Advertisement

ವಿಧ್ವಂಸಕ ಕೃತ್ಯಗಳಿಗೆ ಕಾಂಗ್ರೆಸ್‌ ಕಾರಣ: ಬೈಂದೂರು ಬಿಜೆಪಿ ಸಮಾವೇಶದಲ್ಲಿ ನಡ್ಡಾ

11:52 PM Feb 20, 2023 | Team Udayavani |

ಗಂಗೊಳ್ಳಿ: ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರು ಪಿಎಫ್ಐ, ಕೆಎಫ್ಡಿಯ 1,600 ದೇಶದ್ರೋಹಿ ಕಾರ್ಯಕರ್ತರನ್ನು ಕೇಸು ಖುಲಾಸೆಗೊಳಿಸಿ ಬಿಡುಗಡೆಗೊಳಿಸುವ ಮೂಲಕ ವಿಧ್ವಂಸಕ ಕೃತ್ಯಗಳಿಗೆ ಕಾರಣರಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.

Advertisement

ಅವರು ಮುಳ್ಳಿಕಟ್ಟೆಯ ನಗು ಸಿಟಿ ಮೈದಾನದಲ್ಲಿ ಸೋಮವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಭ್ರಷ್ಟಾಚಾರ, ಒಡೆದಾಳುವ ನೀತಿ, ಕಮಿಷನ್‌ ಇವು ಕಾಂಗ್ರೆಸ್‌ನ ಪ್ರಾಥಮಿಕ ಆದ್ಯತೆಗಳಾಗಿವೆ. ಕಾಂಗ್ರೆಸ್‌ ಆಳ್ವಿಕೆ ಸಂದರ್ಭ ಪದೇಪದೆ ಪವರ್‌ ಕಟ್‌ ಮಾಡಿದ ಕಾರಣ ಜನ ಅವರ ಪವರ್‌ ಕಟ್‌ ಮಾಡಿದ್ದಾರೆ. ಬಿಜೆಪಿ ಲೋಕಾಯಕ್ತಕ್ಕೆ ಮರಳಿ ಅಧಿಕಾರ ನೀಡಿದೆ. ವಿಪಕ್ಷಗಳ ಹೇಳಿಕೆಗೆ ವಿಚಲಿತರಾಗಬೇಕಿಲ್ಲ. 2047ರಲ್ಲಿ ಭಾರತ ಜಗತ್ತಿನ ನಂ.1 ರಾಷ್ಟ್ರವಾಗಿ ಮೂಡಿಬರಲಿದೆ. ಹೇಳಿದ್ದನ್ನು ಮಾಡುವ ಬದ್ಧತೆಯಿದೆ. ದೇಶದಲ್ಲಿ ಶೇ. 13 ಜನರಿಗಷ್ಟೇ ನಳ್ಳಿ ನೀರು ಇತ್ತು. ಈಗ ಶೇ. 58 ಆಗಿದೆ. ರೈಲ್ವೇ ವಿದ್ಯುದೀಕರಣ ಆಗುತ್ತಿದೆ. 25 ಲಕ್ಷ ಕೋ.ರೂ. ಫ‌ಲಾನುಭವಿಗಳ ಖಾತೆಗೆ ನೇರ ಜಮೆಯಾಗುತ್ತಿದೆ. ಇದರಿಂದ ಮಧ್ಯವರ್ತಿಗಳಿಂದಾಗಿ ಹಣ ಪೋಲಾಗುವುದು ತಪ್ಪಿದೆ ಎಂದರು.

ವಿಜಯ ಯಾತ್ರೆ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಬೈಂದೂರಿನ ಸಂಕಲ್ಪಯಾತ್ರೆ ವಿಜಯ ಯಾತ್ರೆಯಾಗಿ ಪರಿವರ್ತನೆಯಾಗಿದೆ. 2014ರ ಅನಂತರ ಪರಿವರ್ತನೆ ಯುಗ ಆರಂಭವಾಗಿದೆ. ಪಿಎಫ್ಐ ನಿಷೇಧ ಮಾಡಿದ ದಿಟ್ಟ ಸರಕಾರ ಬಿಜೆಪಿಯದ್ದು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಘವೇಂದ್ರ-ಸುಕುಮಾರ ಶೆಟ್ಟರೆಂಬ ಜೋಡೆತ್ತುಗಳು ಬೈಂದೂರನ್ನು ರಾಜ್ಯದಲ್ಲಿ ಅತಿಹೆಚ್ಚು ಅನುದಾನ ತಂದ ಕ್ಷೇತ್ರವಾಗಿಸಿದ್ದಾರೆ. ಈ ಬಾರಿಯ ಚುನಾವಣೆ ಭಯೋತ್ಪಾದನೆ-ರಾಷ್ಟ್ರೀಯತೆ ಮಧ್ಯೆ ನಡೆಯಲಿದೆ ಎಂದರು.

Advertisement

ನಿರ್ಜೀವ ಕಾಂಗ್ರೆಸ್‌
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, ಬೈಂದೂರು ಕ್ಷೇತ್ರವನ್ನು ಕಾಂಗ್ರೆಸ್‌ನವರು ಗೆಲ್ಲುವ ಕ್ಷೇತ್ರದ ಪಟ್ಟಿಯಿಂದ ಹೊರಗಿಟ್ಟುಕೊಳ್ಳಬೇಕು. ಇದು ಬಿಜೆಪಿ ಗೆಲ್ಲುವ ಕ್ಷೇತ್ರ. ಕಾಂಗ್ರೆಸ್‌ನ ಜೀವ ಉಳಿದಿಲ್ಲ. ಊರಲ್ಲಿರಲು ಆ ಪಕ್ಷಕ್ಕೆ ಅರ್ಹತೆ ಇಲ್ಲ. ಕಾಂಗ್ರೆಸ್ಸನ್ನು ಈ ಬಾರಿಯ ಚುನಾವಣೆಯಲ್ಲಿ ರಾಜಕೀಯ ಶ್ಮಶಾನಕ್ಕೆ ಕಳುಹಿಸಿ ಎಂದರು.

ಬೈಂದೂರು ಮಾದರಿ
ಸಂಸದ ಬಿ.ವೈ. ರಾಘವೇಂದ್ರ, ಬೈಂದೂರು ರಾಜ್ಯದಲ್ಲಿ ಮಾದರಿ ಕ್ಷೇತ್ರವಾ ಗಿದೆ. ಮನೆಗಳಿಗೆ 600 ಕೋ.ರೂ. ವೆಚ್ಚದಲ್ಲಿ ಜಲಜೀವನ ಮಿಷನ್‌ ಮೂಲಕ ನೀರು ಕೊಡುವ ಕೆಲಸ ಆರಂಭವಾಗಿದೆ. ನೀರಾ ವರಿ ಯೋಜನೆಗಳ ಮೂಲಕ ಹೊಲಗದ್ದೆಗೆ ನೀರು ಹರಿಸಲಾಗುತ್ತದೆ ಎಂದರು.

ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ, 75 ವರ್ಷಗಳಲ್ಲಿ ಕಂಡರಿಯದ ಸಮಗ್ರ ಅಭಿವೃದ್ಧಿ ಮಾಡಲಾಗಿದೆ. ಕುಡಿಯುವ ನೀರು, ರಸ್ತೆ, ನೀರಾವರಿ ಮೊದಲಾದ ಜನಹಿತ ಕಾರ್ಯ ನಡೆಸಲಾಗಿದೆ ಎಂದು ಹೇಳಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಉದಯಕುಮಾರ್‌ ಶೆಟ್ಟಿ ಕಿದಿಯೂರು, ಶಾಸಕ ಲಾಲಾಜಿ ಆರ್‌. ಮೆಂಡನ್‌, ವಿಧಾನ ಪರಿಷತ್‌ ಸದಸ್ಯ ನವೀನ್‌, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್‌, ಬಿಜೆಪಿ ರಾಷ್ಟ್ರೀಯ ಹಿಂದುಳಿದ ವರ್ಗ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ ಸುವರ್ಣ, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಉಪಾಧ್ಯಕ್ಷ, ಬೈಂದೂರು ಪ್ರಭಾರಿ ಕಿಶೋರ್‌ ಕುಮಾರ್‌ ಕುಂದಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್‌ ಕುಮಾರ್‌ ಶೆಟ್ಟಿ ಉಪ್ಪು³ಂದ, ಜಿಲ್ಲಾ ಕಾರ್ಯದರ್ಶಿ ಆನಂದ ಖಾರ್ವಿ, ರವಿ ಶೆಟ್ಟಿಗಾರ್‌, ಉಮೇಶ್‌ ಶೆಟ್ಟಿ ಕಲ್ಗದ್ದೆ ಉಪಸ್ಥಿತರಿದ್ದರು.
ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿ, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಪೂಜಾರಿ ವಂದಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ಬೆಸ್ಕೂರ್‌ ನಿರ್ವಹಿಸಿದರು.

ಆಚಾರ್ಯ, ಕೊಡ್ಗಿ ನೆನಪು
ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷನಾಗಿದ್ದಾಗ ಡಾ| ವಿ.ಎಸ್‌. ಆಚಾರ್ಯರಂತಹ ಶುದ್ಧಚಾರಿತ್ರ್ಯದ, ಮಾದರಿ ರಾಜಕಾರಣಿಯನ್ನು ಭೇಟಿ ಮಾಡಿದ್ದೆ. ಎ.ಜಿ. ಕೊಡ್ಗಿಯಂತಹ ಧೀಮಂತ ನಾಯಕರ ಮಾರ್ಗದರ್ಶನ ಈ ಕ್ಷೇತ್ರಕ್ಕಿದೆ ಎಂದು ನಡ್ಡಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next