Advertisement

ಗಂಗೊಳ್ಳಿ: ಮತ್ಸ್ಯಬೇಟೆಗೆ ಕಡಲಿಗಿಳಿದ ಮೀನುಗಾರರು

10:28 PM Aug 19, 2019 | Sriram |

ವಿಶೇಷ ವರದಿ-ಗಂಗೊಳ್ಳಿ: ಕಳೆದ ಎರಡೂವರೆ ತಿಂಗಳಿನಿಂದ ಯಾವುದೇ ಮೀನುಗಾರಿಕೆ ಚಟುವಟಿಕೆಯಿಲ್ಲದೆ ಕಳೆಗುಂದಿದ್ದ ಗಂಗೊಳ್ಳಿ ಬಂದರಿನಲ್ಲಿ ಮತ್ತೆ ಜೀವ ಕಳೆ ಬಂದಿದೆ. ಸೋಮವಾರದಿಂದ ಬೋಟ್‌ಗಳು, ದೋಣಿ ಗಳು ಕಡಲಿಗಿಳಿಯುವ ಮೂಲಕ ಈ ಋತುವಿನ ಆಳ ಸಮುದ್ರ (ಯಾಂತ್ರೀಕೃತ) ಮೀನುಗಾರಿಕೆ ಆರಂಭಗೊಂಡಿದೆ.

Advertisement

ಎರಡು ತಿಂಗಳ ನಿಷೇಧ ಅವಧಿ ಆ. 1ಕ್ಕೆ ಮುಗಿದಿದ್ದರೂ, ಗಂಗೊಳ್ಳಿಯಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಆಳ ಸಮುದ್ರ ಮೀನು ಗಾರಿಕೆ ಆರಂಭವಾಗಿರಲಿಲ್ಲ. ಅಬ್ಬರಿಸುತ್ತಿದ್ದ ಸಮುದ್ರವೀಗ ಸ್ವಲ್ಪ ಮಟ್ಟಿಗೆ ಶಾಂತವಾಗಿದ್ದು, ಮೀನುಗಾರರು ಮತ್ಸé ಬೇಟೆಗೆ ಕಡಲಿ ಗಿಳಿದಿದ್ದಾರೆ. ಕೆಲ ದಿನ ವಿಳಂಬವಾಗಿ ಆರಂಭಗೊಳ್ಳಲಿದೆ. ಮೂಲಗಳ ಪ್ರಕಾರ ಆಗಸ್ಟ್‌ ಎರಡನೇ ವಾರದಿಂದ ಇಲ್ಲಿ ಯಾಂತ್ರೀಕೃತ ಮೀನುಗಾರಿಕೆ ಶುರುವಾಗುವ ನಿರೀಕ್ಷೆಯಲ್ಲಿ ಮೀನುಗಾರರಿದ್ದಾರೆ.

ಬಂದರಿಗೆ ಜೀವ ಕಳೆ
ಕಳೆದ 2 ತಿಂಗಳಿಗೂ ಹೆಚ್ಚು ಕಾಲದಿಂದ ಮೀನುಗಾರಿಕೆ ಚಟುವಟಿಕೆಯಿಲ್ಲದೆ ಕಳೆ ಗುಂದಿದ್ದ ಗಂಗೊಳ್ಳಿ ಬಂದರಿನಲ್ಲಿ ಈಗ ಮತ್ತೆ ಆಳ ಸಮುದ್ರ ಮೀನುಗಾರಿಕೆ ಆರಂಭಗೊಂಡಿರುವುದರಿಂದ ಜೀವ ಕಳೆ ಬಂದಂತಾಗಿದೆ. ಮೀನುಗಾರಿಕೆಯನ್ನೇ ನೆಚ್ಚಿಕೊಂಡಿರುವ ಗಂಗೊಳ್ಳಿ ಪೇಟೆಯಲ್ಲಿಯೂ ವ್ಯಾಪಾರ – ವಹಿವಾಟು ಸುಧಾರಣೆಗೊಳ್ಳುವ ನಿರೀಕ್ಷೆ ವ್ಯಾಪಾರಸ್ಥರದ್ದಾಗಿದೆ.

ಬೋಟ್‌ ನಿಲುಗಡೆ ಸಮಸ್ಯೆ
ಇಲ್ಲಿನ ಬಂದರಿನ ಎರಡನೇ ಹರಾಜು ಪ್ರಾಂಗಣದ ಜೆಟ್ಟಿ ಕುಸಿದು ಹಲವು ಸಮಯ ಕಳೆದಿದ್ದು, 2ನೇ ಹರಾಜು ಪ್ರಾಂಗಣದಲ್ಲಿ ಅಪಾಯ ಕಾರಿಯಾಗಿರುವುದರಿಂದ ಯಾವುದೇ ಮೀನುಗಾರಿಕೆ ಮುಗಿಸಿ ಬರುವ ಬೋಟ್‌ಗಳಿಂದ ಮೀನುಗಳನ್ನು ಇಳಿಸುವ ಸಹಿತ ಚಟುವಟಿಕೆ ನಡೆಸಲು ಸಾಧ್ಯವಿಲ್ಲ. ಇದರಿಂದ ಬಂದರಿನಲ್ಲಿ ಬೋಟ್‌ಗಳಿಂದ ಮೀನು ಇಳಿಸಲು ಜಾಗದ ಕೊರತೆ ಎದುರಾಗಿದೆ. ಶನಿವಾರ ಇಲ್ಲಿಗೆ ಭೇಟಿ ನೀಡಿದ್ದ ಜಿಲ್ಲಾ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ (ಪ್ರಭಾರ) ಕೆ.ಗಣೇಶ ಅವರು ಪರ್ಯಾಯವಾಗಿ ಬಂದರಿನ ಉತ್ತರ ದಿಕ್ಕಿನಲ್ಲಿ ನಿರುಪಯುಕ್ತವಾಗಿರುವ ಜೆಟ್ಟಿಯನ್ನು ಬಳಸಿಕೊಳ್ಳಲು ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದ್ದರು. ಆದರೆ ಅದಿನ್ನು ಕೆಲ ದಿನ ವಿಳಂಬವಾಗಬಹುದು.

ಹರ್ಷದಾಯಕ ಋತುವಿನ ನಿರೀಕ್ಷೆ
ಕಳೆದ ವರ್ಷ ಹವಾಮಾನ ವೈಪರೀತ್ಯ, ಚಂಡಮಾರುತ, ಲೈಟ್‌ ಫಿಶಿಂಗ್‌ ನಿಷೇಧ, ಇಲ್ಲಿನ ಮೀನುಗಳಿಗೆ ಗೋವಾ ರಾಜ್ಯದಲ್ಲಿ ನಿಷೇಧ ಸೇರಿದಂತೆ ಅನೇಕ ಸಮಸ್ಯೆ ಎದುರಿಸಿದ್ದರು. ಈ ಬಾರಿ ಕೂಡ ಆರಂಭದಲ್ಲೇ ತೂಫಾನ್‌ ಕಾಣಿಸಿಕೊಂಡಿದ್ದರಿಂದ ಈಗ ಸಮುದ್ರದ ನೀರು ಬಿರುಸಾಗಿದ್ದು, ಇದರಿಂದ ಮೀನುಗಾರಿಕೆಗೆ ಸ್ವಲ್ಪ ತೊಂದರೆಯಾಗುವ ಸಂಭವವಿದ್ದರೂ, ಈ ಬಾರಿಯ ಮೀನುಗಾರಿಕಾ ಋತು ಹರ್ಷದಾಯಕವಾಗಿರಲಿದೆ ಎನ್ನುವುದು ಮೀನುಗಾರರ ಆಶಾಭಾವನೆ.

Advertisement

ಜಾಗದ ಸಮಸ್ಯೆ
ಗಂಗೊಳ್ಳಿಯಿಂದ ಸೋಮವಾರ ಬೆಳಗ್ಗೆ ಸುಮಾರು 40ಕ್ಕೂ ಹೆಚ್ಚು ಗಂಗೊಳ್ಳಿ ಭಾಗದ ಪರ್ಸೀನ್ ಬೋಟ್‌ಗಳು ಹಾಗೂ ಸುಮಾರು 20 ಭಟ್ಕಳ ಮೂಲದ ಬೋಟ್‌ಗಳು ಮೀನುಗಾರಿಕೆಗೆ ತೆರಳಿವೆ. ಈಗ ಸ್ವಲ್ಪ ಮಟ್ಟಿಗೆ ಹವಾಮಾನ ಪ್ರತಿಕೂಲವಾಗಿದ್ದರೂ ಈ ಬಾರಿ ಉತ್ತಮ ಮೀನು ಸಿಗುವ ನಿರೀಕ್ಷೆ ಎಲ್ಲ ಮೀನುಗಾರರದ್ದಾಗಿದೆ. ಬಂದರಿನಲ್ಲಿ ಬೋಟ್‌ಗಳನ್ನು ನಿಲ್ಲಿಸಲು ಜಾಗದ ಸಮಸ್ಯೆ ಹೊರತುಪಡಿಸಿದರೆ, ಸದ್ಯಕ್ಕೆ ಇಲ್ಲೇನು ಮಂಜುಗಡ್ಡೆ ಮತ್ತಿತರ
ಸಮಸ್ಯೆ ಇಲ್ಲ.
– ರಮೇಶ್‌ ಕುಂದರ್‌,
ಅಧ್ಯಕ್ಷರು, ಪರ್ಸೀನ್ ಮೀನುಗಾರರ ಸಹಕಾರ ಸಂಘ ಗಂಗೊಳ್ಳಿ

 

Advertisement

Udayavani is now on Telegram. Click here to join our channel and stay updated with the latest news.

Next