Advertisement

Gangolli: ತ್ಯಾಜ್ಯ ಸಂಗ್ರಹ ಸ್ಥಗಿತ; ಮನೆಗಳ ಎದುರು, ರಸ್ತೆಗಳಲ್ಲಿ ಕಸದ ರಾಶಿ

04:58 PM Oct 24, 2024 | Team Udayavani |

ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಖಾಸಗಿ ಸಂಸ್ಥೆಯ ನಿರ್ವಹಣೆ ವೈಫಲ್ಯದಿಂದಾಗಿ ಒಂದು ವಾರದಿಂದ ತ್ಯಾಜ್ಯ ಸಂಗ್ರಹ ಸ್ಥಗಿತಗೊಂಡಿದ್ದು, ಬಂದರು ಪ್ರದೇಶದಲ್ಲಿರುವ ಘನ ಮತ್ತು ದ್ರವ ಸಂಪನ್ಮೂಲ ಘಟಕ ರೋಗ ಉತ್ಪತ್ತಿ ಕೇಂದ್ರವಾಗಿ ಮಾರ್ಪಟ್ಟಿದೆ.

Advertisement

ಗಂಗೊಳ್ಳಿಯಲ್ಲಿ ಹಲವು ತಿಂಗಳಿ ನಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆ ಉಲ್ಬಣಗೊಂಡಿದೆ. ಇದೇ ಈ ಭಾಗದ ಜನರಿಗೆ ದೊಡ್ಡ ಸಮಸ್ಯೆಯನ್ನೇ ಸೃಷ್ಟಿಸಿದೆ.

ಗಂಗೊಳ್ಳಿ ಗ್ರಾಮ ಪಂಚಾಯತ್‌ ಆಡಳಿತ ಘನ ಮತ್ತು ದ್ರವ ಸಂಪನ್ಮೂಲ ಘಟಕದ ಕಾರ್ಯನಿರ್ವಹಣೆಯನ್ನು ಒಂದುವರೆ ವರ್ಷಗಳ ಹಿಂದೆ ಖಾಸಗಿ ಎನ್‌ಜಿಒ ಸಂಸ್ಥೆಗೆ ವಹಿಸಿಕೊಟ್ಟಿತ್ತು. 1,300ಕ್ಕೂ ಹೆಚ್ಚು ಮನೆ ಮತ್ತು ವಾಣಿಜ್ಯ ಮಳಿಗೆಗಳಿಂದ ಪ್ರತಿನಿತ್ಯ ತ್ಯಾಜ್ಯ ಸಂಗ್ರಹಿಸಲಾಗುತ್ತಿತ್ತು. ಈಗ ಸ್ಥಗಿತವಾದ ಕಾರಣ ಮನೆಗಳ ಮುಂದೆ ಕಸದ ಚೀಲ ನೇತಾಡುತ್ತಿದೆ. ಅದರಿಂದ ವಾಸನೆ ಬರುತ್ತಿದೆ.

ಲೋಡುಗಟ್ಟಲೆ ಕಸ
ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಗಂಗೊಳ್ಳಿಯ ಮೀನುಗಾರಿಕಾ ಬಂದರು ಸಮೀಪ ಸುಮಾರು 7.5 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ತ್ಯಾಜ್ಯ ಸಂಗ್ರಹ ತುಂಬಿ ತುಳುಕುತ್ತಿದೆ. ಘಟಕದಲ್ಲಿ ಹಸಿ ಕಸ ವಿಲೇವಾರಿಗೆ ಕಾಂಪೋಸ್ಟ್‌ ಗೊಬ್ಬರದ ಗುಂಡಿ ನಿರ್ಮಾಣ ಸಹಿತ ಎಲ್ಲ ಸೌಕರ್ಯಗಳನ್ನು ಸ್ಥಳೀಯಾಡಳಿತ ಮಾಡಿದೆ. ಕಾಂಪೋಸ್ಟ್‌ ಗುಂಡಿಯಲ್ಲಿ ಗೊಬ್ಬರ ತುಂಬಿದ್ದರೂ ವಿಲೇವಾರಿಗೊಳಿಸದಿರುವುದರಿಂದ ಹಸಿ ಕಸ ನಿರ್ವಹಣೆಗೆ ಅಡ್ಡಿಯಾಗುತ್ತಿದೆ.

ವಿಸ್ತರಣೆ ಅಗತ್ಯ
ಎಸ್‌ಎಲ್‌ಅರ್‌ಎಂ ಘಟಕ ವಿಸ್ತರಣೆಯಾದರಷ್ಟೇ ಸಮರ್ಪಕ ಕಾರ್ಯನಿರ್ವಹಣೆ ಹಾಗೂ ತ್ಯಾಜ್ಯ ನಿರ್ವಹಣೆ ಸಾಧ್ಯ. ಎಸ್‌ಎಲ್‌ಆರ್‌ಎಂ ಘಟಕ ವಿಸ್ತರಣೆ ಉದ್ದೇಶದಿಂದ ಸ್ಥಳೀಯಾಡಳಿತ ಎದುರಾದ ಭೂಮಿ ಸಮಸ್ಯೆ ಹರಿಸುವತ್ತ ಆದ್ಯತೆ ನೀಡಬೇಕು ಎಂದು ಗಂಗೊಳ್ಳಿ ಜನತೆ ಒತ್ತಾಯಿಸಿದ್ದಾರೆ.

Advertisement

ಶುಚಿತ್ವಕ್ಕೆ ಆದ್ಯತೆ ಇಲ್ಲ
ಪಂಚಾಯತ್‌ ಕಸ ವಿಲೇವಾರಿ ಘಟಕದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಿಲ್ಲ. ರೋಗ ಹರಡುವ ಕೇಂದ್ರವಾಗಿದೆ. ಪಂಚಾಯತ್‌ ನಿರ್ಲಕ್ಷ್ಯ ವಹಿಸಿದೆ. ಈ ಪರಿಸರದಲ್ಲಿ ಬದುಕು ಅಸಹನೀಯವಾಗುತ್ತಿದೆ.
-ರಾಘವೇಂದ್ರ, ಗಂಗೊಳ್ಳಿ

ಶೀಘ್ರ ಪರಿಹಾರ
ಗಂಗೊಳ್ಳಿ ಗ್ರಾ.ಪಂ. ಘನ ಮತ್ತು ದ್ರವ ಸಂಪನ್ಮೂಲ ಘಟಕದ ಕಾರ್ಯನಿರ್ವಹಣೆ ಉತ್ತಮವಾಗಿ ನಡೆಯುತ್ತಿದ್ದು, ಇಡೀ ಗ್ರಾಮದ ತ್ಯಾಜ್ಯ ಸಂಗ್ರಹಣೆಗೆ ಘಟಕ ವಿಸ್ತರಣೆ ಅಗತ್ಯ. ಹೆಚ್ಚಿನ ಜನರು ಪ್ಯಾಂಪರನ್ನು ನೀಡುತ್ತಿದ್ದು, ವಿಲೇವಾರಿ ಕಷ್ಟವಾಗುತ್ತಿದೆ. ಘಟಕದಲ್ಲಿ ಸಮಸ್ಯೆ ಉಂಟಾಗಲು ಇದೇ ಕಾರಣ. ಘಟಕ ವಿಸ್ತರಣೆಗೆ ಜಾಗದ ಸಮಸ್ಯೆಯೂ ಇದೆ. ಶೀಘ್ರವೇ ಎಲ್ಲ ಬಗೆಹರಿಸಲಾಗುವುದು.
-ಉಮಾಶಂಕರ, ಪಿಡಿಒ, ಗಂಗೊಳ್ಳಿ

ಪ್ರಾಣಿಗಳಿಂದ ಪ್ಲಾಸ್ಟಿಕ್‌ ಸೇವನೆ
ತ್ಯಾಜ್ಯದ ರಾಶಿ ಇರುವ ಕಡೆಗಳಲ್ಲಿ ಜಾನುವಾರುಗಳು ಹಾಗೂ ನಾಯಿಗಳ ಹಿಂಡು ಆಗಮಿಸುತ್ತಿದ್ದು, ಸಂಗ್ರಹಗೊಂಡಿರುವ ತ್ಯಾಜ್ಯಗಳನ್ನು ತಿನ್ನುತ್ತಿವೆ. ಈ ಸಂದರ್ಭ ಪ್ಲಾಸ್ಟಿಕ್‌ ಕೂಡ ಪ್ರಾಣಿಗಳ ಹೊಟ್ಟೆ ಸೇರುತ್ತಿದ್ದು, ಹಲವು ಹಸುಗಳು, ನಾಯಿಗಳು ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿವೆ.

ರೋಗಗಳಿಗೆ ಆಹ್ವಾನ
ಸಿಬಂದಿ ಕೊರತೆಯಿಂದ ಸಮಸ್ಯೆ ಘನ ಮತ್ತು ದ್ರವ ಸಂಪನ್ಮೂಲ ಘಟಕದಲ್ಲಿ ಇರುವ ಸಿಬ್ಬಂದಿ ಕೊರತೆ ಕೂಡ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಗಂಗೊಳ್ಳಿ ಗ್ರಾಮಸಭೆಯಲ್ಲೂ ಎಸ್‌ಎಲ್‌ಆರ್‌ಎಂ ಘಟಕದ ಸಮಸ್ಯೆ ಕುರಿತು ಪ್ರಸ್ತಾಪವಾಗಿದ್ದು, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಎಸ್‌ಎಲ್‌ಆರ್‌.ಎಂ ಘಟಕದಲ್ಲಿ ಹಸಿತ್ಯಾಜ್ಯ ವಿಲೇವಾರಿಗೆ ನಿರ್ಮಿಸಲಾದ ಕಾಂಪೋಸ್ಟ್‌ ಗುಂಡಿಯಲ್ಲಿ ತುಂಬಿರುವ ಗೊಬ್ಬರ, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುವಂತಿದೆ.

ಮೀನುಗಾರರಿಗೂ ಕಷ್ಟ
ಬಂದರು ಪ್ರವೇಶ ದ್ವಾರದ ಬಳಿ ಇರುವ ಘಟಕದಲ್ಲಿ ಪ್ಲಾಸ್ಟಿಕ್‌, ತ್ಯಾಜ್ಯ ಸಂಗ್ರಹವಾದ ಕಾರಣ ಅದರಲ್ಲಿ ಮಳೆ ಬಂದು ಹಾಗೂ ತ್ಯಾಜ್ಯದಲ್ಲಿ ತುಂಬಿದ ನೀರು ಹರಿಯುವ ಕಾರಣ ರೋಗ ಉತ್ಪತ್ತಿ ಭೀತಿ ಕಾಣಿಸಿಕೊಂಡಿದೆ. ಈ ರಸ್ತೆ ಮೂಲಕ ಓಡಾಡುವ ಸಾವಿರಾರು ಮಂದಿಗೆ ಸಹಜ ಆತಂಕ ಉಂಟಾಗಿದೆ. ಬಂದರಿಗೆ ಹೋಗಬೇಕಾದರೆ ಈ ಘಟಕ ದಾಟಿಯೇ ಹೋಗಬೇಕು. ಹಾಗಾಗಿ ಬೇಡ ಬೇಡ ಎಂದರೂ ಇಲ್ಲಿನ ಅವ್ಯವಸ್ಥೆ ಬಂದವರ ಕಣ್ಣಿಗೆ ರಾಚುತ್ತದೆ. ಸ್ಥಳೀಯರು ಆರೋಪಿಸುವಂತೆ ಇದರ ವಿಲೇಗೆ ಯಾವುದೇ ಪ್ರಯತ್ನ ಆಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next