Advertisement

Gangavathi: ರಸಗೊಬ್ಬರ-ಏಕ ಬೆಳೆ ಪದ್ಧತಿ ಕೈ ಬಿಡಲು ಸಲಹೆ

06:15 PM Nov 29, 2023 | Team Udayavani |

ಗಂಗಾವತಿ: ಭತ್ತ ಏಕಬೆಳೆ ಪದ್ಧತಿ ಹಾಗೂ ಯಥೇಚ್ಛವಾಗಿ ರಾಸಾಯನಿಕಗಳನ್ನು ಬಳಸುವು ದರಿಂದ ಮಣ್ಣಿನ ಆರೋಗ್ಯ ಹಾಳಾಗುತ್ತಿದ್ದು, ರಾಸಾಯನಿಕಗಳನ್ನು ಕಡಿಮೆ ಮಾಡಿ ಸಾವಯವ ಗೊಬ್ಬರ ಹೆಚ್ಚಾಗಿ ಬಳಸಬೇಕೆಂದು ಕೃಷಿ ಇಲಾಖೆಯ ಅಧಿಕಾರಿ ಪ್ರಕಾಶ ಹೇಳಿದರು.

Advertisement

ಅವರು ತಾಲೂಕಿನ ಮಲ್ಲಾಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದ ವತಿಯಿಂದ ಆತ್ಮ ಯೋಜನೆ ಅಡಿಯಲ್ಲಿ ರೈತರಿಗೆ ಬೇಸಿಗೆ ಹಂಗಾಮಿನಲ್ಲಿ ಭತ್ತದ ಬದಲು ಬೇರೆ ಬೆಳೆಗಳನ್ನು ಬೆಳೆಯುವುದು ಹಾಗೂ ಎಫ್‌ಐಡಿ ನೋಂದಣಿ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆ ಎದುರಾಗಿ ಬರ ಆವರಿಸಿದ್ದು, ಹಿಂಗಾರಿನಲ್ಲಿ ತುಂಗಭದ್ರಾ ಕಾಲುವೆಗಳಲ್ಲಿ ನೀರು ಹರಿಸುವುದು
ಅನುಮಾನವಿರುವುದರಿಂದ ಹಿಂಗಾರಿನಲ್ಲಿ ಭತ್ತದ ಬದಲಾಗಿ ಲಭ್ಯವಿರುವ ತೇವಾಂಶದಲ್ಲಿ ದ್ವಿದಳ ಧಾನ್ಯ ಹಾಗೂ ಹಸಿರೆಲೆ ಗೊಬ್ಬರದ ಬೆಳೆಗಳಾದ ಅಲಸಂದಿ, ಸೆಣಬು, ಧೈಂಚಾ, ಪಿಳ್ಳಿಪೆಸರು, ಸಾಸಿವೆ ಹಾಗೂ ಇನ್ನಿತರೆ ಬೆಳೆಗಳನ್ನು ಬೆಳೆದು ಬೆಳೆ ಪರಿವರ್ತನೆ ಪದ್ಧತಿ ಅನುಸರಿಸಬೇಕು.

ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆ, ಬೆಳೆನಷ್ಟ ಪರಿಹಾರ, ಪಿಎಂ ಕಿಸಾನ್‌, ಕೃಷಿ ಸಾಲ ಮತ್ತು ಇತರೆ ಯೋಜನೆಗಳ ಡಿಬಿಟಿ ಸೌಲಭ್ಯ ಪಡೆಯಲು ಕೃಷಿ ಇಲಾಖೆಯ ಪ್ರೂಟ್ಸ್‌ ತಂತ್ರಾಂಶದಲ್ಲಿ ಎಫ್‌ಐಡಿ ನೋಂದಣಿ ಕಡ್ಡಾಯವಾಗಿರುತ್ತದೆ. ಗಂಗಾವತಿ ಹೋಬಳಿಯಲ್ಲಿ ಇನ್ನೂ 2803 ಬಾಕಿ ಇದ್ದು, ಗ್ರಾಮವಾರು ಬಾಕಿ ಉಳಿದಿರುವ ರೈತರ ಪಟ್ಟಿಯನ್ನು ಎಲ್ಲಾ ಗ್ರಾಮ ಪಂಚಾಯಿತಿಗಳ ಸೂಚನಾಫಲಕದಲ್ಲಿ ಅಳವಡಿಲಾಗಿದ್ದು, ರೈತರು ತಮ್ಮ ಆಧಾರ್‌, ಬ್ಯಾಂಕ್‌ ಪಾಸ್‌ಬುಕ್‌ ಹಾಗೂ ಇತ್ತೀಚಿನ ಪಹಣಿ ಪತ್ರಿಕೆಗಳನ್ನು ಒದಗಿಸಿ ಎಫ್‌ಐಡಿ ನೋಂದಣಿ ಮಾಡಿಕೊಳ್ಳಬೇಕೆಂದರು.

ಸಹಾಯಕ ಕೃಷಿ ಅಧಿಕಾರಿ ಡಾ| ದೀಪಾ ಎಚ್‌. ಮಾತನಾಡಿ, ಕೃಷಿ ಇಲಾಖೆ ಯೋಜನೆಗಳಾದ ಕೃಷಿ ಪರಿಕರಗಳ ವಿತರಣೆ, ಸಸ್ಯ ಸಂರಕ್ಷಣೆ, ಕೃಷಿ ಯಾಂತ್ರೀಕರಣ, ಸೂಕ್ಷ್ಮ ನೀರಾವರಿ, ಕೃಷಿ ಸಂಸ್ಕರಣೆ ಮತ್ತು ಇತರೆ ಯೋಜನೆಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.

Advertisement

ಗ್ರಾಪಂ ಅಧ್ಯಕ್ಷ ಕೃಷ್ಣ ಆಲೂರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊನ್ನಪ್ಪ ನಾಯಕ, ಉಪಾಧ್ಯಕ್ಷ ಎಚ್‌.ಎಂ. ವಿರೂಪಾಕ್ಷಯ್ಯ, ಆತ್ಮ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಶಾರುಫ್‌ ಪಾಷಾ, ನಾಗರಾಜ ಅನಾಲಿಸ್ಟ್‌, ಶಹಾಬುದ್ದಿನ್‌, ಸಂಘದ ಕಾರ್ಯದರ್ಶಿ ನವೀನ್‌ ರಾಮಸಾಗರ, ಚನ್ನಯ್ಯ ಹಿರೇಮಠ, ಕೃಷಿ ಸಖಿ ಶ್ರೀದೇವಿ, ಗ್ರಾಮದ ಪ್ರಗತಿಪರ ರೈತರು, ಮಲ್ಲಾಪುರ, ರಾಂಪುರ, ಬಸವನದುರ್ಗಾ, ಲಕ್ಷ್ಮಿಪುರ, ಸಂಗಾಪುರ ಗ್ರಾಮದ ರೈತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next