Advertisement

Gangavathi: ಕ್ಲಿಫ್ ಜಂಪಿಂಗ್‌ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…

03:17 PM Dec 27, 2024 | Team Udayavani |

ಉದಯವಾಣಿ ಸಮಾಚಾರ
ಗಂಗಾವತಿ: ತುಂಗಭದ್ರಾ ನದಿಯ ವಾಟರ್‌ಫಾಲ್ಸ್‌ ಮತ್ತು ಸಾಣಾಪೂರ ಕೆರೆಯಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವ ಕ್ಲಿಪ್‌ ಜಂಪಿಂಗ್‌ ಜಲ ಸಾಹಸ ಕ್ರೀಡೆ ಪ್ರವಾಸಿಗರನ್ನು ಬಹಳಷ್ಟು ಸೆಳೆಯುತ್ತಿದೆ. ದಶಕಗಳಿಂದ ಇಲ್ಲಿಗೆ ಆಗಮಿಸುವ ಪ್ರವಾಸಿಗರು 20-30 ಅಡಿ ಎತ್ತರ ಪ್ರದೇಶದಿಂದ ತುಂಗಭದ್ರಾ ಮತ್ತು ಸಾಣಾಪೂರ ಕೆರೆಗೆ ಮೇಲಿಂದ ಜಂಪ್‌ ಮಾಡುತ್ತಿದ್ದು, ಅಗತ್ಯ ಸುರಕ್ಷತೆ ಕೊರತೆ ಕಾಣುತ್ತಿದೆ.

Advertisement

ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಅಗತ್ಯ ತರಬೇತಿ, ನಿಯಮಗಳ ಮೂಲಕ ಕ್ಲಿಪ್‌ ಜಂಪಿಂಗ್‌ ಜಲಸಾಹಸ ಕ್ರೀಡೆಗೆ ಅಗತ್ಯ ಸುರಕ್ಷತೆಗಳನ್ನು ಸ್ಥಳೀಯರಿಗೆ ಕಲಿಸುವ ಮೂಲಕ ಇನ್ನಷ್ಟು ಪ್ರವಾಸಿಗರನ್ನು ಸೆಳೆಯುವ ಅಗತ್ಯವಿದೆ.

ತುಂಗಭದ್ರಾ ನದಿಯಲ್ಲಿ ಪ್ರಾಕೃತಿಕವಾಗಿ ವಾಟರ್‌ ಫಾಲ್ಸ್‌ ಸೃಷ್ಟಿಯಾಗಿದ್ದು ಇಲ್ಲಿ ಆಳೆತ್ತರದ ಕಲ್ಲುಗಳು ನೀರಿನ ಹೊಡೆತಕ್ಕೆ ಸವೆದು ಕಲಾ ಶಿಲ್ಪಗಳಾಗಿವೆ. ಇವುಗಳ ಮೇಲಿಂದ ಪ್ರವಾಸಿಗರು 20-30 ಅಡಿಗಳ ಎತ್ತರದಿಂದ ಜಂಪ್‌ ಮಾಡಿ ಮಜಾ ಪಡೆಯುತ್ತಿದ್ದಾರೆ. ಇಲ್ಲಿ ಮತ್ತು ಸಾಣಾಪೂರ ಹತ್ತಿರ ಕೆರೆಯಲ್ಲಿ ಸ್ಥಳೀಯರು ಕ್ಲಿಪ್‌ ಜಂಪಿಂಗ್‌ ಮಾಡಿಸುವ ನೆಪದಲ್ಲಿ ಒಬ್ಬರಿಂದ 200-500 ರೂ.ಗಳವರೆಗೆ ಹಣ ವಸೂಲಿ ಮಾಡುತ್ತಾರೆ.

ಅಪಾಯಕಾರಿ ಸ್ಥಳದಲ್ಲಿ ಕ್ಲಿಪ್‌ ಜಂಪ್‌: ತುಂಗಭದ್ರಾ ನದಿಯ ವಾಟರ್‌ ಫಾಲ್ಸ್‌ ಹಾಗೂ ಕೆರೆಯಲ್ಲಿ ಕ್ಲಿಫ್‌ ಜಂಪಿಂಗ್‌ ಮಾಡಿಸುವ ಸ್ಥಳ ಆಳವಾದ ನೀರಿದೆ, ಕೋರೆಯಾಕಾರದ ಕಲ್ಲುಬಂಡೆಗಳು ಮತ್ತು ಬೃಹದಾಕಾರದ ಬಂಡೆಗಳ ಸಂದಿಗಳಿವೆ. ದಶಕದ ಹಿಂದೆ ಕ್ಲಿಫ್‌ ಜಂಪ್‌ ಮಾಡಿದ ಇಸ್ರೇಲ್‌ ದೇಶದ ಪ್ರಜೆಯೊಬ್ಬ ವಾಟರ್‌ ಫಾಲ್ಸ್‌ನ ಕಲ್ಲು ಸಂದಿಯಲ್ಲಿ ಸಿಲುಕಿ ನೀರಿನಲ್ಲಿ ಮೃತಪಟ್ಟಾಗ ಇಸ್ರೇಲ್‌ ದೇಶದ ಮಿಲಿಟರಿಯವರು ಆಗಮಿಸಿ ಮೃತನ ಶವ ಶೋಧಿಸಿ ತೆಗೆದುಕೊಂಡು ಹೋಗಿದ್ದಾರೆ.

Advertisement

ಜತೆಗೆ ಕ್ಲಿಪ್‌ ಜಂಪ್‌ ಮಾಡುವ ನದಿಯ ಪಾತ್ರದಲ್ಲಿ ಮೊಸಳೆಗಳು, ಸಂರಕ್ಷಿತ ವಲಯದ ನೀರುನಾಯಿಗಳು, ಆಮೆಗಳಿದ್ದು ಇಲ್ಲಿ ಕ್ಲಿಪ್‌ ಜಂಪ್‌ ಮಾಡಿಸುವ ಮೂಲಕ ನೀರನ್ನು ಆಶ್ರಯಿಸಿದ ಜಲಚರ ಪ್ರಾಣಿಗಳನ್ನು ಒಕ್ಕಲೆಬ್ಬಿಸಲಾಗಿದೆ. ಇಲ್ಲಿಗೆ ಯಥೇಚ್ಚವಾಗಿ
ಆಗಮಿಸುವ ಪ್ರವಾಸಿಗರು ಪ್ಲಾಸ್ಟಿಕ್‌ ಬ್ಯಾಗ್‌ಗಳಲ್ಲಿ ತರುವ ತಿಂಡಿ, ತೀರ್ಥ, ಮದ್ಯದ ಬಾಟಲ್‌ಗ‌ಳ ಘನತ್ಯಾಜ್ಯ ಕಸದಿಂದ ಇಡೀ ಪ್ರಕೃತಿ ಹಾಳಾಗುತ್ತಿದೆ.

ಎಲ್ಲೆಂದರಲ್ಲಿ ಮಲ ಮೂತ್ರ ವಿಸರ್ಜನೆ ಪರಿಣಾಮ ಇಡೀ ಪ್ರದೇಶ ಕೆಟ್ಟ ವಾಸನೆಯಿಂದ ಕೂಡಿದೆ. ಪ್ರವಾಸೋದ್ಯಮ ಇಲಾಖೆ ಅಗತ್ಯ ಸುರಕ್ಷತೆಯೊಂದಿಗೆ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಮೂಲಸೌಕರ್ಯ ಒದಗಿಸಿ ನದಿ-ಕಾಲುವೆಯ ಪ್ರಾಕೃತಿಕ ಸೌಂದರ್ಯಕ್ಕೆ ತೊಂದರೆಯಾಗದಂತೆ ಕ್ಲಿಪ್‌ ಜಂಪಿಂಗ್‌ ಸಾಹಸ ಜಲ ಕ್ರೀಡೆಗೆ ಅವಕಾಶ, ಸಾಣಾಪೂರ ಕೆರೆಯಲ್ಲಿ ಬೋಟಿಂಗ್‌ ಪ್ರವಾಸೋದ್ಯಮ ಆರಂಭಿಸಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಬೇಕಿದೆ.

ಆನೆಗೊಂದಿ-ಸಾಣಾಪೂರ ಭಾಗದಲ್ಲಿ ಹರಿಯುವ ತುಂಗಭದ್ರಾ ನದಿ ಹಾಗೂ ನದಿ ಪಾತ್ರ ಪ್ರಾಕೃತಿಕವಾಗಿ ಅತ್ಯಂತ ಸೊಗಸಾಗಿದ್ದು ಇಲ್ಲಿಯ ಜೀವ ಜಲಚರಗಳಿಗೆ ತೊಂದರೆಯಾಗದಂತೆ ಪ್ರವಾಸೋದ್ಯಮಕ್ಕೆ ಸರಕಾರ ಮತ್ತು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

ವಾಟರ್‌ಫಾಲ್ಸ್‌ ಹತ್ತಿರ ಸ್ಥಳೀಯರು ಪ್ರವಾಸಿಗರಿಂದ ಹಣ ಪಡೆದು ಕ್ಲಿಪ್‌ ಜಂಪಿಂಗ್‌ ಮತ್ತು ತೆಪ್ಪದಲ್ಲಿ ಬೋಟಿಂಗ್‌ ಮಾಡಿಸುತ್ತಿದ್ದು, ಇದು ಸುರಕ್ಷತೆಯಿಂದ ಕೂಡಿಲ್ಲ. ಇಲ್ಲಿ ಮೊಸಳೆಗಳು, ನೀರುನಾಯಿ ಸೇರಿ ಹಲವು ಜಲಚರಗಳಿದ್ದು ಇಲ್ಲಿ ಮಾನವ ಚಟುವಟಿಕೆ ನಿಷೇಧವಾಗಿದೆ. ನದಿಯಲ್ಲಿ ಕಲ್ಲು, ಬಂಡೆಗಳ ಸಂದಿಗಳಿದ್ದು ಮೇಲಿಂದ ಜಂಪ್‌ ಮಾಡಿ ಕಲ್ಲುಗಳ ಅಡಿಯಲ್ಲಿ ಸಿಲುಕಿ ಹಾಕಿಕೊಳ್ಳುವ ಅಪಾಯ ಹೆಚ್ಚಿದೆ. ಜಿಲ್ಲಾಡಳಿತ ಸಾಣಾಪೂರ ಕೆರೆಯಲ್ಲಿ ಅಗತ್ಯ ಸುರಕ್ಷತೆಯೊಂದಿಗೆ ಕ್ಲಿಪ್‌ ಜಂಪ್‌ ಹಾಗೂ ಬೋಟಿಂಗ್‌ ಆರಂಭಿಸಬೇಕು.
●ರಮೇಶ ಗೋರೆ ಪ್ರವಾಸಿಗ, ಬೆಂಗಳೂರು

■ ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next