Advertisement

ರುದ್ರಭೂಮಿ ಜಾಗೆ ಒತ್ತುವರಿ

07:20 PM Jan 09, 2020 | Naveen |

ಗಂಗಾವತಿ: ಶವ ಸಂಸ್ಕಾರಕ್ಕೆ ಜಾಗವಿಲ್ಲದಂತೆ ರುದ್ರಭೂಮಿಯನ್ನು ಒತ್ತುವರಿ ಮಾಡಿ ಕಬಳಿಸುವ ಷಡ್ಯಂತ್ರ ನಗರದ ಅಣ್ಣೂರುಗೌರಮ್ಮ ಕ್ಯಾಂಪ್‌, ವಿರೂಪಾಪೂರ, ತಾಂಡಾ, ವಡ್ಡರ ಓಣಿ ಹಾಗೂ ಜಂತಗಲ್‌ ಗೆ ಸೇರಿದ ರುದ್ರಭೂಮಿಯಲ್ಲಿ ಹಲವು ದಶಕಗಳಿಂದ ನಡೆಯುತ್ತಿದೆ.

Advertisement

ಸರ್ವೇ ನಂಬರ್‌ 2/2ರಲ್ಲಿ 2.12 ಎಕರೆ ರುದ್ರಭೂಮಿ ಇದ್ದ ಪ್ರದೇಶವನ್ನು ಕೆಲವರು ಒತ್ತುವರಿ ಮಾಡುವ ಮೂಲಕ ಪ್ರಸ್ತುತ 37 ಗುಂಟೆ ಮಾತ್ರ ಉಳಿಸಿದ್ದಾರೆ. ಇಲ್ಲಿ ಶವ ಸಂಸ್ಕಾರ ಮಾಡಲು ಜಾಗವಿಲ್ಲದಂತೆ ನಗರಸಭೆಯವರು ಕಸ ತಂದು ಸುರಿಯುತ್ತಿದ್ದಾರೆ. ಸುತ್ತಲಿನ ವಾರ್ಡ್‌ಗಳಲ್ಲಿ ಯಾರಾದರೂ ನಿಧನರಾದರೆ ಎಲ್ಲಿ ಅಂತ್ಯಕ್ರಿಯೆ ಮಾಡಬೇಕೆನ್ನುವ ಚಿಂತೆ ಕಾಡುತ್ತಿದೆ. ಇಲ್ಲಿರುವ ರುದ್ರಭೂಮಿಯಲ್ಲಿ ಅಣ್ಣೂರುಗೌರಮ್ಮ ಕ್ಯಾಂಪ್‌, ಜಂತಗಲ್‌, ವಿರೂಪಾಪೂರ ತಾಂಡಾ, ವಡ್ಡರ ಓಣಿ ಸೇರಿ ಸುತ್ತಲಿನ ಪ್ರದೇಶದ 18 ಹಿಂದುಳಿದ ಜಾತಿಯವರು ಹಲವು ದಶಕಗಳಿಂದ ಶವಸಂಸ್ಕಾರ ಮಾಡುತ್ತಾರೆ. ಸುತ್ತಲಿನ ಜನರಿಗೆ ಇದೇ ಬಹಿರ್ದೆಸೆ ಜಾಗವಾಗಿದ್ದು, ಇಡೀ ಸ್ಮಶಾನ ಭೂಮಿ ಗಬ್ಬೆದ್ದು ನಾರುತ್ತಿದೆ.

ಜತೆಗೆ ರುದ್ರಭೂಮಿಯನ್ನು ಕೆಲವರು ಒತ್ತುವರಿ ಮಾಡುವ ಮೂಲಕ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದು, ಯಾರಾದರೂ ನಿಧನರಾದರೆ ಮಣ್ಣು ಮಾಡಲು ಆಕ್ಷೇಪ ವ್ಯಕ್ತವಾಗುತ್ತವೆ.

ನಿರಂತರ ಹೋರಾಟ: ಅಣ್ಣೂರುಗೌರಮ್ಮ ಕ್ಯಾಂಪ್‌ ರುದ್ರಭೂಮಿ ಉಳಿಸಲು 18 ಸಮಾಜಗಳ ಹಿರಿಯರು ಮತ್ತು ಯುವಕರು ನಿರಂತರ ಹೋರಾಟ ಮಾಡುತ್ತಿದ್ದಾರೆ. ರುದ್ರಭೂಮಿಯನ್ನು ಸರ್ವೇ ಮಾಡಿ ಒತ್ತುವರಿ ತೆರವುಗೊಳಿಸಬೇಕು. ಸುತ್ತಲೂ ಕಾಂಪೌಂಡ್‌ ನಿರ್ಮಿಸುಂತೆ ಆಗ್ರಹಿಸಲಾಗುತ್ತಿದೆ. ರುದ್ರಭೂಮಿಯಲ್ಲಿ ಬೆಳೆದಿದ್ದ ಮುಳ್ಳುಕಂಟಿಗಳನ್ನು ಸ್ವಚ್ಛ ಮಾಡಿಸಲಾಗಿದೆ. ನಗರಸಭೆಯವರು ತಂದು ಹಾಕುವ ಕಸಕಡ್ಡಿಯನ್ನು ತೆರವು ಮಾಡುವಂತೆ ನಗರಸಭೆಗೆ ಹಲವು ಭಾರಿ
ಮನವಿ ಮಾಡಿದರೂ ಪ್ರಯೋಜವಾಗಿಲ್ಲ.

ರುದ್ರಭೂಮಿಗೆ ಮನೆಬಳಕೆ ನೀರನ್ನು ಹರಿಸಲಾಗುತ್ತಿದ್ದು, ಇದರಿಂದ ಇಡೀ ಸ್ಮಶಾನ ಕೆಸರಿನಿಂದ ಕೂಡಿದೆ. ಹೆಣ ಹೂಳಲು ನೆಲ ಅಗೆಯುವಾಗ ಬಹಳ ತೊಂದರೆಯಾಗುತ್ತಿದೆ. ತಾಲೂಕು ಆಡಳಿತ ಸ್ಮಶಾನಭೂಮಿಯನ್ನು ಉಳಿಸಿಕೊಡಲು ಅಗತ್ಯ ಕ್ರಮ ವಹಿಸಬೇಕಿದೆ.

Advertisement

ಹಿರೇಜಂತಗಲ್‌ ಹಾಗೂ ಸುತ್ತಲಿನ ಹಿಂದುಳಿದ ಸಮಾಜದವರಿಗೆ ಅಣ್ಣೂರುಗೌರಮ್ಮ ಕ್ಯಾಂಪ್‌ ಹತ್ತಿರ ಸ್ಮಶಾನಭೂಮಿ ಇದ್ದು, ಇದನ್ನು ಒತ್ತುವರಿ ಮಾಡಲಾಗಿದೆ. ಸುಮಾರು 2.12 ಎಕರೆ ಇದ್ದ ಭೂಮಿ ಒತ್ತುವರಿಯಾಗಿ 37 ಗುಂಟೆ ಮಾತ್ರ ಉಳಿದಿದೆ. ಹಲವು ದಿನಗಳಿಂದ ರುದ್ರಭೂಮಿ ಉಳಿಸಲು ಎಲ್ಲರ ಸಹಕಾರದಿಂದ ಹೋರಾಟ ನಡೆಸಲಾಗುತ್ತಿದೆ. ನಗರಸಭೆ ತಹಶೀಲ್ದಾರ್‌ ಕಚೇರಿಯವರು ಅಗತ್ಯ ದಾಖಲಾತಿ ನೀಡಿ ಒತ್ತುವರಿ ತೆರವು ಮಾಡಿಸಬೇಕಿದೆ. ಶಾಸಕ ಪರಣ್ಣ ಮುನವಳ್ಳಿ, ಮುಖಂಡರಾದ ಎಚ್‌. ಆರ್‌. ಚನ್ನಕೇಶವ ಅವರಿಂದ ಸಹಾಯ ಪಡೆದು ಸ್ವಚ್ಛ
ಮಾಡಿಸಲಾಗಿದ್ದು, ದಾಖಲಾತಿ ಪಡೆಯಲು ಸಮಿತಿ ಯತ್ನ ನಡೆಸಿದೆ.
ಭೀಮೇಶ ಉಪ್ಪಾರ್‌,
ಹೋರಾಟ ಸಮಿತಿ ಮುಖಂಡರು

ಸರ್ವೇ 2/2ರಲ್ಲಿರುವ ರುದ್ರಭೂಮಿ ಕುರಿತು
ಕೆಲವರು ದಾಖಲಾತಿ ಪಡೆಯಲು ಮೌಖೀಕವಾಗಿ ಮನವಿ ಮಾಡಿದ್ದರು ಸಮಿತಿಯವರು ಆಗಮಿಸಿ ಸರ್ವೇ ನಡೆಸುಂತೆ ಮನವಿ
ಕೊಟ್ಟರೆ ಸರ್ವೇ ನಡೆಸಿ ದಾಖಲಾತಿ ಕೊಡಲಾಗುತ್ತದೆ. ಸ್ಮಶಾಸನ ಒತ್ತುವರಿ ಮಾಡಿದ್ದರೆ ಕಾನೂನಿನಂತೆ ತೆರವುಗೊಳಿಸಲು ಅಗತ್ಯ ಕ್ರಮ ಜರುಗಿಸಲಾಗುತ್ತದೆ.
ಎಲ್‌.ಡಿ. ಚಂದ್ರಕಾಂತ,
ತಹಶೀಲ್ದಾರ್‌

„ಕೆ. ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next