ಗಂಗಾವತಿ: ಗ್ರಾಮೀಣ ಹಾಗೂ ನಗರದ ಕೊಳಗೇರಿ ಪ್ರದೇಶಗಳಲ್ಲಿ ಮದ್ಯ ಅಕ್ರಮ ಮಾರಾಟದ ಹತ್ತಾರು ಅಂಗಡಿಗಳು 10 ವರ್ಷಗಳಿಂದ ಆರಂಭವಾಗಿದ್ದು, ಎಂಆರ್‌ಪಿಗಿಂತ ಅಧಿಕ ದರಕ್ಕೆ ಮದ್ಯ ಮಾರಾಟದ ಮೂಲಕ ನಿತ್ಯ ಸರಕಾರಕ್ಕೆ ಲಕ್ಷಾಂತರ ರೂ. ನಷ್ಟವುಂಟು ಮಾಡುವಲ್ಲಿ ಅಬಕಾರಿ ಇಲಾಖೆ ಪಾತ್ರವೂ ಮಹತ್ವದ್ದಾಗಿದೆ.
Advertisement
ಸರಾಯಿ ಬಂದ್ ಆದ ನಂತರ ಪಾನ್‌ಶಾಪ್, ಕಿರಾಣಿ ಹಾಗೂ ಚಹಾ ಅಂಗಡಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಸರಕಾರ ನಿಗದಿಪಡಿಸಿದ ದರಕ್ಕಿಂತಲೂ ಅಧಿಕ ಬೆಲೆಗೆ ಮಾರಾಟ ಮಾಡುವ ಮೂಲಕ ಮದ್ಯದಂಗಡಿ ಪರವಾನಗಿ ಪಡೆದವರು ಹಣ ಗಳಿಸುತ್ತಿದ್ದಾರೆ. ತಾಲೂಕಿನಲ್ಲಿ ಸುಮಾರು 2740 ಮದ್ಯ ಅಕ್ರಮ ಮಾರಾಟ ಅಂಗಡಿಗಳಿದ್ದು, ಲೈಸೆನ್ಸ್ ಪಡೆದ ಮದ್ಯದ ಮಾರಾಟಗಾರರು ಈ ಅಂಗಡಿಗಳಿಗೆ ಮದ್ಯ ಪೂರೈಕೆ ಮಾಡುತ್ತಿದ್ದಾರೆ. ಅಬಕಾರಿ ಇಲಾಖೆ ಬಳಿ ಇಷ್ಟೆಲ್ಲ ಮಾಹಿತಿ ಇದ್ದರೂ ಪ್ರತಿ ವರ್ಷ ಪರವಾನಗಿ ನವೀಕರಣ ಸಂದರ್ಭದಲ್ಲಿ ಅಕ್ರಮವೆಸಗಿದವರ ಪರವಾನಗಿ ರದ್ದುಗೊಳಿಸದೇ ನವೀಕರಣ ಮಾಡುವ ಮೂಲಕ ಅಕ್ರಮಗಳಿಗೆ ಸರಕಾರ ನೇರವಾಗಿ ಕಾರಣವಾಗಿದೆ.
Related Articles
Advertisement
ಮದ್ಯ ಅಕ್ರಮ ಮಾರಾಟ ತಡೆಯಲು ಜಿಲ್ಲಾದ್ಯಂತ ದಾಳಿ ನಡೆಸಿ ಕೇಸ್ ಹಾಕಲಾಗಿದೆ. ಅಕ್ರಮ ತಡೆಯಲು ಸರಕಾರದ ಎಂಎಸ್‌ಐಎಲ್ ಮದ್ಯದಂಗಡಿ ಆರಂಭಿಸುವಂತೆ ಮನವಿ ಮಾಡಿದಂತೆ 45 ಅಂಗಡಿಗಳು ಮಂಜೂರಾಗಿದ್ದು, ಇವುಗಳ ಪೈಕಿ 24 ಎಂಎಸ್‌ಐಎಲ್ ಅಂಗಡಿಗಳು ಆರಂಭವಾಗಿವೆ. ಉಳಿದ ಅಂಗಡಿ ಅರಂಭಕ್ಕೆ ಎಂಎಸ್‌ಐಎಲ್ ಅಧಿಕಾರಿ ನೆಪ ಹೇಳುತ್ತಿದ್ದು ಅಧಿಕಾರಿ ವಿರುದ್ಧ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಸರಕಾರದ ಮದ್ಯದಂಗಡಿಗಳಾದರೆ ಎಂಆರ್‌ಪಿ ದರ ಸಿಗುತ್ತದೆ. ಮದ್ಯದ ಅಕ್ರಮ ಮಾರಾಟ ತಡೆಯಲು ಸಾಧ್ಯವಾಗುತ್ತದೆ. ಲೈಸೆನ್ಸ್ ನವೀಕರಣ ಪ್ರಕ್ರಿಯೆ ಸರಕಾರ ಸರಳಗೊಳಿಸಿದ್ದು ತಾಲೂಕು, ಜಿಲ್ಲಾಮಟ್ಟದ ಅಧಿಕಾರಿಗಳ ಕೈಯಲ್ಲಿ ಏನು ಇಲ್ಲ. ನೇರವಾಗಿ ಕಮೀಷನರ್ ಲಾಗಿನ್ ಮೂಲಕ ನವೀಕರಣ ಮಾಡಲು ಅವಕಾಶವಿದೆ. ನಿರಂತರ ಕೇಸ್ ಮಾಡುವ ಮೂಲಕ ಅಕ್ರಮ ತಡೆಯಲಾಗುತ್ತಿದೆ.•ಆರ್. ವೀಣಾ, ಉಪ ಆಯುಕ್ತ ಕೊಪ್ಪಳ ಮದ್ಯ ಅಕ್ರಮ ಮಾರಾಟ ತಡೆಯುವಂತೆ ನ್ಯಾಯಯುತ ಹೋರಾಟ ನಡೆಸಲು ಮುಂದಾದರೆ ಕೆಲ ದುಷ್ಟಶಕ್ತಿಗಳು ಮತ್ತು ಲಿಕ್ಕರ್ ಲಾಭಿಗಳು ದೌರ್ಜನ್ಯವೆಸಗುತ್ತಿವೆ. ಸರಕಾರ ತಾಲೂಕಿನಲ್ಲಿ ಅಕ್ರಮ ಮದ್ಯ ತಡೆಯುವ ಮೂಲಕ ಬಡ ಕೂಲಿಕಾರರನ್ನು ಸಂರಕ್ಷಣೆ ಮಾಡಬೇಕಿದೆ. ಸಿಎಲ್, 02, 07, 09 ಲೈಸೆನ್ಸ್ ಪಡೆದು ಬಹಿರಂಗವಾಗಿ ಹೊರಗಡೆ ಮದ್ಯ ಮಾರಾಟ ಮಾಡುವುದಕ್ಕೆ ಬ್ರೇಕ್ ಬೀಳಬೇಕಿದೆ. ಮದ್ಯ ಮಾರಾಟದ ಲೈಸೆನ್ಸ್ ನವೀಕರಣ ಮಾಡದೇ ಸರಕಾರದ ಮೂಲಕ ಎಂಎಸ್‌ಐಎಲ್ ಮದ್ಯದಂಗಡಿ ಆರಂಭಿಸುವ ಮೂಲಕ ಸರಕಾರಕ್ಕೆ ಆದಾಯ ಬರುವಂತೆ ಮಾಡುವುದು ಅವಶ್ಯ.
•ಮಲ್ಲಿಕಾರ್ಜುನ ನಂದಾಪೂರ, ಹೋರಾಟಗಾರ