Advertisement

ಅಂಬೇಡ್ಕರ್ ಫೋಟೋ ಗೆ ಅವಮಾನ ಘಟನೆ ಖಂಡಿಸಿ ಕರೆ ನೀಡಿದ್ದ ಗಂಗಾವತಿ ಬಂದ್ ಯಶಸ್ವಿ

05:53 PM Feb 10, 2022 | Team Udayavani |

ಗಂಗಾವತಿ: ಗಣರಾಜ್ಯೋತ್ಸವದ ಸಂದರ್ಭದಲ್ಲಿ  ರಾಯಚೂರು ನ್ಯಾಯಾಲಯದಲ್ಲಿ ಸಂವಿಧಾನಶಿಲ್ಪಿ ಡಾ|ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಜಿಲ್ಲಾ ನ್ಯಾಯಾಧೀಶ ಮಾಡಿದ ಅವಮಾನ ಖಂಡಿಸಿ ದಲಿತ ಹಿಂದುಳಿದ, ಅಲ್ಪಸಂಖ್ಯಾತ ಒಕ್ಕೂಟ ಮತ್ತು ಎಡಪಂಥೀಯ ಸಂಘಟನೆಗಳು ಗುರುವಾರ  ಕರೆ ನೀಡಿದ್ದ ಗಂಗಾವತಿ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದೆ.

Advertisement

ಬೆಳ್ಳಿಗ್ಗೆ 5.30 ರಿಂದ ಬಂದ್ ಗೆ ಕರೆ ನೀಡಿದ್ದ ಸಂಘಟನೆಗಳ ಮುಖಂಡರು ನೀಲಿ ಧ್ವಜಾ ಹಿಡಿದು ನಗರದ  ಪ್ರಮುಖ ವೃತ್ತ ರಸ್ತೆಗಳಲ್ಲಿ ಸಂಚರಿಸಿ ವ್ಯಾಪಾರಸ್ಥರಿಗೆ ಡಾ|ಅಂಬೇಡ್ಕರ್‌ಗೆ ಆಗಿರುವ ಅವಮಾನ ಇಡೀ ಭಾರತೀಯರಿಗೆ ಅವಮಾನವಾದಂತೆ ಆದ್ದರಿಂದ ಸ್ವಯಂ ಪ್ರೇರಣೆಯಿಂದ ಬಂದ್ ಮಾಡುವಂತೆ ಮನವಿ ಮಾಡುತ್ತಿದ್ದ ದೃಶ್ಯ ಕಂಡು ಬಂತು. ಕಂಪ್ಲಿ ರಸ್ತೆ, ಆನೆಗೊಂದಿ ರಸ್ತೆ, ಕೊಪ್ಪಳ, ಕನಕಗಿರಿ ಕಾರಟಗಿ ರಸ್ತೆಯಲ್ಲಿಯೇ ಬಸ್ ಟ್ರಾಕ್ಸ್, ಖಾಸಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅಲ್ಲಿಂದ ಪ್ರಯಾಣಿಕರು ತಮ್ಮ ಸಾಮಾನು ಹಾಗೂ ಮಕ್ಕಳ ಜತೆ ನಡೆದುಕೊಂಡು ಬಂದರು.

ಕೆಎಸ್ ಆರ್ ಟಿಸಿ ಬಸ್‌ಗಳು ಖಾಸಗಿ ವಾಹನಗಳ ಸಂಚಾರ ಸ್ಥಗಿತವಾಗಿತ್ತು. ಸರಕಾರಿ ಕಚೇರಿಗಳು ಕಾರ್ಯನಿರ್ವಹಿಸಿದವು. ಶಾಲಾಕಾಲೇಜುಗಳಿಗೆ ಶಿಕ್ಷಕರು ಮಾತ್ರ ಆಗಮಿಸಿದ್ದರೂ ವಿದ್ಯಾರ್ಥಿಗಳು ಗೈರಾಗಿದ್ದರು. ಆಟೋಗಳು ಎಂದಿನಂತೆ  ಸಂಚಾರವಿದ್ದರೂ ಪ್ರಯಾಣಿಕರ ಕೊರತೆ ಕಂಡು ಬಂತು. ತರಕಾರಿ, ಹಾಲು ಆಸ್ಪತ್ರೆ ಮತ್ತು  ಕೃಷಿಗೆ ಸಂಬಂಧಿಸಿದ ಅಂಗಡಿಗಳಿಗೆ ಹಾಗೂ ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಮತ್ತು ಗೊಬ್ಬರ ಕ್ರಿಮಿನಾಶಕ ಖರೀದಿಗೆ ಸಂಘಟಕರು ಅವಕಾಶ ಕಲ್ಪಿಸಿದ್ದರು.

Advertisement

ಮಧ್ಯಾಹ್ನ 11 ಗಂಟೆಗೆ ಶ್ರೀಚನ್ನಬಸವಸ್ವಾಮಿ ವೃತ್ತದಿಂದ ಬೃಹತ್ ಮೆರವಣಿಗೆ ನಗರದ ಶ್ರೀಕೃಷ್ಣದೇವರಾಯ ವೃತ್ತದ ವರೆಗೆ ಜರುಗಿತು. ಮಾರ್ಗ ಮಧ್ಯೆ ಜೈ ಭೀಮ್ ಹಾಗೂ ಕೃತ್ಯವೆಸಗಿದ ರಾಯಚೂರು ನ್ಯಾಯಾಧೀಶರಿಗೆ ಧಿಕ್ಕಾರದ ಘೋಷಣೆ ಕೂಗಲಾಯಿತು.

ಪ್ರತಿಭಟನೆಯಲ್ಲಿ ಪ್ರೋ. ಡಾ|ಲಿಂಗಣ್ಣ ಜಂಗಮರಳ್ಳಿ, ಪ್ರೋ. ಚಂದ್ರಶೆಖರ, ದಲಿತ, ಹಿಂದುಳಿದ ಅಲ್ಪಸಂಖ್ಯಾತರ ಹೋರಾಟ ಸಮಿತಿ ಹಾಗೂ ಎಡಪಂಥೀಯ ಸಂಘಟನೆಗಳ ಮುಖಂಡರಾದ ಜೆ.ಭಾರದ್ವಾಜ್, ದೊಡ್ಡಭೋಜಪ್ಪ, ಮರಿಯಪ್ಪ ಕುಂಟೋಜಿ, ನ್ಯಾಯವಾದಿ ಹುಸೇನಪ್ಪ ಹಂಚಿನಾಳ, ಹುಲಿಗೇಶ ದೇವರಮನೆ,ಮಾಗಿ ಹುಲುಗಪ್ಪ, ಶೇಖನಬಿ, ಹುಲುಗಪ್ಪ ಮಾಸ್ತರ, ನಿರುಪಾದಿ ಬೆಣಕಲ್, ಕೆ.ಮಂಜುನಾಥ, ಹಂಪೇಶ ಅರಿಗೋಲು, ಪರಂಧಾಮ, ನಾಗರಾಜ ಸಂಗಾಪೂರ, ವಸಂತ, ರವಿಬಾಬು, ವಿರೇಶ ಆರತಿ, ಶಂಕರ ಸಿದ್ದಾಪೂರ, ರತ್ನಮ್ಮ ಅಮದಿಹಾಳ, ಶೋಭಾಸಿಂಗ್, ರೇಣುಕಮ್ಮ, ಫಕೀರಮ್ಮ, ಹುಲಿಗೇಶ ಕೊಜ್ಜಿ ಸೇರಿ ನೂರಾರು ಕಾರ್ಯಕರ್ತರಿದ್ದರು.

ವಜಾಕ್ಕೆ ಆಗ್ರಹ : ಡಾ|ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಓದಿಕೊಂಡು ನ್ಯಾಯಾಧಿಶರಾಗಿರುವವರು ಅಂಬೇಡ್ಕರ್ ಪೋಟೋ ಇದ್ದರೆ ಧ್ವಜಾರೋಹಣ ಮಾಡುವುದಿಲ್ಲ ಎಂದು ಹೇಳುವ ಮೂಲಕ ಮನಸ್ಸಿನಲ್ಲಿರುವ ಕೊಳಕನ್ನು ಪ್ರದರ್ಶನ ಮಾಡಿದ ನ್ಯಾಯಾಧೀಶರನ್ನು ಸರಕಾರ ಕೂಡಲೇ ವಜಾ ಮಾಡಬೇಕು. ಗಣರಾಜ್ಯೋತ್ಸವದಲ್ಲಿ ನಾರಾಯಣಗುರುಗಳ ಸ್ಥಬ್ಧಚಿತ್ರ ಹಾಗೂ ರಾಯಚೂರು ಘಟನೆಯ ನಂತರ ಕೋಮುಶಕ್ತಿಗಳ ಬಗ್ಗೆ ಅಹಿಂದ ಯುವಕರು ಅಸಹಿಷ್ಣುತೆ ಹೊಂದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಆಕ್ಷೇಪವೆತ್ತುತ್ತಿರುವುದನ್ನು ಗಮನಿಸಿ ಕೋಮುಶಕ್ತಿಗಳು ಹಿಜಾಬ್ ಹಾಗೂ ಕೇಸರಿ ಶಾಲು ಷಡ್ಯಂತ್ರ ಎಬ್ಬಿಸಿದ್ದಾರೆ. ದೇಶದಲ್ಲಿ ಇನ್ನೂ ಮುಂದೆ ನೀಲಿ, ಕೆಂಪು, ಹಸಿರು, ಹಳದಿ ಬಣ್ಣ ಒಂದಾಗುವ ಕಾಲ ಬಂದಿದೆ. ಅಂಬೇಡ್ಕರ್, ನಾರಾಯಣಗುರು, ಬುದ್ಧ ಬಸವಣ್ಣ ಸೇರಿ ಶೋಷಿತರ ಪರವಾಗಿರುವ ಮಹಾನ್ ನಾಯಕರು ಹಾಗೂ ಸಂವಿಧಾನ ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದರೆ ಸುಮ್ಮನೆ ಇರುವುದಿಲ್ಲ. ಜನರಲ್ಲಿ ಜಾಗೃತಿ ಉಂಟಾಗಿದ್ದು ದೇವರ ಧರ್ಮ ಜಾತಿಯ ಹೆಸರಿನಲ್ಲಿ ಜನರನ್ನು ಒಡೆಯುವುದಕ್ಕೆ ಒಪ್ಪುವುದಿಲ್ಲ. ಸರಕಾರ ಕೂಡಲೇ ಅಂಬೇಡ್ಕರ್ ಪೋಟೋಗೆ ಅವಮಾನ ಮಾಡಿದವರಿಗೆ ಶಿಕ್ಷೆ ನೀಡಬೇಕು ಎಂದು ಪ್ರೋ. ಡಾ|ಲಿಂಗಣ್ಣ ಜಂಗಮರಳ್ಳಿ ಒತ್ತಾಯಿಸಿದರು .

Advertisement

Udayavani is now on Telegram. Click here to join our channel and stay updated with the latest news.

Next