ಗಂಗಾವತಿ : ರಾಜ್ಯ ಸರ್ಕಾರ ವಯೋ ವೃದ್ಧರು ಮತ್ತು ಅಂಗವಿಕಲರು ಹಾಗೂ ವಿಧವೆಯರಿಗೆ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಮಾಸಿಕ ವೇತನದ ಯೋಜನೆ ಅನುಷ್ಠಾನದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ಕಂಡುಬರುತ್ತಿದೆ. ಅರ್ಜಿ ಸಲ್ಲಿಸಲು ಆರೋಗ್ಯಾಧಿಕಾರಿಗಳು ವಯಸ್ಸು ಮತ್ತು ಆರೋಗ್ಯದ ಬಗ್ಗೆ ಪ್ರಮಾಣಪತ್ರ ನೀಡುವುದು ಕಡ್ಡಾಯವಾಗಿದೆ.
ವಯಸ್ಸಿನ ಪ್ರಮಾಣಪತ್ರ ನೀಡುವಲ್ಲಿ ಅಧಿಕಾರಿಗಳು ಅರ್ಜಿ ಫಾರಂನ್ನು ಭರ್ತಿ ಮಾಡದೆ ಬರೀ ಸಹಿ ಮಾಡುತ್ತಿದ್ದು ಅರ್ಜಿದಾರರು ಮಾಹಿತಿಯನ್ನು ಭರ್ತಿ ಮಾಡುತ್ತಿದ್ದು ವಯಸ್ಸಿನ ದಾಖಲೆ ಹೆಚ್ಚು ಕಡಿಮೆಯಾಗುತ್ತಿದ್ದು ಅರ್ಜಿಗಳು ತಿರಸ್ಕೃತವಾಗುತ್ತಿವೆ.
ಈ ಕುರಿತು ಕಂದಾಯ ಇಲಾಖೆ ಅಧಿಕಾರಿಗಳು ಹಲವಾರು ಬಾರಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಪತ್ರದ ಮೂಲಕ ವಯಸ್ಸಿನ ಪ್ರಮಾಣ ಪತ್ರವನ್ನು ಆರೋಗ್ಯಾಧಿಕಾರಿಗಳೇ ಭರ್ತಿ ಮಾಡುವಂತೆ ಸೂಚನೆ ನೀಡಿದ್ದರು ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದರಿಂದ ಯೋಜನೆಯ ಫಲಾನುಭವಿಗಳು ಕಂದಾಯ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಲೆದಾಡಿ ಸುಸ್ತಾಗುವಂತಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಫಲಾನುಭವಿಯ ವಯಸ್ಸನ್ನು ನಮೂದು ಮಾಡುವಾಗ ಪತಿ, ತಂದೆ, ಮತ್ತು ಮಕ್ಕಳ ವಯಸ್ಸು ಹೆಚ್ಚು ಕಡಿಮೆಯಾಗಿ ನಮೂದಾಗಿರುತ್ತದೆ. ಇದರಿಂದ ಅರ್ಜಿಯನ್ನು ತಿರಸ್ಕಾರ ಮಾಡುವ ಪರಿಸ್ಥಿತಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಉಂಟಾಗುತ್ತಿದ್ದು ಇದರಿಂದ ಫಲಾನುಭವಿಗಳ ಅರ್ಜಿಗಳು ತಿರಸ್ಕೃತವಾಗುತ್ತಿವೆ. ಜೊತೆಗೆ ಅನರ್ಹರು ಸಹ ವಿಧವಾ ವೇತನ, ಸಂಧ್ಯಾ ಸುರಕ್ಷಾ ಮತ್ತು ವಿಕಲ ಚೇತನ ಯೋಜನೆಯ ಮಾಸಿಕ ವೇತನ ಪಡೆಯುತ್ತಿದ್ದು ಸರಕಾರಕ್ಕೆ ಬಹಳಷ್ಟು ಹೊರೆಯಾಗುತ್ತಿದೆ. ಆರೋಗ್ಯ ಇಲಾಖೆಯವರು ಸರಿಯಾದ ವಯಸ್ಸಿನ ನಮೂದು ಮಾಡಿ ಫಲಾನುಭವಿಗಳಿಗೆ ಕೊಟ್ಟರೆ ಕಂದಾಯ ಇಲಾಖೆಯವರು ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಮಾಸಿಕ ವೇತನ ಮಂಜೂರು ಮಾಡಲು ಅನುಕೂಲವಾಗುತ್ತದೆ .
ಇದನ್ನೂ ಓದಿ : ವೀರಪ್ಪನ್ ಕಾರ್ಯಾಚರಣೆ ಕಥೆ ಹೇಳುವ ಶ್ರೀನಿವಾಸ್ ಜೀಪ್
ಪತ್ರ ಬರೆಯಲಾಗಿದೆ : ಸರಕಾರ ಆರ್ಥಿಕವಾಗಿ ಮತ್ತು ಬಡತನದಲ್ಲಿರುವವರಿಗೆ ಸಾಮಾಜಿಕ ಭದ್ರತೆ ಯೋಜನೆಯನ್ನು ಅನುಷ್ಠಾನ ಮಾಡುತ್ತಿದ್ದು ಆರೋಗ್ಯ ಇಲಾಖೆಯವರು ನೀಡಿದ ವಯಸ್ಸಿನ ದೃಢೀಕರಣ ಪತ್ರದ ಮತ್ತು ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರು ಗ್ರಾಮ ಲೆಕ್ಕಾಧಿಕಾರಿಗಳು ಶಿಫಾರಸ್ಸಿನ ಮಾಸಿಕ ವೇತನ ಮಂಜೂರು ಮಾಡುತ್ತಿದೆ. ಆರೋಗ್ಯ ಇಲಾಖೆಯವರು ಫಲಾನುಭವಿಗಳ ಸರಿಯಾದ ವಯಸ್ಸಿನ ದೃಢೀಕರಣ ಮಾಡದೆ ಪ್ರಮಾಣ ಪತ್ರಕ್ಕೆ ಸಹಿ ಮಾತ್ರ ಮಾಡುತ್ತಿದ್ದು ಇದರಿಂದ ಕುಟುಂಬದ ಇತರ ವರ್ಗದ ಸದಸ್ಯರು ಹಾಗೂ ಯೋಜನೆಗೆ ಅರ್ಜಿ ಸಲ್ಲಿಸಿದವರ ವಯಸ್ಸಿನಲ್ಲಿ ಬಹಳಷ್ಟು ವ್ಯತ್ಯಾಸಗಳು ಕಂಡು ಬರುತ್ತವೆ ಆದ್ದರಿಂದ ಅರ್ಜಿಗಳು ತಿರಸ್ಕೃತವಾಗುತ್ತಿವೆ ಈಗಾಗಲೇ ಹಲವು ಬಾರಿ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳಿಗೆ ಪತ್ರ ಬರೆದು ದಾಖಲೆಯನ್ನು ನೋಡಿ ವಯಸ್ಸಿನ ನಮೂದು ಮಾಡುವಂತೆ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ ಆದ್ದರಿಂದ ಅರ್ಜಿದಾರರ ಅರ್ಜಿಗಳು ಬಹುತೇಕ ತಿರಸ್ಕೃತವಾಗುತ್ತಿವೆ. ಈಗ ಪುನಃ ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಗೆ ಪತ್ರ ಬರೆದು ಪ್ರಮಾಣ ಪತ್ರದಲ್ಲಿ ಖುದ್ದು ವೈದ್ಯಾಧಿಕಾರಿಗಳೇ ಬರೆದು ಸಹಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಗ್ರೇಡ್-2 ತಹಸಿಲ್ದಾರ್ ವಿ.ಎಚ್. ಹೊರಪೇಟೆ ಉದಯವಾಣಿಗೆ ತಿಳಿಸಿದ್ದಾರೆ.