ಗಂಗಾವತಿ: ಭತ್ತದ ಕಣಜ ಎಂಬ ಖ್ಯಾತಿ ಪಡೆದ ಗಂಗಾವತಿಯಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪನೆಯ ಕನಸು ಮುಂದಿನ ರಾಜ್ಯ ಬಜೆಟ್‌ನಲ್ಲಿ ನನಸಾಗುವ ಅವಕಾಶಗಳಿದ್ದು, ಇದಕ್ಕೆ ಪೂರಕವಾಗಿ ಜನಪ್ರತಿನಿ ಧಿಗಳು ಸ್ಪಂದಿಸುವ ಅಗತ್ಯವಿದೆ. 2011ರಲ್ಲಿ ಗಂಗಾವತಿಯಲ್ಲಿ ಜರುಗಿದ ಅಖೀಲ ಭಾರತದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಅವರು, ಶಾಸಕ ಪರಣ್ಣ ಮುನವಳ್ಳಿ ಮನವಿಗೆ ಸ್ಪಂದಿಸಿ ಗಂಗಾವತಿಯಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪನೆ ಆದೇಶ ಮಾಡಿದ್ದರು.
ರಾಯಚೂರು ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ಇಲಾಖೆಯ ಉನ್ನತ ಅಧಿ ಕಾರಿಗಳು ಎರಡ್ಮೂರು ಬಾರಿ ಭೇಟಿ ನೀಡಿ ಗಂಗಾವತಿ ಕೃಷಿ ಸಂಶೋಧನಾ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರ, ವಡ್ಡರಹಟ್ಟಿ ರೈತ ತರಬೇತಿ ಕೇಂದ್ರದಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪನೆ ಮಾಡಲು ಸ್ಥಳಾವಕಾಶ ಕುರಿತು ಪೂರಕ ವರದಿ ಸರಕಾರಕ್ಕೆ ಸಲ್ಲಿಸಿದ್ದರು. ಸರಕಾರ ಕಾಲೇಜು ಆರಂಭಕ್ಕೆ 60 ಕೋಟಿ ಮಂಜೂರು ಮಾಡಿತ್ತು. ಕಾಲೇಜು ಆರಂಭ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ 2013ರಲ್ಲಿ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿ ಕಾರಕ್ಕೆ ಬಂದು ಅಂದಿನ ಕೃಷಿ ಸಚಿವರಾಗಿದ್ದ ಕೃಷ್ಣ ಭೈರೇಗೌಡ ಅವರು ಗಂಗಾವತಿಯಲ್ಲಿ ಕೃಷಿ ಕಾಲೇಜು ಆರಂಭಕ್ಕೆ ಕೊಕ್ಕೆ ಹಾಕಿದ್ದರೆನ್ನಲಾಗುತ್ತಿದೆ. ನೂತನ ಕೃಷಿ ಕಾಲೇಜು ಕಲಬುರ್ಗಿಗೆ ಸ್ಥಳಾಂತರ ಮಾಡಿದ್ದರಿಂದ ಗಂಗಾವತಿ ಕೃಷಿ ಕಾಲೇಜು ಕನಸಾಗಿಯೇ ಉಳಿಯಿತು. ಅಂದಿನ ಶಾಸಕ ಇಕ್ಬಾಲ್ ಅನ್ಸಾರಿ ಹಲವು ಬಾರಿ ಸಚಿವರಾಗಿದ್ದ ಕೃಷ್ಣ ಭೈರೇಗೌಡರಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ.
ಕಾಲೇಜು ಸ್ಥಾಪನೆ ನನೆಗುದಿಗೆ ಬಿತ್ತು. ಇದೀಗ ಪುನಃ ಬಿಜೆಪಿ ಸರಕಾರ ಸ್ತಿತ್ವಕ್ಕೆ ಬಂದಿದ್ದು, ಶಾಸಕ ಪರಣ್ಣ ಮುನವಳ್ಳಿ ಅವರು ಸಿಎಂಗೆ ಪತ್ರ ಬರೆದು ಕೃಷಿ ಮಹಾವಿದ್ಯಾಲಯವನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿ, ಇದೇ ವರ್ಷದಿಂದ ವಡ್ಡರಹಟ್ಟಿ ಅಥವಾ ಕೆವಿಕೆಯಲ್ಲಿ ಕೃಷಿ ಮಹಾವಿದ್ಯಾಲಯ ಕಾಲೇಜು ಆರಂಭಿಸುವಂತೆ ಮನವಿ ಮಾಡಿದ್ದಾರೆ.
ಇತ್ತೀಚೆಗೆ ತಾಲೂಕಿನಲ್ಲಿ ತೋಟಗಾರಿಕಾ ಬೆಳೆಗಳು ಹೆಚ್ಚಾಗಿದ್ದು, ಕೃಷಿ ಕಾಲೇಜು ಸ್ಥಾಪನೆಯಾದರೆ ಈ ಭಾಗದ ರೈತರಿಗೆ, ರೈತರ ಮಕ್ಕಳಿಗೆ ಸಹಕಾರಿಯಾಗಲಿದೆ. ತಾಲೂಕಿನ ಕೃಷಿಕರ ದಶಕದ ಕನಸು ನನಸಾಗಬೇಕಿದೆ.
ಗಂಗಾವತಿ ತಾಲೂಕು ಕೃಷಿ ಪ್ರಧಾನವಾಗಿದ್ದು, ಭತ್ತ ಸೇರಿ ಹಲವು ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇಲ್ಲಿ ಕೃಷಿ ಸಂಶೋಧನೆ ಮತ್ತು ವಿಜ್ಞಾನ ಕೇಂದ್ರ, ಕೃಷಿ ವಿಜ್ಞಾನಿಗಳು, ತಾಂತ್ರಿಕರು ಇರುವುದರಿಂದ ಕೃಷಿ ಕಾಲೇಜು ಆರಂಭಿಸಲು ಅನುಕೂಲವಾಗುತ್ತದೆ. 2011ರಲ್ಲಿ ಆರಂಭವಾಗಬೇಕಿದ್ದ ಕೃಷಿ ಕಾಲೇಜು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ರದ್ದುಪಡಿಸಲಾಗಿದೆ. ಇದೀಗ ಉತ್ತರ ಕರ್ನಾಟಕದ ಬಿ.ಸಿ. ಪಾಟೀಲ ಕೃಷಿ ಸಚಿವರಾಗಿದ್ದಾರೆ. ಸಿಎಂ ಯಡಿಯೂರಪ್ಪ ಪೂರಕ ಭರವಸೆ ನೀಡಿದ್ದು, ಇದೇ ವರ್ಷ ಕೃಷಿ ಕಾಲೇಜು ಆರಂಭ ಮಾಡಲು ಯತ್ನಿಸಲಾಗುತ್ತದೆ.
ಪರಣ್ಣ ಮುನವಳ್ಳಿ,
ಗಂಗಾವತಿ ಶಾಸಕ
ಕೆ. ನಿಂಗಜ್ಜ