ಗಂಗಾವತಿ: ಗಂಗಾವತಿ ಆರ್ಯವೈಶ್ಯ ಸಮಾಜದ ಅಧ್ಯಕ್ಷರ ಪದಚ್ಯುತಿಗಾಗಿ ಸಮಾಜದ ಪ್ರಮುಖರು ನಗರೇಶ್ವರ ದೇವಸ್ಥಾನದಲ್ಲಿ ನಡೆಸುತ್ತಿದ್ದ ಅನಿರ್ದಿಷ್ಟ ಹೋರಾಟಕ್ಕೆ ಮಹತ್ವದ ತಿರುವು ಬಂದಿದೆ.
ರವಿವಾರ ಬೆಳ್ಳಿಗ್ಗೆ ನಗರೇಶ್ವರ ದೇವಾಲದಯದಲ್ಲಿ ಹಮ್ಮಿಕೊಂಡಿದ್ದ ಅನಿರ್ಧಿಷ್ಟ ಹೋರಾಟ ಸ್ಥಳದಲ್ಲಿ ಸಮಾಜದವರ ಸಮ್ಮುಖದಲ್ಲಿ ರೂಪ ರಾಯಚೂರು ಅವರು ತಾವು ಇಂದಿನಿಂದ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾಗಿ ಸ್ವಯಂ ಘೋಷಿಸಿಕೊಂಡರು.
ಈ ಸಂದರ್ಭದಲ್ಲಿ ತಾವು ಸ್ವಯಂ ಘೋಷಿತ ಅಧ್ಯಕ್ಷರಾಗಿದ್ದು ಮುಂಬರುವ ದಿನಗಳಲ್ಲಿ ಸಮಸ್ತ ಆರ್ಯವೈಶ್ಯ ಸಮಾಜದ ಹಿರಿಯರು, ಪ್ರಮುಖರನ್ನು ಕಂಡು ಆಶೀರ್ವಾದ, ಸಲಹೆ ಮತ್ತು ಮಾರ್ಗದರ್ಶನ ಪಡೆದು ಸಮಾಜವನ್ನು ಸಂಘಟಿಸಿ ಅಭಿವೃದ್ಧಿ ಪಡಿಸಲಾಗುತ್ತದೆ. ಕಳೆದ 16 ವರ್ಷಗಳ ಹಿಂದೆಯೂ ದರೋಜಿ ಶ್ರೀರಂಗ ಅವರು ಸಹ ಸ್ವಯಂ ಘೋಷಿತ ಅಧ್ಯಕ್ಷರಾಗಿದ್ದು ಇದುವರೆಗೂ ಸಮಾಜದ ಮಹಾಸಭೆ ಕರೆದಿಲ್ಲ. ಲೆಕ್ಕಪತ್ರ ಒಪ್ಪಿಸಿಲ್ಲ. ಇದನ್ನು ಪ್ರತಿಭಟಿಸಿ ಅಧ್ಯಕ್ಷರ ಪದಚ್ಯುತಿ ಹಾಗೂ ಲೆಕ್ಕಪತ್ರ ಒಪ್ಪಿಸುವಂತೆ ನಗರೇಶ್ವರ ದೇವಾಲಯದ ಹೊರ ಆವರಣದಲ್ಲಿ ಕಳೆದ 20 ದಿನಗಳಿಂದ ಸಮಾಜದ ಮುಖಂಡರಾದ ದರೋಜಿ ವಸಂತಕುಮಾರ, ರಟ್ಟಿಹಳ್ಳಿ ಜಗದೀಶ ಹಾಗೂ ಸಿ.ಭಾಗ್ಯಮ್ಮ ಇತರೆ ಮುಖಂಡರ ನೇತೃತ್ವದಲ್ಲಿ ಶಾಂತಿಯುತ ಅನಿರ್ಧಿಷ್ಟ ಧರಣಿ ನಡೆಸಲಾಗುತ್ತಿದೆ. ಆದರೆ ಹೋರಾಟವನ್ನು ಹತ್ತಿಕ್ಕುವ ಷಡ್ಯಂತ್ರ ನಡೆಯುತ್ತಿದ್ದು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಮಾತಿಗೂ ದರೋಜಿ ಶ್ರೀರಂಗ ಅವರು ಕಿಮ್ಮತ್ತು ನೀಡುತ್ತಿಲ್ಲವಾದ್ದರಿಂದ ಸಮಾಜದ ಗೌರವ ಕಾಪಾಡಲು ಸ್ವಯಂ ಆಗಿ ಅಧ್ಯಕ್ಷರಾಗಿ ಘೋಷಣೆ ಮಾಡಿಕೊಂಡಿದ್ದು ಮುಂಬರುವ ದಿನಗಳಲ್ಲಿ ಇತರೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ ಎಂದರು.
ವಿಶೇಷ: ಆರ್ಯವೈಶ್ಯ ಸಮಾಜದ ಅಧ್ಯಕ್ಷರ ಪದಚ್ಯುತಿಗೆ ಆಗ್ರಹಿಸಿ ನಗರೇಶ್ವರ ನಡೆಸುತ್ತಿದ್ದ ಅನಿರ್ಧಿಷ್ಟ ಧರಣಿ ಹೋರಾಟದ ಸ್ಥಳಕ್ಕೆ ಆಗಮಿಸಿದ ರೂಪ ರಾಯಚೂರು ಅವರು ತಮ್ಮ ಮನೆಯಿಂದ ರಾಷ್ಟ್ರಧ್ವಜಾ, ಹಾರ ಮತ್ತು ಶಾಲು ತಂದು ಧರಣಿ ಸ್ಥಳದಲ್ಲಿ ತಾನು ಆರ್ಯವೈಶ್ಯ ಸಮಾಜದ ಸ್ವಯಂಘೋಷಿತ ಅಧ್ಯಕ್ಷರೆಂದು ಘೋಷಣೆ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಿಠಾಗಾರ ವೀರಭದ್ರಪ್ಪ, ಭಾಗ್ಯಮ್ಮ, ಚಂದ್ರಶೇಖರ, ಪ್ರಸಾದ, ಪಾನಘಂಟಿ ,ರಟ್ಟಿಹಳ್ಳಿ ಜಗದೀಶ ಸೇರಿ ಅನೇಕರಿದ್ದರು.