ಗಂಗಾವತಿ: ತಾ. ಪಂ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮಹಮದ್ ರಫಿ ಚುನಾಯಿತರಾಗಿದ್ದಾರೆ. ಗೀತಾ ಶರಣೇಗೌಡ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯ ಫಕೀರಯ್ಯ ಢಣಾಪೂರ ಬಿಜೆಪಿ ಸೇರ್ಪಡೆಯಾಗಿ ಬಿಜೆಪಿ ಮತ್ತು ಭಿನ್ನಮತೀಯ ಕಾಂಗ್ರೆಸ್ ಪಕ್ಷೇತರ ಸದಸ್ಯ ಬೆಂಬಲದೊಂದಿಗೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ಸ್ಪರ್ಧೆಯೊಡ್ಡಿದರು.
ಈ ಮಧ್ಯೆ ಬಿಜೆಪಿ ಹೊಸ್ಕೇರಿ ಸದಸ್ಯೆ ಆಶಾಬೀ ಪಕ್ಷೇತರ ಸದಸ್ಯರಾದ ವೈ.ರಮೇಶ್, ಹನುಮಂತಪ್ಪ ಸಂಗಟಿ ಮಹಮದ್ ರಫಿಯನ್ನು ಬೆಂಬಲಿಸಿದ್ದರಿಂದ ಕಾಂಗ್ರೆಸ್ ಗೆ 07 ಬಿಜೆಪಿ ಬೆಂಬಲಿತ ಫಕೀರಯ್ಯ ಗೆ 06 ಮತಗಳು ಬಂದವು. ಮಹಮದ್ ರಫಿ ಅಧ್ಯಕ್ಷರಾಗಿ ಆಯ್ಕೆಯಾದರು.
ಪರಾಜಿತ ಫಕೀರಯ್ಯ ಗೆ ಕಾಂಗ್ರೆಸ್ ಪಕ್ಷದ ಸುನೀತಾ ಪ್ರಸಾದ, ಗೀತಾ ಶರಣೇಗೌಡ ಹಾಗೂ ಮೂರು ಜನ ಬಿಜೆಪಿ ಸದಸ್ಯರು ಕೈ ಎತ್ತುವ ಮೂಲಕ ಮತ ಹಾಕಿದರು.
ಸಹಾಯಕ ಆಯುಕ್ತ ಕೆ.ನಾರಾಯಣ ರಡ್ಡಿ ಚುನಾವಣಾ ಅಧಿಕ ಸರಿಯಾಗಿ ಕಾರ್ಯನಿರ್ವಹಿಸಿದರು.