Advertisement

ಹಳ್ಳ ಸೇರುತ್ತಿದೆ ಗಂಗಾವತಿ ಕಸ

10:09 AM Feb 07, 2019 | Team Udayavani |

ಗಂಗಾವತಿ: ನಗರದ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಆದರೆ ಜನಸಂಖ್ಯೆಗೆ ಪೂರಕವಾಗಿ ನಗರಸಭೆ ಆಡಳಿತ ಮಂಡಳಿ ಮೂಲ ಸೌಕರ್ಯ ಒದಗಿಸುವಲ್ಲಿ ಹಾಗೂ ನೈರ್ಮಲ್ಯ ಕಾಪಾಡುವಲ್ಲಿ ವಿಫಲವಾಗಿದೆ. ನಗರದಲ್ಲಿ ಪ್ರತಿನಿತ್ಯ ಉತ್ಪನ್ನವಾಗುವ ಘನತ್ಯಾಜ್ಯವನ್ನು ನಗರದ ಮಧ್ಯೆದಲ್ಲಿರುವ ದುರುಗಮ್ಮನ ಹಳ್ಳಕ್ಕೆ ಸುರಿಯಲಾಗುತ್ತಿದೆ. ಹಳ್ಳದಲ್ಲಿ ಸಂಗ್ರಹವಾಗುವ ಕಸವನ್ನು ಸುಡಲಾಗುತ್ತಿದ್ದು, ಇದರಿಂದ ಕೆಟ್ಟ ವಾಸನೆ ಮತ್ತು ದಿನವಿಡಿ ಹೊಗೆ ಬರುವುದರಿಂದ ಗುಂಡಮ್ಮನಕ್ಯಾಂಪ್‌ ಅಂಬೇಡ್ಕರ್‌ ನಗರ, ಇಂದಿರಾ ನಗರ, ಜುಲೈ ನಗರ ಹಾಗೂ ಅಮರ ಭಗತ್‌ಸಿಂಗ್‌ ನಗರ ಸೇರಿ ಸುತ್ತಮುತ್ತ ವಾಸ ಮಾಡುವವರಿಗೆ ಅಸ್ತಮಾ ಸೇರಿ ಇತರೆ ಆರೋಗ್ಯ ಸಮಸ್ಯೆ ಕಾಡುತ್ತಿವೆ.

Advertisement

ದುರುಗಮ್ಮನ ಹಳ್ಳಕ್ಕೆ ಕಸ ಸುರಿಯುತ್ತಿರುವ ಬಗ್ಗೆ ಈಗಾಗಲೇ ಹಲವು ಭಾರಿ ಪರಿಸರವಾದಿಗಳು ಆಕ್ಷೇಪವ್ಯಕ್ತಪಡಿಸಿ, ನಗರಸಭೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಸದಿಂದ ಇಡೀ ದುರುಗಮ್ಮನಹಳ್ಳ ಕೆಟ್ಟವಾಸನೆಯಿಂದ ಕೂಡಿದೆ. ನಗರದಲ್ಲಿ ಮೃತಪಡುವ ಹಂದಿ, ನಾಯಿ ಹಾಗೂ ಸತ್ತ ಪ್ರಾಣಿಗಳ ಕಳೆಬರವನ್ನು ನಗರಸಭೆಯವರು ಹಳ್ಳಕ್ಕೆ ತಂದು ಎಸೆಯುತ್ತಿದ್ದಾರೆ. ಕೆಲ ಖಾಸಗಿ ಆಸ್ಪತೆಗಳ ತ್ಯಾಜ್ಯ ನೀರು, ಮಾರುಕಟ್ಟೆಯಲ್ಲಿ ಉಳಿಯುವ ತರಕಾರಿ, ಹೋಟೆಲ್‌, ಖಾನಾವಳಿಗಳ ತ್ಯಾಜ್ಯವನ್ನು ಹಳ್ಳಕ್ಕೆ ಹಾಕಲಾಗುತ್ತಿದೆ. ಈ ಬಗ್ಗೆ ನಗರಸಭೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ.

ಯಾರ್ಡ್‌ ನಿರುಪಯುಕ್ತ: ಘನತ್ಯಾಜ್ಯ ವಸ್ತುಗಳನ್ನು ಪುನರ್‌ ಸಂಸ್ಕರಣೆ ಮಾಡಿ, ಪರಸರ ಸ್ನೇಹಿಯಾಗಿಸಲು 15 ವರ್ಷಗಳ ಹಿಂದೆಯೇ ತಾಲೂಕಿನ ಮಲಕನಮರಡಿ ಗ್ರಾಮದ ಹತ್ತಿರ ನೂರು ಎಕರೆ ಪ್ರದೇಶದಲ್ಲಿ ಕಸ ವಿಲೇವಾರಿ ಯಾರ್ಡ್‌ ನಿರ್ಮಿಸಲಾಗಿದೆ. ಗಂಗಾವತಿ ನಗರದ ಪೂರ್ಣ ಕಸ ಹಾಗೂ ಘನತ್ಯಾಜ್ಯವನ್ನು ಇಲ್ಲಿಗೆ ತಂದು ಸಂಸ್ಕರಣೆ ಮಾಡಬೇಕೆಂಬ ನಿಯಮವಿದ್ದರೂ ಕೆಲ ವರ್ಷಗಳ ಕಾಲ ಮಾತ್ರ ಮಲಕನಮರಡಿ ಯಾರ್ಡ್‌ನಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಯಿತು. ಆದರೆ ನಂತರದ ದಿನಗಳಲ್ಲಿ ತ್ಯಾಜ್ಯವನ್ನು ದುರುಗಮ್ಮನ ಹಳ್ಳಕ್ಕೆ ಸುರಿಯುವ ಮೂಲಕ ನಗರಸಭೆ ನೈರ್ಮಲ್ಯ ಕಾಪಾಡದೇ ನಿರ್ಲಕ್ಷ್ಯವಹಿಸಿದೆ. ಪ್ರತಿದಿನ ಸ್ವಚ್ಛತೆಯ ಕುರಿತು ಮಾತನಾಡುವ ನೈರ್ಮಲ್ಯ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂಬ ಆರೋಪವಿದೆ. ಪೌರಕಾರ್ಮಿಕರು ಬೆಳಗಿನ ಜಾವ ಕಸ ಗೂಡಿಸಿ ಎಲ್ಲೆಂದರಲ್ಲಿ ಕಸಕ್ಕೆ ಬೆಂಕಿ ಹಚ್ಚಿ ಸುಡುತ್ತಾರೆ. ಇದರಿಂದ ಬೆಳಗಿನ ಜಾವದಲ್ಲಿ ಇಡೀ ನಗರ ಹೊಗೆಯಿಂದ ಕೂಡಿರುತ್ತದೆ. ಇದನ್ನು ತಡೆಯುವಲ್ಲಿ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ನಗರದ ಜನಸಂಖ್ಯೆ 1 ಲಕ್ಷಕ್ಕೂ ಅಧಿಕವಿದ್ದು, ನಗರದ 35 ವಾರ್ಡ್‌ಗಳಲ್ಲಿ ತ್ಯಾಜ್ಯ ಸಂಗ್ರಹಕ್ಕೆ ವಾಹನ ನಿಯೋಜಿಸಲಾಗಿದೆ. ಪ್ರತಿ ದಿನ ನಗರದಲ್ಲಿ 40 ಟನ್‌ಗೂ ಅಧಿಕ ತ್ಯಾಜ್ಯ ಸಂಗ್ರಹವಾಗುತ್ತಿದೆ.

ಸೋಮಾರಿತನ
ತಾಲೂಕಿನ ಮಲಕನಮರಡಿ ಗ್ರಾಮದ ಹತ್ತಿರ ತ್ಯಾಜ್ಯ ವಿಲೇವಾರಿ ಘಟಕ ನಗರದಿಂದ ಸುಮಾರು 10 ಕಿ.ಮೀ ದೂರದಲ್ಲಿದೆ. ಪೌರಕಾರ್ಮಿಕರು ತ್ಯಾಜ್ಯ ವಿಲೇವಾರಿಗಾಗಿ ಅಷ್ಟು ದೂರ ಹೋಗಿ ಬರಲು ಆಗದೇ, ಕೆಲಸದಲ್ಲಿ ಸೋಮಾರಿತ ತೋರಿ ದುರುಗಮ್ಮನ ಹಳ್ಳದಲ್ಲೇ ಕಸ ಸುರಿಯುತ್ತಿದ್ದಾರೆ. ಹಳ್ಳದಲ್ಲಿ ಕಸ ಹೆಚ್ಚಾಗಿದ್ದು, ನಿತ್ಯ ಸುಡುತ್ತಿದ್ದಾರೆ.

Advertisement

ನಗರದಲ್ಲಿ ಪ್ರತಿದಿನ ಉತ್ಪನ್ನವಾಗುವ ತ್ಯಾಜ್ಯವನ್ನು ನಿಗದಿ ಮಾಡಿದ ಸ್ಥಳದಲ್ಲಿ ವಿಲೇವಾರಿ ಮಾಡಬೇಕು. ಇದನ್ನು ಸಂಸ್ಕರಣೆಗೊಳಿಸಿ ಪರಿಸರಕ್ಕೆ ಹಾನಿಯಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕೆಂಬ ನಿಯಮವಿದೆ. ದುರುಗಮ್ಮನಹಳ್ಳಕ್ಕೆ ಕಸ ಇತರೆ ತ್ಯಾಜ್ಯ ಹಾಕುವುದು ನಿಷೇಧಿಸಲಾಗಿದೆ. ಖುದ್ದು ಸ್ಥಳ ಪರಿಶೀಲಿಸಿ, ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತದೆ. ಖಾಸಗಿಯವರು ಹಳ್ಳಕ್ಕೆ ತ್ಯಾಜ್ಯ ಹಾಕುವಂತಿಲ್ಲ. ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಮಲಕನಮರಡಿ ಗ್ರಾಮದಲ್ಲಿರುವ ಯಾರ್ಡ್‌ನಲ್ಲಿ ವಿಲೇವಾರಿ ಮಾಡಬೇಕು.
•ಡಾ| ದೇವಾನಂದ ದೊಡ್ಮನಿ, ಪೌರಾಯುಕ್ತರು

ದುರುಗಮ್ಮನಹಳ್ಳಕ್ಕೆ ನಗರಸಭೆಯವರು ಕಸ ತಂದು ಹಾಕುತ್ತಾರೆ. ಅಧಿಕಾರಿಗಳು ಬರುವ ಸೂಚನೆ ಇದ್ದಾಗ ಮಾತ್ರ ಮಲಕನಮರಡಿ ಯಾರ್ಡ್‌ಗೆ ಸಾಗಿಸಿ, ನಂತರದ ದಿನಗಳಲ್ಲಿ ಕಸವನ್ನು ಹಳ್ಳಕ್ಕೆ ಸುರಿದು ಹೋಗುತ್ತಾರೆ. ಸತ್ತ ನಾಯಿ, ಹಂದಿ ಕೋಳಿಗಳನ್ನು ಹಳ್ಳಕ್ಕೆ ಹಾಕುವುದರಿಂದ ಸುತ್ತಲಿನ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದೆ. ಹಳ್ಳಕ್ಕೆ ಕಸ ಹಾಕುವುದನ್ನು ತಡೆಯಬೇಕು.
•ರಾಜು,ಸ್ಥಳೀಯರು

ನಗರದ ಮಧ್ಯೆ ಹರಿಯುವ ದುರುಗಮ್ಮನ ಹಳ್ಳದ ನೀರನ್ನು ದಶಕದ ಹಿಂದೆ ಜನರು ಸ್ನಾನ ಹಾಗೂ ಇತರೆ ಕೆಲಸಗಳಿಗೆ ಬಳಸುತ್ತಿದ್ದರು. ನಗರಸಭೆ ಹಾಗೂ ಜನತೆ ಕಸ ಹಾಕುವುದರಿಂದ ಹಳ್ಳ ಸಂಪೂರ್ಣವಾಗಿ ಮಲೀನವಾಗಿದೆ. ಇದರಿಂದ ಹಳ್ಳದ ಪಕ್ಕದ ನಿವಾಸಿಗಳ ಬದುಕು ದುಸ್ತಾರವಾಗಿದೆ. ನಗರಸಭೆ ಕಸ ಹಾಗೂ ಘನತ್ಯಾಜ್ಯ ಹಾಕುವುದನ್ನು ನಿಲ್ಲಿಸಬೇಕು. ಚರಂಡಿ ನೀರು ಹೊಟೇಲ್‌ ಇತರೆ ವಾಣಿಜ್ಯ ತ್ಯಾಜ್ಯ ಹಳ್ಳಕ್ಕೆ ಸೇರುವುದನ್ನು ನಿಲ್ಲಿಸಲು ಕ್ರಮಕೈಗೊಳ್ಳಬೇಕು. ಸ್ವಯಂಸೇವಾ ಸಂಸ್ಥೆಗಳು ಶ್ರಮದಾನ ನಡೆಸಿ ಹಳ್ಳವನ್ನು ಸ್ವಚ್ಛಗೊಳಿಸಬೇಕು.
•ಡಾ| ಶಿವಕುಮಾರ ಮಾಲೀಪಾಟೀಲ,
 ಪರಿಸರ ಪ್ರೇಮಿ ಹಾಗೂ ವೈದ್ಯ

•ಕೆ. ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next