ಗಂಗೊಳ್ಳಿ : ಸಮುದಾಯ ಆರೋಗ್ಯ ಕೇಂದ್ರವಾಗಬೇಕಿರುವ ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬಂದಿ ಕೊರತೆ ಕಾಡುತ್ತಿದ್ದು, ಸಾಂಕ್ರಮಿಕ ರೋಗಗಳು ಹೆಚ್ಚಾಗಿರುವ ಈ ಸಮಯದಲ್ಲಿಯೇ ಸಿಬಂದಿ ಕೊರತೆಯಿಂದ ಸಮಸ್ಯೆಯಾಗುತ್ತಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಗಂಗೊಳ್ಳಿ, ಹೆಮ್ಮಾಡಿ, ಕಟ್ಬೆಲ್ತೂರು ಹಾಗೂ ತಲ್ಲೂರು ಗ್ರಾ.ಪಂ.ಗಳನ್ನೊಳಗೊಂಡ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಟ್ಟು 23 ಹುದ್ದೆಗಳಿದ್ದು, ಇದರಲ್ಲಿ ಕೇವಲ 7 ಹುದ್ದೆ ಮಾತ್ರ ಭರ್ತಿಯಾಗಿದೆ.
ಮಳೆಗಾಲದ ಸಮಯದಲ್ಲಿ ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಮಿಕ ರೋಗಗಳು ಮಾತ್ರವಲ್ಲದೆ ಜ್ವರ, ಕೆಮ್ಮು, ಶೀತ ಮತ್ತಿತರರ ಕಾಯಿಲೆಗಳಿಗೆ ಚಿಕಿತ್ಸೆಗೆಂದು ಬರುವ ರೋಗಿಗಳ ಸಂಖ್ಯೆ ಎಂದಿಗಿಂತ ಹೆಚ್ಚಿರುತ್ತದೆ. ಈಗ ದಿನಕ್ಕೆ ಸುಮಾರು 100 ಕ್ಕೂ ಹೆಚ್ಚು ಮಂದಿ ರೋಗಿಗಳು ಚಿಕಿತ್ಸೆ ಹಾಗೂ ತಪಾಸಣೆ ಮಾಡಿಕೊಳ್ಳಲು ಬರುತ್ತಿದ್ದಾರೆ. ಖಾಲಿ ಇರುವ ಹುದ್ದೆಗಳಿಂದಾಗಿ ಸಿಬಂದಿಯಿಲ್ಲದೆ ಸಮಸ್ಯೆಯಾಗುತ್ತಿದೆ.
ಔಷಧ ಕೊರತೆಯಿಲ್ಲ
ದಿನಕ್ಕೆ ನೂರಕ್ಕೂ ಅಧಿಕ ಮಂದಿ ತಪಾಸಣೆ, ಚಿಕಿತ್ಸೆಗೆ ಬರುತ್ತಿದ್ದರೂ, ಇರುವ ಕೆಲವೇ ಮಂದಿಯಾದರೂ, ಜನರಿಗೆ ಸಮಸ್ಯೆಯಾಗದಂತೆ ಉತ್ತಮ ಸೇವೆ ನೀಡಲು ಪ್ರಯತ್ನಿಸಲಾಗುತ್ತಿದ್ದು, ಸಾಂಕ್ರಮಿಕ ರೋಗಗಳಿಗೆ ಅಗತ್ಯವಿರುವ ಎಲ್ಲ ಔಷಧಗಳನ್ನು ದಾಸ್ತಾನು ಇರಿಸಲಾಗಿದೆ. ಯಾವುದೇ ರೀತಿಯ ಔಷಧಿಗಳ ಕೊರತೆಯಿಲ್ಲ ಎನ್ನುವುದಾಗಿ ಇಲ್ಲಿನ ವೈದ್ಯಾಧಿಕಾರಿ ತಿಳಿಸಿದ್ದಾರೆ.