ಗಂಗೊಳ್ಳಿ: ಇಲ್ಲಿನ ಮೀನುಗಾರಿಕಾ ಬಂದರಿನ ಅಳಿವೆ ಪ್ರದೇಶದಲ್ಲಿ ಸಾಕಷ್ಟು ಹೂಳು ತುಂಬಿದ್ದು, 102 ಕೋ.ರೂ. ವೆಚ್ಚದ ಬ್ರೇಕ್ ವಾಟರ್ ಕಾಮಗಾರಿಯಲ್ಲೇ ಡ್ರೆಜ್ಜಿಂಗ್ ಮಾಡಲು ಅವಕಾಶವಿದ್ದರೂ, ಇದಕ್ಕಾಗಿ ಹಣ ವಿನಿಯೋಗಿಸಿಲ್ಲ ಎನ್ನುವ ಆರೋಪ ಮೀನುಗಾರರದ್ದಾಗಿದೆ.
ಇನ್ನು ಬಂದರು ಆಸುಪಾಸಿನ ಸಮುದ್ರ ಭಾಗದಲ್ಲಿ ಡ್ರೆಜ್ಜಿಂಗ್ ಮಾಡದ ಕಾರಣ ದೊಡ್ಡ ಬೋಟ್‌ಗಳು ಭವಿಷ್ಯದಲ್ಲಿ ಬೇರೆ ಬಂದರನ್ನು ಆಶ್ರಯಿಸುವ ದುಃಸ್ಥಿತಿ ಕೂಡ ಬರಬಹುದು, ಅದಲ್ಲದೆ ಹೂಳು ತುಂಬಿರುವುದರಿಂದ ಬೋಟು, ದೋಣಿಗಳಲ್ಲಿ ಮೀನುಗಾರಿಕೆಗೆ ತೆರಳುವಾಗ ಜೀವಕ್ಕೂ ಅಪಾಯ ಎದುರಾಗಬಹುದು ಎನ್ನುವ ಆತಂಕ ಮೀನುಗಾರರದ್ದಾಗಿದೆ.
102 ಕೋ. ರೂ. ವೆಚ್ಚದಲ್ಲಿ ಗಂಗೊಳ್ಳಿ ಹಾಗೂ ಕೋಡಿಯಲ್ಲಿ 700 ಮೀ. ಹಾಗೂ 900 ಮೀ. ಉದ್ದದ ಕಡಲ್ಕೊರೆತ ತಡೆಗಾಗಿ ನಿರ್ಮಿಸಲಾದ ಬ್ರೇಕ್ ವಾಟರ್ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ.
ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಕಂಪೆನಿಗೆ ಯೋಜನೆ ಆರಂಭದಲ್ಲಿಯೇ ಬಂದರಿನ ಅಳಿವೆ ಪ್ರದೇಶ ಹಾಗೂ ಎರಡೂ ಬದಿಯ ತಡೆಗೋಡೆ ಭಾಗದಲ್ಲಿ ಹೂಳೆತ್ತೆಲು ಡ್ರೆಜ್ಜಿಂಗ್ ಮಾಡಬೇಕು, ಇದಲ್ಲದೆ ಈ ಕಾಮಗಾರಿಗೆ ಬೇಕಾದ ಸಾಮಗ್ರಿಗಳನ್ನು ಸಾಗಿಸಲು ಗುತ್ತಿಗೆದಾರರು ಇದೇ ರಸ್ತೆಯನ್ನು ಬಳಸಿದ್ದು, ಆ ಹದಗೆಟ್ಟ ರಸ್ತೆಯ ದುರಸ್ತಿ ಮಾಡಿಲ್ಲ. ಇನ್ನು ಬಂದರು ಪ್ರದೇಶದಲ್ಲಿ ಪರಿಸರ ಸಂರಕ್ಷಣೆಗೆ ಚರಂಡಿ ನಿರ್ಮಾಣ, ಪರಿಸರದ ಸ್ವಚ್ಛತೆ, ಮರ – ಗಿಡ ನೆಡುವಂತಹ ಕಾರ್ಯಗಳಿಗೆ 5 ಕೋ.ರೂ. ವಿನಿಯೋಗಿಸಬೇಕು ಎನ್ನುವ ಕರಾರು ಮಾಡಲಾಗಿತ್ತು. ಆದರೆ ಅದ್ಯಾವುದನ್ನೂ ಗುತ್ತಿಗೆದಾರರು ಮಾಡಲು ಮುಂದಾಗಿಲ್ಲ ಎನ್ನುವ ಆರೋಪ ಮೀನುಗಾರರದ್ದು.
ಇನ್ನು ಈ ಕಾಮಗಾರಿಯ ಅರ್ಧದಷ್ಟು ಮಾತ್ರ ಅನುದಾನ ಸರಕಾರದಿಂದ ಗುತ್ತಿಗೆದಾರರಿಗೆ ಮಂಜೂರಾಗಿದ್ದು, ಬಾಕಿ ಅರ್ಧ ಇನ್ನ್ನೂ ಸಿಕ್ಕಿಲ್ಲ ಎನ್ನುವ ಮಾಹಿತಿ ಸಿಕ್ಕಿದ್ದು, ಆ ಕಾರಣಕ್ಕಾಗಿಯೇ ಕಂಪೆನಿಯು ವಿಳಂಬ ಮಾಡುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ
– ಪ್ರಶಾಂತ್ ಪಾದೆ