Advertisement

Gangavathi:ಆರೋಗ್ಯ ರಕ್ಷಾ ಸಮಿತಿಗೆ ಶಾಸಕ ರೆಡ್ಡಿ ಆಪ್ತರ ನೇಮಕ- ಮಾಜಿ ಸಚಿವ ಅನ್ಸಾರಿ ತರಾಟೆ

07:00 PM Jan 19, 2024 | Team Udayavani |

ಗಂಗಾವತಿ:ನಗರದ ಸರಕಾರಿ ಉಪವಿಭಾಗ ಆಸ್ಪತ್ರೆಯ ಆರೋಗ್ಯ ಸುರಕ್ಷತಾ ರಕ್ಷಾ ಸಮಿತಿಗೆ ಹಾಲಿ ಶಾಸಕ ಗಾಲಿ ಜನಾರ್ದನರೆಡ್ಡಿ ಶಿಫಾರಸ್ಸಿನ ಮೇರೆಗೆ 8 ಜನ ಕೆ ಆರ್ ಪಿ ಪಕ್ಷದ ಕಾರ್ಯಕರ್ತರನ್ನು ಸದಸ್ಯರನ್ನಾಗಿ ನೇಮಕ ಮಾಡಿ ವೈದ್ಯಾಧಿಕಾರಿ ಡಾ.ಈಶ್ವರ ಸವಡಿ ಜ.11 ರಂದು ಆದೇಶಪತ್ರಗಳನ್ನು ನಾಮನಿರ್ದೇಶನ ಸದಸ್ಯರಿಗೆ ವಿತರಿಸಿದ್ದರು. ಈ ಮಧ್ಯೆ ನಾಮನಿರ್ದೇಶನ ಮಾಡಿರುವುದು ಸರಿಯಲ್ಲ ಆಯ್ಕೆಪಟ್ಟಿಯನ್ನು ರದ್ದು ಪಡಿಸಿ ಪತ್ರಿಕಾ ಹೇಳಿಕೆ ನೀಡುವಂತೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ವೈದ್ಯಾಧಿಕಾರಿಗಳನ್ನು ಮನೆಗೆ ಕರೆಸಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆನ್ನಲಾಗಿದೆ.

Advertisement

ತಾಲೂಕು ಮಟ್ಟದ ಆರಾಧನಾ, ಆಶ್ರಯ, ಆರೋಗ್ಯ ಸುರಕ್ಷತಾ ರಕ್ಷಾ ಸಮಿತಿ ಸೇರಿ ಇನ್ನೂ ಹಲವು ಸಮಿತಿಗಳಿಗೆ ಸರಕಾರದ ಆದೇಶದ ಅನ್ವಯ ಅಯಾ ಕ್ಷೇತ್ರದ ಶಾಸಕರು ಅಧ್ಯಕ್ಷರಾಗಿರುತ್ತಾರೆ.ಸಮಿತಿಯ ಸದಸ್ಯರನ್ನು ಶಾಸಕರ ಶಿಫಾರಸ್ಸಿನಂತೆ ನೇಮಕ ಮಾಡಲಾಗುತ್ತದೆ. ಸ್ಥಳೀಯವಾಗಿ ಕೆಆರ್‌ಪಿ ಪಕ್ಷದ ಶಾಸಕರಿದ್ದು ಅವರು ಸದಸ್ಯರನ್ನು ನೇಮಕ ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲ. ಇದನ್ನು ಪ್ರಶ್ನಿಸಿ ಕೆಲ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಗಮನಕ್ಕೆ ತಂದಿದ್ದ ರಿಂದ ವೈದ್ಯಾಧಿಕಾರಿಗಳ ಜತೆ ಮಾತನಾಡಿ ಕಾನೂನಿಗೆ ವಿರುದ್ಧವಾಗಿ ಆರೋಗ್ಯ ಸುರಕ್ಷತಾ ರಕ್ಷಾ ಸಮಿತಿಗೆ ಒಂದೇ ರಾಜಕೀಯ ಪಕ್ಷದ ಕಾರ್ಯಕರ್ತರನ್ನು ನೇಮಕ ಮಾಡಿದ್ದು ನಿಯಮದ ಉಲ್ಲಂಘನೆ ಮಾಡಲಾಗಿದೆ ನಿಮ್ಮ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಪತ್ರ ಬರೆಯಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ನಿಯಮ ಬದಲಾವಣೆ: ಸ್ಥಳೀಯ ಶಾಸಕರು ಸೂಚಿಸುವವರನ್ನು ಆರೋಗ್ಯ ರಕ್ಷಾ ಸಮಿತಿಯ ಸದಸ್ಯರನ್ನಾಗಿ ಆಡಳಿತ ವೈದ್ಯಾಧಿಕಾರಿಗಳು ನೇಮಕ ಮಾಡಿಕೊಳ್ಳುತ್ತಿದ್ದರು. ಆದರೆ ನಿಯಮ ಬದಲಾಗಿದೆ. ಶಾಸಕರು ಸಮಿತಿಯ ಅಧ್ಯಕ್ಷರಾಗಿದ್ದು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಆಯುಕ್ತರು ಸೂಚಿಸುವವರನ್ನು ಆರೋಗ್ಯ ರಕ್ಷಾ ಸಮಿತಿಸದಸ್ಯರನ್ನಾಗಿ ನೇಮಕ ಮಾಡುವ ಹೊಸ ಪದ್ಧತಿ ಜಾರಿಯಾಗಿದ್ದು ಈ ಕುರಿತು ನಿಯಮ ಗೊತ್ತಿಲ್ಲದೇ ಗಂಗಾವತಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ನೇಮಕ ಮಾಡಿದ್ದು ತಮ್ಮ ಗಮನಕ್ಕೆ ಬಂದಿದ್ದು ಹೊಸ ನಿಯಮದಂತೆ ಸರಕಾರ ಸೂಚನೆ ಪಾಲನೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ವೈದ್ಯಾಧಿಕಾರಿಗಳನ್ನು ಸಂಪರ್ಕಿಸುವಂತೆ ಡಿಎಚ್‌ಓ ಡಾ.ಲಿಂಗರಾಜು ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next