Advertisement

ಜಿಡ್ದುಗಟ್ಟಿದ ಯುಜಿಡಿ ಕಾಮಗಾರಿ 

05:17 PM Sep 17, 2018 | Team Udayavani |

ಗಂಗಾವತಿ: ನಗರದ ರಸ್ತೆಗಳು ಸೇರಿ ವಾರ್ಡ್‌ನ ಒಳರಸ್ತೆಗಳನ್ನು ಹಿಂದಿನ ಸರಕಾರದ ಅವಧಿಯಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿ ಡಾಂಬರೀಕರಣ ಮತ್ತು ಕಾಂಕ್ರೀಟ್‌ ರಸ್ತೆಗಳನ್ನಾಗಿ ನಿರ್ಮಿಸಲಾಗಿತ್ತು. ಇದೀಗ ಒಳಚರಂಡಿ ಮತ್ತು ನಗರಸಭೆಯ ಕುಡಿಯುವ ನೀರಿನ ಪೈಪ್‌ಗ್ಳ ದುರಸ್ತಿ ನೆಪದಲ್ಲಿ ನಗರದ ಶೇ. 80ರಷ್ಟು ರಸ್ತೆಗಳನ್ನು ಅಗೆಯಲಾಗಿದೆ. ಇದರಿಂದ ಜನರ ಸಂಚಾರಕ್ಕೆ ತೊಂದರೆಯಾಗಿದ್ದು, ಕೋಟ್ಯಂತರ ರೂ. ಗಳನ್ನು ನೀರಿನಲ್ಲಿ ಹೋಮ ಮಾಡಿದಂತಾಗಿದೆ.

Advertisement

ಕಳೆದ 18 ವರ್ಷಗಳಿಂದ ನಗರದಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಇದು ಯಾವಾಗ ಪೂರ್ಣಗೊಳ್ಳುತ್ತದೆ ಎಂಬುದು ದೇವರೇ ಬಲ್ಲ. ಪ್ರತಿ ವರ್ಷ ಗುತ್ತಿಗೆದಾರ ಬದಲಾಗುತ್ತಾರೆ. ಪುನಃ ಹೊಸ ಗುತ್ತಿಗೆದಾರ ನಗರದ ರಸ್ತೆಗಳನ್ನು ಅಗೆಸುತ್ತಾರೆ. ಇದು ಹೀಗೆ ನಡೆದಿದ್ದು, ಆಗಾಗ ನಗರಸಭೆಯ ಅಧಿಕಾರಿಗಳು ನೀರಿನ ಪೈಪ್‌ ದುರಸ್ತಿ ನೆಪದಲ್ಲಿ ಅಗೆಯುವ ಮೂಲಕ ರಸ್ತೆಗಳು ಹಾಳಾಗಲು ಕಾರಣರಾಗಿದ್ದಾರೆ. ವರ್ಷದಲ್ಲಿ ನಾಲ್ಕೈದು ಭಾರಿ ಕುಡಿಯುವ ನೀರಿನ ಪೈಪ್‌ಗ್ಳ ದುರಸ್ತಿ ನೆಪದಲ್ಲಿ ನಗರಸಭೆಯವರು ಆನೆಗೊಂದಿ ರಸ್ತೆ, ಕೇಂದ್ರ ಬಸ್‌ ನಿಲ್ದಾಣ, ನೀಲಕಂಠೇಶ್ವರ ಕ್ಯಾಂಪ್‌, ಮಹಾವೀರ ವೃತ್ತ ಹೀಗೆ ಹಲವು ಕಡೆ ರಸ್ತೆ ಅಗೆದು ಹಾಳು ಮಾಡಿದ್ದಾರೆ. ಯಾವುದೇ ಯೋಜನೆ ಹಾಗೂ ವ್ಯವಸ್ಥೆ ಇಲ್ಲದೇ ರಸ್ತೆ ಅಗೆಯುವ ಮೂಲಕ ನಗರದ ಸೌಂದರ್ಯಕ್ಕೆ ಧಕ್ಕೆ ತಂದಿದ್ದಾರೆ.

ಲಿಂಗರಾಜ್‌ ಕ್ಯಾಂಪ್‌ಗೆ ಕುಡಿಯುವ ನೀರು ಪೂರೈಕೆ ಮಾಡುವ ಪೈಪ್‌ ದುರಸ್ತಿ ನೆಪದಲ್ಲಿ ಕನಕಗಿರಿ ರಸ್ತೆಯ ನಗರಸಭೆ ಕಾಂಪ್ಲೆಕ್ಸ್‌ ಎದುರು ಕಳೆದ ಕೆಲ ದಿನಗಳ ಹಿಂದೆ ಸುಮಾರು 30 ಮೀಟರ್‌ ನೆಲವನ್ನು ಅಗೆಯಲಾಗಿದೆ. ಆದರೆ ಪೈಪ್‌ ದುರಸ್ತಿ ಮಾಡುತ್ತಿಲ್ಲ. ಅಗೆದ ನೆಲವನ್ನು ಮುಚ್ಚದೇ ಇರುವ ಕಾರಣ ಹಲವು ಜನರು ತೆಗ್ಗಿನಲ್ಲಿ ಬಿದ್ದು ಗಾಯಗೊಂಡ ಘಟನೆಯೂ ನಡೆದಿವೆ. 

ಒಬ್ಬರ ಮೇಲೊಬ್ಬರ ಆರೋಪ: ನಗರದ ರಸ್ತೆ ಅಗೆಯುವ ಕುರಿತು ಯುಜಿಡಿ ಮತ್ತು ನಗರಸಭೆ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತ ಜವಾಬ್ದಾರಿಯಿಂದ ಜಾರಿಕೊಳ್ಳುವ ಮಾತನಾಡುತ್ತಿದ್ದಾರೆ. ಸಾರ್ವಜನಿಕರು ಈ ಕುರಿತು ದೂರು ನೀಡಲು ನಗರಸಭೆಗೆ ಆಗಮಿಸಿದರೆ ಈ ಕಾಮಗಾರಿ ನಮಗೆ ಸಂಬಂಧಿಸಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಯುಜಿಡಿ ಅಧಿಕಾರಿಗಳನ್ನು ವಿಚಾರಿಸಲು ಅವರು ಕೈಗೆ ಸಿಗುವುದೇ ಇಲ್ಲ. 

ಸರಕಾರದ ಕೋಟ್ಯಂತರ ರೂ. ಅನುದಾನ ಬಳಕೆ ಮಾಡಿ ರಸ್ತೆ ನಿರ್ಮಾಣ ಮಾಡಲಾಗಿದೆ. ಯುಜಿಡಿ ಮತ್ತು ನಗರಸಭೆಯವರು ಪದೇ ಪದೇ ಅಗೆಯುವ ಮೂಲಕ ನಗರದ ಸೌಂದರ್ಯ ಹಾಳು ಮಾಡುವ ಜತೆ ಸಾರ್ವಜನಿಕರ ಹಣ ಪೋಲು ಮಾಡುತ್ತಿದ್ದಾರೆ. ನಗರಸಭೆ ಅಧಿ ಕಾರಿಗಳನ್ನು ಈ ಕುರಿತು ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ಕೂಡಲೇ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ರಾಜಾಸಾಬ್‌ ನವಣೆಕ್ಕಿ, 11ನೇ ವಾರ್ಡ್‌ ನಿವಾಸಿ.

Advertisement

ನಗರದ ವಿವಿಧ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಪೈಪ್‌ ದುರಸ್ತಿಗಾಗಿ ನೆಲ ಅಗೆಯಲಾಗಿದ್ದು ದುರಸ್ತಿ ಮಾಡಿ ನೆಲ ಮುಚ್ಚುವ ಕಾರ್ಯ ತ್ವರಿತವಾಗಿ ನಡೆಯುತ್ತಿದೆ. ಎಲ್ಲಿಯೂ ರಸ್ತೆ ಅಗೆದಿಲ್ಲ. ಯುಜಿಡಿ ಕಾಮಗಾರಿ ನಡೆದಿದ್ದು, ಅಗೆದ ರಸ್ತೆ ಮುಚ್ಚಿ ಡಾಂಬರೀಕರಣ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಪುನಃ ಇನ್ನೊಮ್ಮೆ ನಗರಸಭೆಯಿಂದ ಪತ್ರ ಬರೆದು ತಿಳಿಸಲಾಗುತ್ತದೆ.
ಕೆ. ಶ್ರುತಿ, ಪೌರಾಯುಕ್ತ

ಕೆ. ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next