ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಸಣಾಪುರ ಭಾಗದಲ್ಲಿ ಅನಧಿಕೃತವಾಗಿ ಪಟ್ಟಾ ಜಮೀನುಗಳಲ್ಲಿ ಮತ್ತು ಸರ್ಕಾರಿ ಭೂಮಿಯಲ್ಲಿ ನಿರ್ಮಿಸಿಕೊಂಡಿರುವ ಅನಧಿಕೃತ ರೆಸಾರ್ಟ್ ಮತ್ತು ಹೋಟೆಲ್ ಗಳನ್ನು 48ಗಂಟೆಯೊಳಗೆ ತೆರವುಗೊಳಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಅವರು ಹಂಪಿ ಪ್ರಾಧಿಕಾರದ ಆಯುಕ್ತರು, ಗಂಗಾವತಿ ತಹಸೀಲ್ದಾರ್ ಅವರಿಗೆ ಆದೇಶ ಮಾಡಿದ್ದಾರೆ .
ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಗಂಗಾವತಿ ತಾಲ್ಲೂಕಿನ 15 ಗ್ರಾಮಗಳು ವ್ಯಾಪ್ತಿಗೆ ಬರುತ್ತಿದ್ದು ಇಲ್ಲಿ ಅನಧಿಕೃತವಾಗಿ ಯಾವುದೇ ವ್ಯವಹಾರ ಮಾಡುವಂತಿಲ್ಲ .ಈ ಹಿಂದೆ ಸುಪ್ರೀಂಕೋರ್ಟ್ ಆದೇಶದ ಅನ್ವಯ ಹಂಪಿ ಪ್ರಾಧಿಕಾರದ 15 ಹಳ್ಳಿಗಳಲ್ಲಿ ಅನಧಿಕೃತವಾಗಿ ವಾಣಿಜ್ಯ ವ್ಯವಹಾರ ಮಾಡದಂತೆ ಆದೇಶ ಮಾಡಲಾಗಿತ್ತು .ವಿರುಪಾಪುರಗಡ್ಡಿಯಲ್ಲಿದ್ದ ಸುಮಾರು 28 ರೆಸಾರ್ಟ್ ಗಳನ್ನು ಹಂಪಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ತೆರವುಗೊಳಿಸಿದ್ದವು. ನಂತರ ಆನೆಗುಂದಿ ಹನುಮನಹಳ್ಳಿ ಸಣಾಪುರ ಜಂಗ್ಲಿ ರಂಗಾಪುರದ ರೈತರ ಪಟ್ಟಾ ಜಮೀನುಗಳಲ್ಲಿ ಅನಧಿಕೃತವಾಗಿ ರೆಸಾರ್ಟ್ ಹೋಟೆಲ್‌ಗಳು ಆರಂಭವಾಗಿದ್ದವು .
ಇದನ್ನೂ ಓದಿ: ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎನ್ನುವುದು ತಿರುಕನ ಕನಸು: ಸಚಿವ ಆರ್.ಅಶೋಕ್
ಈ ಮಧ್ಯೆ ಅನಧಿಕೃತ ರೆಸಾರ್ಟ್ ಗಳ ನಿರ್ಮಾಣಕ್ಕೆ ತಡೆ ನೀಡಬೇಕು ಮತ್ತು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳು ತಹಸೀಲ್ದಾರ್ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಆದೇಶ ಮಾಡಿದ್ದರು. ಆನೆಗೊಂದಿ ಭಾಗದ ಸ್ಥಳೀಯ ಜನರು ಮತ್ತು ರೆಸಾರ್ಟ್ ಮಾಲೀಕರು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರನ್ನು ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ಭೇಟಿಯಾಗಿ ನೂತನ ಮಾಸ್ಟರ್ ಪ್ಲಾನ್ ಬರುವ ತನಕ ರೆಸಾರ್ಟ್ ಹೋಟೆಲ್ ಗಳ ತೆರವು ಮಾಡದಂತೆ ಮನವಿ ಮಾಡಿಕೊಂಡಿದ್ದರು.
ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಮೌಖಿಕ ಆದೇಶ ನೀಡಿ ನೂತನ ಮಾಸ್ಟರ್ ಪ್ಲಾನ್ ಬರುವ ತನಕ ತೆರವು ಕಾರ್ಯ ತಡೆಯುವಂತೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಇದೀಗ ಅನಧಿಕೃತ ರೆಸಾರ್ಟ್ ಹೋಟೆಲ್ ತೆರವು ಮಾಡಿ ನಲವತ್ತೆಂಟು ಗಂಟೆ ಒಳಗೆ ಕ್ರಮ ವಹಿಸದ ಬಗ್ಗೆ ಮಾಹಿತಿ ನೀಡುವಂತೆ ತಹಸೀಲ್ದಾರ್ ತಾಲ್ಲೂಕ ಪಂಚಾಯಿತಿ ಇಒ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರ ಆಯುಕ್ತರು ಮತ್ತು ಜೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ .