ಗಂಗೊಳ್ಳಿ : ತ್ರಾಸಿ ಗ್ರಾಮದ ಮೋವಾಡಿಯ ಗಂಡ್‌ಬೇರು ಸೌಪರ್ಣಿಕ ನದಿಯಲ್ಲಿ ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಸೋಮವಾರ ರಾತ್ರಿ ಗಂಗೊಳ್ಳಿ ಪೊಲೀಸರು ದಾಳಿ ನಡೆಸಿದ್ದಾರೆ.
ಆಪಾದಿತರಾದ ತ್ರಾಸಿ ಗ್ರಾಮದ ಆನಗೋಡಿನ ಆಲ್ಟನ್ (42), ಉತ್ತರ ಪ್ರದೇಶದ ಮೈನೇಜರ್ (30), ದಿನೇಶ (22), ಜಿತೇಂದ್ರ ಕುಮಾರ್ (25), ಗುದ್ದು ಕುಮಾರ (20) ಅವರ ಮೇಲೆ ಪ್ರಕರಣ ದಾಖಲಾಗಿದೆ.
ಮೈನೇಜರ್, ದಿನೇಶ, ಜಿತೇಂದ್ರ ಕುಮಾರ್ ಹಾಗೂ ಗುದ್ದು ಕುಮಾರ ಅವರು ಆಲ್ಟನ್ ಅವರ ಜತೆ ಸೌಪರ್ಣಿಕ ಹೊಳೆಯಿಂದ ಅಕ್ರಮವಾಗಿ ಮರಳು ತೆಗೆಯುವ ಕೆಲಸ ಮಾಡಿಕೊಂಡಿದ್ದು, ತ್ರಾಸಿ ಗ್ರಾಮದ ಮೋವಾಡಿಯ ಗಂಡ್‌ಬೇರು ಎಂಬಲ್ಲಿ ಸೌಪರ್ಣಿಕ ಹೊಳೆಯಲ್ಲಿ ಮರಳು ತೆಗೆಯುತ್ತಿದ್ದಾಗ ಎಸ್‌ಐ ಹರೀಶ್ ಅವರು ತಂಡದೊಂದಿಗೆ ದಾಳಿ ನಡೆಸಿದ್ದಾರೆ.
ಅಂದಾಜು ತಲಾ 2 ಲಕ್ಷ ರೂ. ಮೌಲ್ಯದ ಫ್ಲೆವುಡ್‌ನ ಫೈಬರ್ ಕೋಟ್ ದೋಣಿ 2, ಇತರ ಸೊತ್ತುಗಳು ಹಾಗೂ ಒಂದು ಯುನಿಟ್ ಮರಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.