Advertisement

ಶೋಷಿತರಿಗೆ ಭೂಮಿ ಹಂಚಿಕೆ ಮಾಡಿದ್ದ ಟಿಪ್ಪು ಸುಲ್ತಾನ್‌

04:59 PM Nov 11, 2018 | |

ಗಂಗಾವತಿ: ಭೂಸುಧಾರಣೆ ಮೂಲಕ ಶೋಷಿತರಿಗೆ ಭೂಮಿ ಹಂಚಿಕೆ ಮಾಡಿದ ಹರಿಕಾರ ಟಿಪ್ಪು ಸುಲ್ತಾನ್‌ ಎಂದು ಶರಣಸಾಹಿತಿ ಸಿ.ಎಚ್‌. ನಾರಿನಾಳ ಹೇಳಿದರು. ಅವರು ಬಾಲಕಿಯರ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡ ಹಜರತ್‌ ಟಿಪ್ಪು ಸುಲ್ತಾನ್‌ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ದೇಶದಲ್ಲಿದ್ದ ಪಾಳೆಗಾರರು, ಜಮೀನ್ದಾರರು, ಪುರೋಹಿತಶಾಹಿ ಕೈಯಲ್ಲಿದ್ದ ಸಾವಿರಾರು ಎಕರೆ ಭೂಮಿಯನ್ನು ಪಡೆದು ಬಡವರಿಗೆ, ಕೆಳವರ್ಗದವರಿಗೆ ಹಂಚಿಕೆ ಮಾಡಬೇಕೆಂಬ ಚಿಕ್ಕದೇವರಾಯ ಒಡೆಯರ್‌, ಹೈದರ್‌ ಅಲಿ ಕನಸನ್ನು ಟಿಪ್ಪು ಸುಲ್ತಾನ್‌ ನನಸು ಮಾಡಿದ್ದಾರೆ. ರಾಜ ಎಂದರೆ ಸಾಮ್ರಾಜ್ಯ ವಿಸ್ತರಿಸಲು ಯುದ್ಧ ಮಾಡುವುದು ಸಹಜ ಅದನ್ನು ಕೋಮುವಾದಿಗಳು ಇನ್ನಿಲ್ಲದ ಕಥೆ ಕಟ್ಟಿ ಟಿಪ್ಪು ಕೋಮುವಾದಿ, ಮತಾಂತರ ಮಾಡಿದ ಎಂದು ಗುಲ್ಲೆಬ್ಬಿಸುತ್ತಿದ್ದಾರೆ. ಕೆರೆ ಕಟ್ಟೆ ರಸ್ತೆ ಬೃಹತ್‌ ಪಟ್ಟಣಗಳ ನಿರ್ಮಾಣ ಮಾಡಿದ್ದು ಟಿಪ್ಪು. ಕೆಳವರ್ಗದ ಮಹಿಳೆಯರ ಮಾನ ಹರಾಜು ಹಾಕುತ್ತಿದ್ದ ಕೇರಳ ಮತ್ತು ಮಡಿಕೇರಿಯ ಸಂಪ್ರದಾಯಿಕ ಪದ್ಧತಿ ಹಾಗೂ ಮದ್ಯಪಾನ ನಿಷೇಧ ಮಾಡುವ ಮೂಲಕ ಪ್ರಗತಿಯ ಹರಿಕಾರರಾಗಿದ್ದಾರೆ. ಬಿಜೆಪಿಯವರು ಟಿಪ್ಪುವಿಗೆ ಕೋಮುವಾದಿ ಪಟ್ಟ ಕಟ್ಟುವ ಮೂಲಕ ಸಂಪ್ರದಾಯವಾದಿಗಳ ಪರವಾಗಿದ್ದಾರೆ. ಇವರಿಗೆ ಶೋಷಿತರು, ಬಡವರ ಉದ್ಧಾರ ಬೇಕಿಲ್ಲ. ಟಿಪ್ಪು ಆಂಧ್ರಪ್ರದೇಶದಲ್ಲಿ ಯುದ್ಧ ನಿರತರಾಗಿದ್ದ ಸಂದರ್ಭದಲ್ಲಿ ಮರಾಠರು ಶೃಂಗೇರಿ ಶಾರದೆ ಮಠದ ಮೇಲೆ ದಾಳಿ ನಡೆಸಿ ಚಿನ್ನಾಭರಣ ಸೇರಿ ಅಪಾರ ಸಂಪತ್ತು ಲೂಟಿ ಮಾಡಿದಾಗ ಮಠದ ಪೂಜ್ಯರು ಟಿಪ್ಪುವಿಗೆ ಪತ್ರ ಬರೆದು ವಿಷಯ ಗಮನಕ್ಕೆ ತಂದಾಗ ಆಗಿರುವ ನಷ್ಟ ಭರ್ತಿ ಮಾಡಿ ಪ್ರತಿ ವರ್ಷ ಶೃಂಗೇರಿ ಮತ್ತು ಮೇಲುಕೋಟೆ ಚಲುವನಾರಾಯಣ ಸ್ವಾಮಿ ದೇವಾಲಯಕ್ಕೆ ದೇಣಿಗೆ ನೀಡುವ ಸಂಪ್ರದಾಯ ಹಾಕಿದ್ದರು ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಮಹಮ್ಮದ್‌ ಉಸ್ಮಾನ್‌, ಅಬೀದಾಬೇಗಂ, ಕಸಾಪ ಮಾಜಿ ಅಧ್ಯಕ್ಷ ಅಜಮೀರ್‌ ನಂದಾಪೂರ, ಕಾಶಿಂ ಅಲಿ ಮುದ್ದಾಬಳ್ಳಿ, ಚಕ್ರವರ್ತಿ ನಾಯಕ, ಕೆ. ಪಾಮಪ್ಪ, ತಹಶೀಲ್ದಾರ್‌ ವಿರೇಶ ಬಿರಾದಾರ, ಡಿವೈಎಸ್‌ಪಿ ಸಂತೋಷ ಬನಹಟ್ಟಿ,  ಜುನಾಥ ಸ್ವಾಮಿ, ಜಂಬಣ್ಣ ಐಲಿ, ಮಹೇಶ ದಲಾಲ್‌ ಸೇರಿ ಅನೇಕರಿದ್ದರು.

ಶಾಸಕರು ಸೇರಿ ಜನಪ್ರತಿನಿಧಿಗಳು ಗೈರು
ತಾಲೂಕು ಆಡಳಿತ ಆಯೋಜಿಸಿದ್ದ ಹಜರತ್‌ ಟಿಪ್ಪು ಸುಲ್ತಾನ್‌ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ಪರಣ್ಣ ಮುನವಳ್ಳಿ, ಸಂಸದ ಕರಡಿ ಸಂಗಣ್ಣ, ಜಿಪಂ ಉಪಾಧ್ಯಕ್ಷೆ ಲಕ್ಷ್ಯಮ್ಮ ನೀರಲೂಟಿ, ತಾಪಂ ಅಧ್ಯಕ್ಷ ವಿರೂಪಾಕ್ಷಿಗೌಡ, ನಗರಸಭೆ ಸದಸ್ಯರು ಗೈರಾಗಿದ್ದರು. ನಿಗದಿ ವೇಳೆಗಿಂತ ಕಾರ್ಯಕ್ರಮ ಎರಡು ಗಂಟೆ ತಡವಾಗಿ ಆರಂಭವಾಯಿತು. ಅಹಿತಕರ ಘಟನೆ ಜರುಗದಂತೆ ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next