ಗಂಗಾವತಿ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್‌ಡೌನ್ ವಿಧಿ ಸಿರುವುದರಿಂದ ಗ್ರಾಮೀಣ ಭಾಗದಲ್ಲಿರುವ ಕಿರಾಣಿ ವರ್ತಕರು ನಗರದಿಂದ ಕಿರಾಣಿ ಸಾಮಗ್ರಿ ತೆಗೆದುಕೊಂಡು ಹೋಗಲು ಹರಸಾಹಸ ಪಡುವಂತಾಗಿದೆ.
ಗಂಗಾವತಿ ನಗರದ ಸುತ್ತ ಚೆಕ್‌ಪೋಸ್ಟ್ ಹಾಕಿರುವುದರಿಂದ ಸಾಮಗ್ರಿ ತೆಗೆದುಕೊಂಡು ಹೋಗಲು ಬರುವವರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಇದರಿಂದ ಹಳ್ಳಿಗಳಲ್ಲಿ ಕಿರಾಣಿ ಸಾಮಗ್ರಿಗಳ ಕೊರತೆಯಿದ್ದು, ಕೂಡಲೇ ಜಿಲ್ಲಾಡಳಿತ ಹಳ್ಳಿಗರಿಗೆ ಅನುಕೂಲ ಮಾಡಿಕೊಡಬೇಕಿದೆ.
ಹಳ್ಳಿಯಲ್ಲಿರುವ ಕಿರಾಣಿ ಅಂಗಡಿಯವರು ಕಳೆದ 15 ದಿನಗಳಿಂದ ಕಿರಾಣಿ ಸಾಮಾನುಗಳ ಕೊರತೆ ಅನುಭವಿಸುತ್ತಿದ್ದಾರೆ. ನ್ಯಾಯಬೆಲೆ ಅಂಗಡಿಗಳ ಮೂಲಕ ಅಕ್ಕಿ, ಗೋಧಿ ವಿತರಿಸಲಾಗಿದೆ. ಅಗತ್ಯ ದಿನಸಿ ಸಾಮಾನುಗಳನ್ನು ಖರೀದಿ ಮಾಡಲು ಹಳ್ಳಿಯಲ್ಲಿರುವ ಜನರಿಗೆ ಮತ್ತು ಕಿರಾಣಿ ಅಂಗಡಿ ಮಾಲೀಕರಿಗೆ ಪಾಸ್ ವ್ಯವಸ್ಥೆ ಮಾಡಬೇಕಿದೆ.
ತರಕಾರಿ ತರಲು ಸಹ ಪೊಲೀಸರು ಬಿಡುತ್ತಿಲ್ಲ. ಇದರಿಂದ ಹಳ್ಳಿಯಲ್ಲಿರುವ ಕಿರಾಣಿ ತರಕಾರಿ ವ್ಯಾಪಾರಸ್ಥರು ಕಿರಾಣಿ ಸಾಮಾನುಗಳ ಕೊರತೆಯಿಂದ ಸಮಸ್ಯೆಯುಂಟಾಗಿದೆ. ಇನ್ನೂ ಕೆಲ ವ್ಯಾಪಾರಸ್ಥರು ಕಳ್ಳದಾರಿಯಲ್ಲಿ ಕಿರಾಣಿ ತಂದು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ದೂರು ಕೇಳಿ ಬರುತ್ತಿವೆ.
ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಕಿರಾಣಿ ಸಾಮಾನು ಮತ್ತು ತರಕಾರಿ, ಹಾಲು, ಸೇರಿ ಅಗತ್ಯ ವಸ್ತು ತೆಗೆದುಕೊಂಡು ಹೋಗುವವರಿಗೆ ತೊಂದರೆ ಕೊಡಬಾರದು. ಗ್ರಾಮೀಣ ಭಾಗದಲ್ಲಿ ಪಿಡಿಒ, ಗ್ರಾಮಲೆಕ್ಕಾಧಿಕಾರಿ, ತಾಪಂ ಇಒ ಅವರು ಕಿರಾಣಿ ಅಗತ್ಯ ಸಾಮಾನು ಕೊರತೆಯಾಗದಂತೆ ನೋಡಿಕೊಳ್ಳಬೇಕು. ಹಳ್ಳಿಯಿಂದ ನಗರಕ್ಕೆ ಆಗಮಿಸಿ ಕಿರಾಣಿ ತೆಗೆದುಕೊಂಡು ಹೋಗುವವರು ಅನುಕೂಲ ಮಾಡಿಕೊಡಬೇಕು.
ಎಲ್.ಡಿ. ಚಂದ್ರಕಾಂತ,
ತಹಶೀಲ್ದಾರ್