ದಾವಣಗೆರೆ: ನಗರವಾಸಿಗಳಂತೆ ಹಳ್ಳಿ ನಿವಾಸಿಗರೂ ಸಹ ಮನೆ ಮನೆಗೆನಲ್ಲಿ ನೀರಿನ ಸಂಪರ್ಕ ಹೊಂದಿ ಶುದ್ಧ ಕುಡಿಯುವ ನೀರು ಪಡೆಯುವ ಮಹತ್ವಾಂಕಾಂಕ್ಷೆಯೊಂದಿಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಜಲ ಜೀವನ್ ಮಿಷನ್ ಯೋಜನೆ (ಹರ್ ಘರ್‌ಜಲ್), ” ಮನೆ ಮನೆಗೆ ಗಂಗೆ’ ಹೆಸರಲ್ಲಿ ಜಿಲ್ಲೆಯಲ್ಲಿಯೂ ಅನುಷ್ಠಾನಗೊಳ್ಳುತ್ತಿದೆ.
ಇದಕ್ಕಾಗಿ ಭರದ ಸಿದ್ಧತೆ ನಡೆದಿದೆ. ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿರುವ ಗ್ರಾಮಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈವರ್ಷ ಜಿಲ್ಲೆಯ 370 ಗ್ರಾಮಗಳನ್ನು ಆಯ್ದುಕೊಂಡು ಕೆಲಸ ಶುರು ಮಾಡಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 26 ಬಹುಗ್ರಾಮ ಯೋಜನೆ ಕಾರ್ಯ ನಿರ್ವಹಿಸುತ್ತಿದ್ದು ಇದರ ವ್ಯಾಪ್ತಿಯ ಹಳ್ಳಿಗಳಲ್ಲಿ ಪ್ರಥಮ ಆದ್ಯತೆ ಮೇರೆಗೆ ಮನೆ ಮನೆಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇರುವ ಹಳ್ಳಿಗಳಲ್ಲಿ ಮನೆ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸುವ ಕಾರ್ಯ ಮುಗಿದ ಬಳಿಕ ಉಳಿದ ಗ್ರಾಮಗಳಲ್ಲಿ ಜಲಮೂಲದ ಲಭ್ಯತೆ ಪರಿಗಣಿಸಿ ಹಂತ ಹಂತವಾಗಿ ಯೋಜನೆ ಅನುಷ್ಠಾನಕ್ಕೆ ಜಿಲ್ಲಾ ಪಂಚಾಯಿತಿ ನಿರ್ಧರಿಸಿದೆ.
ಜಿಲ್ಲೆಯ ಜಗಳೂರು, ಆನಗೋಡು ಹೋಬಳಿ ಸೇರಿದಂತೆ ಇನ್ನಿತರ ಜಲಮೂಲ ಸಮೃದ್ಧ ಇಲ್ಲದ ಕಡೆಗಳಲ್ಲಿ ಕೆರೆ ತುಂಬಿಸುವ ಯೋಜನೆ ಅನುಷ್ಠಾನ, ಕೊಳವೆಬಾವಿ ತೆರೆಯುವಿಕೆ ಸೇರಿದಂತೆ ಇತರ ಜಲಮೂಲಗಳನ್ನು ಸೃಷ್ಟಿಸಲಾಗುತ್ತದೆ. 2024ರೊಳಗೆ ಜಿಲ್ಲೆಯ ಎಲ್ಲ ಮನೆಗಳಿಗೆ ನಲ್ಲಿ ಸಂಪರ್ಕದ ಮೂಲಕ ನೀರು ನೀಡಲು ಜಿಲ್ಲಾ ಪಂಚಾಯಿತಿ ಗುರಿ ಹಾಕಿಕೊಂಡಿದೆ. ಗ್ರಾಮಸಭೆಗಳಲ್ಲಿ ಮಾಹಿತಿ: ಹಳ್ಳಿಯ ಪ್ರತಿ ಮನೆಗೂ ನಲ್ಲಿ ಸಂಪರ್ಕದ ಮೂಲಕ ನೀರು ಪೂರೈಕೆ ಮಾಡುವ ಜಲ ಜೀವನ್ ಯೋಜನೆಯಲ್ಲಿ ಶೇ. 90 ರಷ್ಟು ಸರಕಾರದ ಅನುದಾನ ಹಾಗೂ ಶೇ. 10ರಷ್ಟು ಸ್ಥಳೀಯರ ಮನೆಗಳನ್ನು ಲೆಕ್ಕ ಹಾಕಿ ಪೈಪ್‌ಲೈನ್, ನಲ್ಲಿ ಜೋಡಣೆಯ ಕ್ರಿಯಾಯೋಜನೆ ತಯಾರಿಸಲಾಗುತ್ತದೆ. ಒಟ್ಟು ವೆಚ್ಚದಲ್ಲಿ ಶೇ. 10ರಷ್ಟನ್ನು ಗ್ರಾಮಸ್ಥರಿಂದ ಪಡೆದು ಗ್ರಾಮ ಪಂಚಾಯಿತಿ ನಿರ್ವಹಣೆಯಡಿ ನಲ್ಲಿ ಸಂಪರ್ಕ ಕೊಡಲಾಗುತ್ತದೆ.
ಹಳ್ಳಿಗರು ತಮ್ಮ ನೀರಿನ ಬಳಕೆ ಆಧರಿಸಿ ಮೀಟರ್ ಲೆಕ್ಕದಂತೆ ಪ್ರತಿ ತಿಂಗಳು ನೀರಿನ ಕರ ಪಾವತಿಸಬೇಕಾಗುತ್ತದೆ. ಇನ್ನು ಒಂದಕ್ಕಿಂತ ಹೆಚ್ಚು ನಲ್ಲಿ ಸಂಪರ್ಕ ಬೇಕಾದವರು ಪ್ರತ್ಯೇಕವಾಗಿ ಹಣ ಕಟ್ಟಿ ಒಂದು ಮನೆಯವರು ಗರಿಷ್ಠ ಮೂರು ನಲ್ಲಿ ಸಂಪರ್ಕ ಪಡೆಯಬಹುದಾಗಿದೆ. ಯೋಜನೆಯ ಬಗ್ಗೆ ಅಧಿಕಾರಿಗಳಿಂದ ಗ್ರಾಮಸಭೆಗಳಲ್ಲಿ ಮಾಹಿತಿ ನೀಡುವ ಕಾರ್ಯ ನಡೆದಿದೆ.
ಗ್ರಾಮ ಸಮೀಕ್ಷೆ: ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಏಕಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಬಹುಗ್ರಾಮ ನೀರಿನ ಯೋಜನೆ ಜಾರಿಯಲ್ಲಿರುವ ಜಿಲ್ಲೆಯ ಚನ್ನಗಿರಿ, ದಾವಣಗೆರೆ, ಹರಿಹರ ಹಾಗೂ ಹೊನ್ನಾಳಿ ಸೇರಿದಂತೆ ತಾಲೂಕುಗಳ ಒಟ್ಟು 211ಗ್ರಾಮಗಳಲ್ಲಿ ಪ್ರಾಥಮಿಕ ಸಮೀಕ್ಷೆ ಮಾಡಲಾಗಿದೆ. ಈ ಸಮಿಕ್ಷೆ ಪ್ರಕಾರ ಈ ನಾಲ್ಕು ತಾಲೂಕುಗಳಲ್ಲಿ 70,991 ಮನೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 35,132 ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ಕೊಡಬಹುದಾದ ವ್ಯವಸ್ಥೆ ಹೊಂದಿವೆ. ಇನ್ನು 20,947 ಕುಟುಂಬಗಳಿಗೆ ಹೊಸದಾಗಿ ನಲ್ಲಿ ಸಂಪರ್ಕದ ವ್ಯವಸ್ಥೆ ಮಾಡಬೇಕಾಗಿದೆ. ಇದಕ್ಕಾಗಿ 8298 ಲಕ್ಷ ರೂ.ಗಳ ಕ್ರಿಯಾಯೋಜನೆ ತಯಾರಿಸಲಾಗಿದೆ.
ಒಟ್ಟಾರೆ “ಮನೆ ಮನೆ ಗಂಗೆ’ ಯೋಜನೆ ಮೂಲಕ 2024ರೊಳಗೆ ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿರುವ ಮನೆಗೂ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಗುರಿ ಹಾಕಿಕೊಳ್ಳಲಾಗಿದ್ದು, ಯೋಜನೆ ಅನುಷ್ಠಾನ ಈಗಷ್ಟೇ ಶುರುವಾಗಿದೆ.
ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 370 ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನ ಗುರಿ ಹಾಕಿಕೊಳ್ಳಲಾಗಿದೆ. ಮನೆ ನಲ್ಲಿ ಸಂಪರ್ಕಕ್ಕಾಗಿ ಸಮೀಕ್ಷೆ ಮಾಡಿ ಸಮಗ್ರ ಕ್ರಿಯಾಯೋಜನೆ ತಯಾರಿಸಲು ಈಗಾಗಲೇ ಹೈದರಾಬಾದ್‌ನ ಏಜೆನ್ಸಿಯೊಂದಕ್ಕೆ ಟೆಂಡರ್‌ನೀಡಲಾಗಿದೆ. ನದಿ, ಕೆರೆ, ಹೊಳೆ ಸೇರಿದಂತೆ ಜಲಮೂಲ ಇರುವ ಗ್ರಾಮಗಳನ್ನು ಈ ಯೋಜನೆಗೆ ಮೊದಲು ಆಯ್ಕೆ ಮಾಡಿಕೊಳ್ಳಲಾಗುವುದು. ಈ ಯೋಜನೆ ಅನುಷ್ಠಾನದ ಬಗ್ಗೆ ಗ್ರಾಮಸಭೆ ಮೂಲಕ ಹಳ್ಳಿಗರಿಗೆ ಮಾಹಿತಿಯೂ ನೀಡಲಾಗುತ್ತಿದೆ.
-ಪದ್ಮಾ ಬಸವಂತಪ್ಪ, ಜಿಪಂ ಸಿಇಒ
ಎಚ್.ಕೆ. ನಟರಾಜ