Advertisement

ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಕೈ ಬಿಡುವಂತೆ ಮನವಿ

05:10 PM Oct 15, 2018 | |

ಗಂಗಾವತಿ: ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗೊಂದಿ ಹಳೆ ಮಂಡಲ ಪ್ರದೇಶ ಕೈ ಬಿಡುವಂತೆ ಒತ್ತಾಯಿಸಿ ವಿವಿಧ ಗ್ರಾಮಗಳ ಜನರು ಶಾಸಕ, ಸಂಸದರಿಗೆ ಮನವಿ ಸಲ್ಲಿಸಿದರು. ಈ ವೇಳೆ ಆನೆಗೊಂದಿ ರೈತ ಸಂಘದ ಅಧ್ಯಕ್ಷ ಸುದರ್ಶನ್‌ ವರ್ಮಾ, ವಕೀಲ ಎಚ್‌.ಸಿ. ಯಾದವ್‌, ಪರಶುರಾಮ ಗಡ್ಡಿ ಮಾತನಾಡಿ, 2002ರಿಂದ ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಆನೆಗೊಂದಿ, ಮಲ್ಲಾಪೂರ, ಸಂಗಾಪೂರ ಮತ್ತು ಸಾಣಾಪೂರ ಗ್ರಾಮ ಪಂಚಾಯತ್‌ ವ್ಯಾಪ್ತಿಯ 15 ಹಳ್ಳಿಗಳನ್ನು ಸೇರ್ಪಡೆ ಮಾಡುವ ಮೂಲಕ ಸರಕಾರ ಈ ಭಾಗದಲ್ಲಿ ಅಭಿವೃದ್ದಿ ಕಾರ್ಯ ನಡೆಯದಂತೆ ನಿಷೇಧ ಹೇರಿದೆ. ವೈಯಕ್ತಿಕ ಶೌಚಾಲಯ ಸೇರಿ ಮನೆಗೆ ವಿದ್ಯುತ್‌ ಸಂಪರ್ಕ, ಶಾಲಾ ಕಾಲೇಜು, ಕುಡಿಯುವ ನೀರಿನ ಕಾಮಗಾರಿ ರಸ್ತೆ ಏನೇ ಕಾಮಗಾರಿ ನಡೆಯಬೇಕಿದ್ದರೆ ಪ್ರಾಧಿಕಾರ ಇರುವ ಹೊಸಪೇಟೆಗೆ ಅಲೆದಾಡಬೇಕಿದೆ. 16 ವರ್ಷಗಳಿಂದ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯಲು ಪ್ರಾಧಿಕಾರದ ಅಧಿಕಾರಿಗಳು ಇನ್ನಿಲ್ಲದ ನಿಯಮಗಳನ್ನು ಮುಂದಿಟ್ಟು ಸ್ಥಗಿತವಾಗಲು ಕಾರಣರಾಗಿದ್ದಾರೆ. 

Advertisement

ಪ್ರವಾಸಿಗರು ಆಗಮಿಸುವ ಪ್ರದೇಶವಾಗಿದ್ದರೂ ಮೂಲಸೌಕರ್ಯ ಕಲ್ಪಿಸಲು ಆಗುತ್ತಿಲ್ಲ. ಹೊಸಪೇಟೆಯ ಖಾಸಗಿ ಹೋಟೆಲ್‌ ಮತ್ತು ರೆಸಾರ್ಟ್‌ ಮಾಲೀಕರ ಲಾಭಿಯಿಂದ ಪ್ರಾಧಿಕಾರ ಆನೆಗೊಂದಿ ಭಾಗದ ಜನರಿಗೆ ಅನ್ಯಾಯ ಮಾಡುತ್ತಿದೆ. ಹೊಸಪೇಟೆ ತಾಲೂಕಿನಲ್ಲಿ ಪ್ರಾಧಿಕಾರದ ವ್ಯಾಪ್ತಿಗೆ 14 ಹಳ್ಳಿಗಳು ಬರುತ್ತಿದ್ದು, ಇಲ್ಲಿ ಮಾತ್ರ ಖಾಸಗಿ ಸ್ಟಾರ್‌ ಹೊಟೇಲ್‌ಗ‌ಳು ರೆಸಾರ್ಟ್‌ಗಳು ತಲೆ ಎತ್ತಿವೆ. ಆನೆಗೊಂದಿ ವಿರೂಪಾಪೂರಗಡ್ಡಿ, ಸಾಣಾಪೂರ ಜಂಗ್ಲಿ ಇಲ್ಲಿ ಒಂದು ಗುಡಿಸಲು ನಿರ್ಮಿಸಬೇಕಾದರೂ ಪ್ರಾಧಿಕಾರದಿಂದ ನಿರಾಪೇಕ್ಷಣಾ ಪತ್ರ ಬೇಕು ಇದು ಮಲತಾಯಿ ಧೋರಣೆಯಾಗಿದೆ. ಪುರಾತನ ಕಾಲದಿಂದಲೂ ಇಲ್ಲಿರುವ ಸ್ಮಾರಕ ಗುಡಿಗುಂಡಾರಗಳನ್ನು ಸ್ಥಳೀಯರು ಸಂರಕ್ಷಣೆ ಮಾಡುತ್ತಿದ್ದು ಪ್ರಾಧಿಕಾರ ಏನು ಮಾಡಿಲ್ಲ. ಕಾರಣ ಅತ್ಯಂತ ಹಿಂದುಳಿದ ಆನೆಗೊಂದಿ ಹಳೆಯ ಮಂಡಲವನ್ನು ಪ್ರಗತಿಯ ವಾಹಿನಿಗೆ ತೆಗೆದುಕೊಂಡು ಹೋಗಲು ಕೂಡಲೇ ಪ್ರಾಧಿಕಾರ ವ್ಯಾಪ್ತಿಯಿಂದ ಕೈಬಿಡಬೇಕೆಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಸಿದ್ದರಾಮಯ್ಯ, ಆನೆಗೊಂದಿ ಭಾಗದ ನರಸಿಂಹಲು ಸಾಣಾಪೂರ, ದ್ಯಾಮಣ್ಣ, ಕಡೆಬಾಗಿಲು ಪ್ರಸಾದ, ಕೆ. ವೆಂಕಟೇಶ, ಪದ್ಮನಾಭರಾಜು, ಚಂದ್ರಶೇಖರ ಸುಂಕದ, ಮಲ್ಲಿಕಾರ್ಜುನಸ್ವಾಮಿ ಸೇರಿ ಅನೇಕರಿದ್ದರು. 

ರಾಜ್ಯ-ಕೇಂದ್ರ ಸರಕಾರಕ್ಕೆ ಮನವಿ
ಹಂಪಿ ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು ಇಲ್ಲಿರುವ ಸ್ಮಾರಕಗಳ ಸಂರಕ್ಷಣೆ ನಮ್ಮೆಲ್ಲರ ಮೇಲಿದೆ. ಹಂಪಿ ಅಭಿವೃದ್ಧಿ ಪ್ರಾಧಿಕಾರದ ರಚನೆ ಉದ್ದೇಶವೂ ಇದೇ ಆಗಿದೆ. ಆದರೆ ಕೆಲ ಅಧಿಕಾರಿಗಳು ಸ್ಥಳೀಯರನ್ನು ಮತ್ತು ಚುನಾಯಿತರನ್ನು ನಿರ್ಲಕ್ಷ್ಯ ಮಾಡಿ ಸಭೆ ಸಮಾರಂಭ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದು ಆನೆಗೊಂದಿ ಭಾಗಕ್ಕೆ ಅನ್ಯಾಯವಾಗಿದೆ. 2007ರಲ್ಲಿ ಕಾರಿಗನೂರು ಗ್ರಾಮವನ್ನು ಪ್ರಾಧಿಕಾರದಿಂದ ಕೈಬಿಡಲಾಗಿದ್ದು ಯಾವ ಮಾನದಂಡ ಅನುಸರಿಸಲಾಗಿದೆ ಎನ್ನುವುದನ್ನು ಪ್ರಾಧಿಕಾರದ ಮುಖ್ಯಸ್ಥರ ಜತೆ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿತ್ತದೆ. ಸ್ಥಳೀಯರ ಹಿತ ಕಾಪಾಡಲು ಸಿದ್ಧ.
 ಕರಡಿ ಸಂಗಣ್ಣ, ಸಂಸದರು

ಪ್ರಾಧಿಕಾರ ಅಡ್ಡಿ
ಆನೆಗೊಂದಿ ಹಳೆಯ ಮಂಡಲ ವ್ಯಾಪ್ತಿಯಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ಜನತೆಗೆ ಮೂಲಸೌಕರ್ಯ ಕಲ್ಪಿಸುವ ಯೋನೆಗಳಿಗೂ ಅಡ್ಡಿಯಾಗಿದೆ. ಕುಡಿಯುವ ನೀರು ರಸ್ತೆ ಶಾಲಾ ಕಾಲೇಜು ನಿರ್ಮಾಣಕ್ಕೂ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ. ಆದ್ದರಿಂದ ಪ್ರಾಧಿಕಾರ ವ್ಯಾಪ್ತಿಯಿಂದ ತಾಲೂಕಿನ 15 ಹಳ್ಳಿಗಳನ್ನು ಕೈಬಿಡುವಂತೆ ಸರಕಾರಕ್ಕೆ ಮನವಿ ಮಾಡಲಾಗುತ್ತದೆ.
 ಪರಣ್ಣ ಮುನವಳ್ಳಿ, ಶಾಸಕರು

Advertisement
Advertisement

Udayavani is now on Telegram. Click here to join our channel and stay updated with the latest news.

Next