ ನಿಲ್ಲಲು ಹಾಗೂ ಅಳಿವೆ ಮೂಲಕ ಸಾಗಲು ತೊಂದರೆಯಾಗುವ ಸಾಧ್ಯತೆ ಇದೆ. ಹೀಗಾಗಿ ಜೆಟ್ಟಿ ಹಾಗೂ ಅಳಿವೆ ಪ್ರದೇಶಗಳಲ್ಲಿ ಹೂಳೆತ್ತಲು ಸರಕಾರ ಕ್ರಮ ವಹಿಸಬೇಕು ಎಂದು ಮೀನುಗಾರರು ಆಗ್ರಹಿಸಿದ್ದಾರೆ.ಮೀನುಗಾರಿಕೆ
ಮಳೆಗಾಲದ ರಜೆಯ ಬಳಿಕ ಮತ್ತೆ ಮೀನುಗಾರಿಕೆ ಚಟುವಟಿಕೆಗಳು ಆರಂಭಗೊಂಡಿದ್ದು, ವಿಶ್ರಾಂತಿಯಲ್ಲಿದ್ದ ಬೋಟುಗಳನ್ನು ಕಡಲಿಗೆ ಇಳಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಮೀನುಗಾರಿಕೆಗೆ ಅಗತ್ಯವಿರುವ ಬಲೆ ಮತ್ತಿತರ ಸಲ ಕರಣೆಗಳನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. 2 ತಿಂಗಳುಗಳ ರಜೆಯ ಬಳಿಕ ಆಳಸಮುದ್ರ ಮೀನುಗಾರರು ಮತ್ತೆ ಕಡಲಿಗಿಳಿದಿದ್ದು, ಕಳೆದ ಕೆಲವು ದಿನಗಳಿಂದ ನಾಡ ದೋಣಿ ಮತ್ತು ಕೆಲವು ಬೋಟುಗಳು ಉತ್ತಮ ಮೀನುಗಾರಿಕೆ ನಡೆಸಿವೆ.
ಗಂಗೊಳ್ಳಿ ಬಂದರಿನಲ್ಲಿ ಸುಮಾರು 100ಕ್ಕೂ ಮಿಕ್ಕಿ ಫಿಶಿಂಗ್ ಬೋಟ್ ಸೇರಿದಂತೆ 400ಕ್ಕೂ ಮಿಕ್ಕಿ ಬೋಟುಗಳು ಹಾಗೂ 25ಕ್ಕೂ ಮಿಕ್ಕಿ ಆಳ ಸಮುದ್ರ ಬೋಟುಗಳು ಕಾರ್ಯಾಚರಿಸುತ್ತಿವೆ. ಬ್ರೇಕ್ ವಾಟರ್‌ನಿಂದ ಅಳಿವೆಯಲ್ಲಿನ ಭೀತಿ ಕೊಂಚ ಕಡಿಮೆಯಾಗಿರುವುದರಿಂದ ಮೀನುಗಾರರು ನೆಮ್ಮದಿಯಲ್ಲಿದ್ದಾರೆ. ಭರದಿಂದ ಕೆಲಸ
ಸುಮಾರು 3 ಕೋ. ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿರುವ ಹಳೆ ಜೆಟ್ಟಿ ಪ್ರದೇಶದಲ್ಲಿ ಬೋಟು ನಿಲ್ಲಲು ವ್ಯವಸ್ಥೆ ಮಾಡಲಾಗಿದೆ. ಸುಮಾರು 400 ಮೀಟರ್ ಉದ್ದದ ಜೆಟ್ಟಿ ಪ್ರದೇಶದಲ್ಲಿ ಸುಮಾರು 150 ಮೀ.ನಷ್ಟು ಕುಸಿದಿರುವುದರಿಂದ ಸುಮಾರು 12 ಕೋ. ರೂ. ವೆಚ್ಚದಲ್ಲಿ ಪುನರ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.
Related Articles
Advertisement
ಉತ್ತೇಜನ ದೊರೆಯಲಿಕಳೆದ ಸಾಲಿನ ಮೀನುಗಾರಿಕೆ ಋತು ನಿರಾಸೆಯಲ್ಲಿ ಅಂತ್ಯಗೊಂಡಿರುವುದು ಮತ್ತು ಮಳೆಗಾಲದಲ್ಲಿ ನಡೆಯುವ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಕೆಲವು ದಿನಗಳು ಮಾತ್ರ ನಡೆದಿರುವುದು ಮೀನುಗಾರರಲ್ಲಿ ನಿರಾಸೆ ಮೂಡಿಸಿದೆ. ಈ ಎಲ್ಲ ಸಮಸ್ಯೆಗಳನ್ನು ಹೊತ್ತು ಪ್ರಸಕ್ತ ಸಾಲಿನಲ್ಲಿ ಹೊಸ ಭರವಸೆ, ಆಸೆಯೊಂದಿಗೆ ಮೀನುಗಾರರು ಕಡಲಿಗಿಳಿದಿದ್ದಾರೆ. ಮೀನುಗಾರಿಕೆಗೆ ಉತ್ತೇಜನ, ಮೀನುಗಾರರಿಗೆ ಬೆಂಬಲ ನೀಡುವ ಯೋಜನೆ ಸರಕಾರ ನಡೆಸಬೇಕಿದೆ ಎನ್ನುವುದು ಸ್ಥಳೀಯ ಮೀನುಗಾರರ ಒಕ್ಕೊಲರ ಆಗ್ರಹ. ಉತ್ಸಾಹ
ಗಂಗೊಳ್ಳಿ ಅಳಿವೆಯಲ್ಲಿ 102 ಕೋಟಿ ರೂ. ವೆಚ್ಚದ ಬ್ರೇಕ್ ವಾಟರ್ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಹೂಳೆತ್ತುವ ಕಾಮಗಾರಿ ಈ ವರೆಗೆ ನಡೆಯದಿರುವುದ ರಿಂದ ಅಳಿವೆಯಲ್ಲಿ ಹೂಳು ತುಂಬಿಕೊಂಡಿದ್ದು, ದೋಣಿ, ಬೋಟುಗಳ ಸಂಚಾರಕ್ಕೆ ತೊಡಕಾಗುವ ಸಾಧ್ಯತೆ ಹೆಚ್ಚಾಗಿದೆ. ಹವಾಮಾನ ವೈಪರೀತ್ಯ, ಮತ್ಸ್ಯಕ್ಷಾಮದಿಂದ ಕಳೆದ ಸಾಲಿನಲ್ಲಿ ಕಂಗೆಟ್ಟು ಹೋಗಿರುವ ಮೀನುಗಾರರು ಈ ಬಾರಿ ಹೊಸ ನಿರೀಕ್ಷೆಯೊಂದಿಗೆ ಕಡಲಿಗೆ ಇಳಿಯಲು ಉತ್ಸಾಹ ತೋರುತ್ತಿರುವುದು ಕಂಡುಬಂದಿದೆ. ಸೌಲಭ್ಯ ಒದಗಿಸಿ
ಕಳೆದ ಸಾಲಿನಲ್ಲಿ ಮೀನುಗಾರಿಕೆ ನಾಡದೋಣಿ ಮೀನುಗಾರರಿಗೆ ಪೂರಕವಾಗಿರಲಿಲ್ಲ. ಮತ್ಸ್ಯಕ್ಷಾಮ ಮತ್ತಿತರ ಕಾರಣಗಳಿಂದ ಋತುವಿನ ಅಂತ್ಯದ ಕೆಲವು ತಿಂಗಳು ಮೀನುಗಾರಿಕೆ ನಡೆಯಲಿಲ್ಲ. ಲೈಟ್ ಫಿಶಿಂಗ್, ಸೀಮೆಎಣ್ಣೆ ಅಲಭ್ಯತೆಯಿಂದ ನಾಡದೋಣಿ ಮೀನುಗಾರರಿಗೆ ತೊಂದರೆಯಾಗಿದೆ. ಸರಕಾರದ ಮುಂದೆ ನಮ್ಮೆಲ್ಲ ಸಮಸ್ಯೆಗಳನ್ನು ಮುಂದಿರಿಸಿದ್ದೇವೆ. ಗಂಗೊಳ್ಳಿ ಬಂದರಿನಲ್ಲಿ ಮೂಲ ಸೌಲಭ್ಯ ಒದಗಿಸಬೇಕು.
–ಯಶವಂತ ಖಾರ್ವಿ
ಅಧ್ಯಕ್ಷರು, ನಾಡದೋಣಿ ಮೀನುಗಾರರ ಸಂಘ, ಗಂಗೊಳ್ಳಿ ವಲಯ ಯೋಜನೆ ರೂಪಿಸಲಿ
ಬಂದರಿನಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ಕುಸಿದು ಬಿದ್ದಿರುವ ಜೆಟ್ಟಿಯ ಪುನರ್ ನಿರ್ಮಾಣ ಕಾರ್ಯ ಸಾಗುತ್ತಿದ್ದು ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು. ಬಂದರಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಯೋಜನೆ ರೂಪಿಸಬೇಕು. ಮೀನುಗಾರರ ಬೇಡಿಕೆಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕು.
-ಮಂಜುನಾಥ ಖಾರ್ವಿ, ಮೀನುಗಾರ, ಗಂಗೊಳ್ಳಿ